‘ಬಿಗ್ ಬಾಸ್’ ಎಲ್ಲಾ ಭಾಷೆಗಳಲ್ಲೂ ಜನಪ್ರಿಯತೆ ಪಡೆದುಕೊಂಡಿರೋ ರಿಯಾಲಿಟಿ ಶೋ. ಕನ್ನಡ, ಹಿಂದಿ, ತೆಲುಗು ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ. ಬೇರೆ ಬೇರೆ ವಾಹಿನಿಗಳಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತದೆ. 100 ದಿನಕ್ಕೂ ಹೆಚ್ಚು ಕಾಲ ನಡೆಯುವ ಈ ಆಟ ನೋಡೋಕೆ ದೊಡ್ಡ ವೀಕ್ಷಕ ವರ್ಗ ಇದೆ. ಪ್ರತಿ ವರ್ಷ ನಿಯಮಗಳಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಆಟ ನಡೆಸಲಾಗುತ್ತದೆ. ಈಗ ತೆಲುಗು ಬಿಗ್ ಬಾಸ್ (Bigg Boss) ಹೊಸ ಸೀಸನ್ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈ ವರ್ಷ ಹೊಸ ನಿಯಮ, ಹೊಸ ನಿರೂಪಕನೊಂದಿಗೆ ಆಟ ಬರುತ್ತಿದೆ ಎನ್ನಲಾಗಿದೆ.
ತೆಲುಗಿನಲ್ಲಿ ಈಗಾಗಲೇ ಆರು ಸೀಸನ್ಗಳು ಪೂರ್ಣಗೊಂಡಿವೆ. ಈಗ ಏಳನೇ ಸೀಸನ್ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಜೂನ್ನಿಂದ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಜನಪ್ರಿಯ ಕಲಾವಿದರನ್ನು ಮನೆ ಒಳಗೆ ಕಳುಹಿಸುವ ಆಲೋಚನೆಯಲ್ಲಿ ಚಿತ್ರತಂಡದವರು ಇದ್ದಾರೆ. ಈ ಬಾರಿ ಹೊಸ ನಿಯಮಗಳನ್ನು ಕೂಡ ತರಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: Sania Mirza: ಬಿಗ್ ಬಾಸ್ ವಿನ್ನರ್ ಎಂಸಿ ಸ್ಟಾನ್ಗೆ ಲಕ್ಷ ಮೌಲ್ಯದ ಶೂ ಗಿಫ್ಟ್ ಕೊಟ್ಟ ಸಾನಿಯಾ ಮಿರ್ಜಾ
ಜುಲೈ ವೇಳೆಗೆ ಸ್ಪರ್ಧಿಗಳ ಆಯ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸೆಪ್ಟೆಂಬರ್ ವೇಳೆಗೆ ಹೊಸ ಸೀಸನ್ ಶುರು ಆಗಲಿದೆ. ಜನಪ್ರಿಯ ಕಲಾವಿದರ ಕಾಲ್ಶೀಟ್ ಬೇಕು ಎಂದರೆ ಮೊದಲೇ ಎಲ್ಲರನ್ನೂ ಸಂಪರ್ಕಿಸಬೇಕು. ಹೊಸ ಸಿನಿಮಾ ಒಪ್ಪಿಕೊಳ್ಳದಂತೆ ಕೋರಿಕೊಳ್ಳಬೇಕು. ಹೀಗಾಗಿ, ಜೂನ್ನಲ್ಲೇ ಎಲ್ಲರನ್ನೂ ಸಂಪರ್ಕಿಸಲಾಗುತ್ತಿದೆ. ಒಂದೊಮ್ಮೆ ಅವರು ಮನೆ ಒಳಗೆ ಹೋಗಲು ಒಪ್ಪದೇ ಇದ್ದರೆ ಬೇರೆ ಕಲಾವಿದರ ಆಯ್ಕೆ ಅನಿವಾರ್ಯ ಆಗುತ್ತದೆ.
ಈ ರೀತಿಯ ಶೋಗಳಿಗೆ ಆ್ಯಂಕರ್ ತುಂಬಾನೇ ಮುಖ್ಯ. ಸದ್ಯ ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಆದರೆ, ಈ ಮೊದಲ ಸೀಸನ್ಗೆ ಟಿಆರ್ಪಿ ಕುಗ್ಗಿದೆ. ನಿರೂಪಕರನ್ನು ಬದಲಾಯಿಸಿ ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಕಾರಣಕ್ಕೆ ಈ ಬಾರಿ ನಿರೂಪಕರ ಬದಲಾವಣೆ ಖಚಿತ ಎನ್ನಲಾಗುತ್ತಿದೆ. ರಾಣಾ ದಗ್ಗುಬಾಟಿ ಅವರು ಹೊಸ ಶೋ ನಡೆಸಿಕೊಡೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ