
ಕನ್ನಡ ಬಿಗ್ಬಾಸ್ ಸೀಸನ್ 12 (Bigg Boss Kannada) ಏಳನೇ ವಾರ ಚಾಲ್ತಿಯಲ್ಲಿದೆ. ಶೋನಲ್ಲಿ ಗಿಲ್ಲಿ ಇರುವುದರಿಂದಾಗಿ ಒಂದಷ್ಟು ನಗು, ಮನರಂಜನೆ ಸಿಗುತ್ತಿದೆ. ಕನ್ನಡ ಬಿಗ್ಬಾಸ್ ಪ್ರಾರಂಭಕ್ಕೆ ಕೆಲವೇ ವಾರಗಳ ಮುಂಚೆ ತೆಲುಗು ಬಿಗ್ಬಾಸ್ ಪ್ರಾರಂಭವಾಯ್ತು. ಈ ಬಾರಿ ಒಂಬತ್ತನೇ ಸೀಸನ್ ನಡೆಯುತ್ತಿದೆ. ಈ ಬಾರಿ ಕನ್ನಡದ ಇಬ್ಬರು ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿದ್ದಾರೆ. ಸಂಜನಾ ಗಲ್ರಾನಿ ಮತ್ತು ನಟಿ ತನುಜಾ ಗೌಡ. ಇಬ್ಬರೂ ಸಹ ಚೆನ್ನಾಗಿಯೇ ಆಟವಾಡುತ್ತಿದ್ದಾರೆ. ತೆಲುಗು ಬಿಗ್ಬಾಸ್ ಈ ಬಾರಿ ತುಸು ಹೆಚ್ಚೇ ಗಮನ ಸೆಳೆಯುತ್ತಿದೆ.
ಕನ್ನಡ ಬಿಗ್ಬಾಸ್ನಲ್ಲಿ ಕಳೆದ ವಾರ ಯಾವ ಟಾಸ್ಕ್ ಸಹ ಇರಲಿಲ್ಲ, ಬದಲಿಗೆ ಪತ್ರಗಳ ಆಟ ನಡೆದಿತ್ತು. ಒಬ್ಬರ ವಿರುದ್ಧ ಇನ್ನೊಬ್ಬರು ತಂತ್ರ-ಕುತಂತ್ರ ಮಾಡುತ್ತಾ ಪತ್ರಗಳನ್ನು ತಪ್ಪಿಸಿದರು. ಈ ವಾರ ಕೆಲವು ಟಾಸ್ಕ್ಗಳನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ಅತ್ತ ತೆಲುಗಿನಲ್ಲಿ ಈ ವಾರ ಸ್ಪರ್ಧಿಗಳನ್ನು ರಾಜ-ರಾಣಿ, ಕಮಾಂಡರ್ ಮತ್ತು ಸೇವಕರನ್ನಾಗಿ ವಿಗಂಡಿಸಿ ಆಟ ಆಡಿಸಲಾಗುತ್ತಿದೆ. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಆಡುತ್ತಿರುವ ರೀತಿ ಪ್ರೇಕ್ಷಕರಿಗೆ ಖುಷಿ ಕೊಡುತ್ತಿದೆ. ಒಂದಕ್ಕಿಂತಲೂ ಒಂದು ತಮಾಷೆಯ ಸನ್ನಿವೇಶಗಳನ್ನು ಸ್ಪರ್ಧಿಗಳು ಸೃಷ್ಟಿಸುತ್ತಿದ್ದಾರೆ. ಭರಪೂರ ಮನರಂಜನೆ ನೀಡುತ್ತಿದ್ದಾರೆ.
ವಿಶೇಷವಾಗಿ ಇಮಾನ್ಯುಯೆಲ್, ಸುಮನ್, ತನುಜ, ಸಂಜನಾ ಇನ್ನೂ ಕೆಲವರು ಈ ಟಾಸ್ಕ್ ಅನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಯಾವ ಸ್ಪರ್ಧಿಗೂ ಹರ್ಟ್ ಆಗದಂತೆ, ಬದಲಿಗೆ ಒಬ್ಬರಿಗೊಬ್ಬರು ಸೇರಿ ತಮಾಷೆ ಮಾಡುತ್ತಾ, ನೋಡುಗರಿಗೂ ತಮಾಷೆ ಎನ್ನಿಸುವಂತೆ ಆಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕನ್ನಡ ಬಿಗ್ಬಾಸ್ನಲ್ಲಿ ಕಾಲೇಜು ಟಾಸ್ಕ್ ನೀಡಲಾಗಿತ್ತು. ಭರಪೂರ ಮನರಂಜನೆ ಮಾಡಲು ಅವಕಾಶ ಇದ್ದ ಟಾಸ್ಕ್ ಅದಾಗಿತ್ತು. ಆದರೆ ಗಿಲ್ಲಿಯ ಹೊರತಾಗಿ ಇನ್ಯಾರೂ ಸಹ ಆ ಬಗ್ಗೆ ಗಮನವೇ ಹರಿಸಲಿಲ್ಲ. ಹಿಂದೆ ಬಿಗ್ಬಾಸ್ ಮನೆಯಲ್ಲಿ ಸ್ಕೂಲ್ ಟಾಸ್ಕ್ ಬಂದಾಗ ಕೆಲವು ಸ್ಪರ್ಧಿಗಳು ಅದ್ಭುತವಾಗಿ ಆಡಿದ್ದರು. ಕುರಿ ಪ್ರತಾಪ್ ಅವರಿದ್ದ ಸೀಸನ್ನಲ್ಲಂತೂ ಸ್ಕೂಲ್ ಟಾಸ್ಕ್ ಸಖತ್ ಹೈಲೆಟ್ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಕಾಲೇಜು ಟಾಸ್ಕ್ ಸಪ್ಪೆ ಎನಿಸಿದ್ದು ಸುಳ್ಳಲ್ಲ.
ಇದನ್ನೂ ಓದಿ:ಬಿಗ್ಬಾಸ್ ಗೌತಮಿ, ರಿಷಿ ನಟನೆಯ ಹೊಸ ಸಿನಿಮಾ ಮುಹೂರ್ತ: ವಿಡಿಯೋ
ತೆಲುಗು ಬಿಗ್ಬಾಸ್ನಲ್ಲಿ ಈ ವಾರ ಮನರಂಜನೆ ಚೆನ್ನಾಗಿ ಆಯ್ತೆಂದ ಮಾತ್ರಕ್ಕೆ ಪ್ರತಿ ಎಪಿಸೋಡ್ನಲ್ಲೂ ಇದೇ ಮುಂದುವರೆಯುತ್ತದೆ ಎಂದೇನೂ ಇಲ್ಲ. ಅಲ್ಲಿಯೂ ಸಹ ಜಗಳ, ಪರಸ್ಪರ ಕಾಲೆಳೆತ ಎಲ್ಲವೂ ಇದೆ. ಆದರೆ ಮನರಂಜನೆಗೆ ಅವಕಾಶ ಇರುವ ಟಾಸ್ಕ್ ಸಿಕ್ಕರೆ ಎಲ್ಲ ಸ್ಪರ್ಧಿಗಳು ಒಬ್ಬರಿಗೊಬ್ಬರು ಪೂರಕವಾಗಿ ಹಾಸ್ಯ, ತಮಾಷೆಯ ಸನ್ನಿವೇಶಗಳ ಸೃಷ್ಟಿಗೆ ತೊಡಗುತ್ತಾರೆ. ಆದರೆ ಕನ್ನಡದಲ್ಲಿ ಇದಕ್ಕೆ ವಿರುದ್ಧ ವಾತಾವರಣ ಇದ್ದಂತಿದೆ. ಗಿಲ್ಲಿ ತುಸು ಹೆಚ್ಚು ಯಾರ ಬಗ್ಗೆಯಾದರೂ ಕಾಮಿಡಿ ಮಾಡಿದರೆ ಅದನ್ನೇ ಹಿಡಿದು ಜಗಳವಾಡುತ್ತಾರೆ, ನಾಮಿನೇಟ್ ಮಾಡಲು ಕಾರಣವಾಗಿ ನೀಡುತ್ತಾರೆ ಕೆಲ ಸ್ಪರ್ಧಿಗಳು.
ತೆಲುಗು ಬಿಗ್ಬಾಸ್ ಪ್ರಾರಂಭವಾದ ಆರಂಭದ ಕೆಲ ವರ್ಷ ಅಷ್ಟೇನೂ ಜನಪ್ರಿಯತೆ ಸಿಕ್ಕಿರಲಿಲ್ಲ. ನಿರೂಪಕರು ಸಹ ಬದಲಾವಣೆ ಆದರು. ಜೂ ಎನ್ಟಿಆರ್ ಸಹ ನಿರೂಪಕರಾಗಿ ಬಂದು ಹೋದರೂ ಸಹ ಟಿಆರ್ಪಿ ಎದ್ದಿರಲಿಲ್ಲ. ಆಯೋಜಕರು, ಸ್ಪರ್ಧಿಗಳ ಆಯ್ಕೆ ವಿಷಯದಲ್ಲಿ ಕೆಲ ಬದಲಾವಣೆ ತಂದರು. ವಿಶೇಷವಾಗಿ, ಹಾಸ್ಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕೊಟ್ಟರು. ಬಳಿಕ ಶೋ ಹಿಟ್ ಆಗಲು ಆರಂಭವಾಯ್ತು. ಕಳೆದ ಕೆಲ ಸೀಸನ್ಗಳಿಂದ ತೆಲುಗಿನ ಅತಿ ಹೆಚ್ಚು ಟಿಆರ್ಪಿ ಶೋಗಳಲ್ಲಿ ಒಂದಾಗಿದೆ ತೆಲುಗು ಬಿಗ್ಬಾಸ್.
ಕನ್ನಡದ ಬಿಗ್ಬಾಸ್ ಸ್ಪರ್ಧಿಗಳು ಕೆಲವರಲ್ಲಿ ನಾವು ಮನೆಯಲ್ಲಿ ಇರುವುದೇ ಜಗಳ ಮಾಡಲು, ಅವಶ್ಯಕತೆ ಇಲ್ಲದಲ್ಲೆಲ್ಲ ‘ಸ್ಟ್ಯಾಂಡ್’ ತೆಗೆದುಕೊಳ್ಳಲು ಎಂಬಂತೆ ಭಾವಿಸಿದಂತಿದೆ. ಪರಸ್ಪರರ ವ್ಯಕ್ತಿತ್ವವನ್ನು ಜಡ್ಜ್ ಮಾಡುವುದು, ಅವಕಾಶ ಸಿಕ್ಕಾಗೆಲ್ಲ ಇತರರ ವ್ಯಕ್ತಿತ್ವಗಳಲ್ಲಿನ ಹುಳುಕುಗಳನ್ನು ಹೇಳುವುದು ಇದೇ ಆಗಿದೆ. ಜನರಿಗೆ ಜಗಳ ನೋಡುವುದಕ್ಕಿಂತಲೂ ನಗುವುದು ಹೆಚ್ಚು ಇಷ್ಟ ಎಂಬುದನ್ನು ಕೆಲ ಸ್ಪರ್ಧಿಗಳು ಮರೆತಂತಿದ್ದಾರೆ. ಸ್ವತಃ ಬಿಗ್ಬಾಸ್ ಸ್ಪರ್ಧಿಗಳಿಗೆ ತಮ್ಮ ಪ್ರತಿಭೆ ತೋರಿಸುವ ಅವಕಾಶ ಮಾಡಿಕೊಟ್ಟರೂ ಸಹ, ಕೆಲ ಸ್ಪರ್ಧಿಗಳು ಅದನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿಲ್ಲ ಅನಿಸುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ