ಬಿಗ್ಬಾಸ್ ಕನ್ನಡ ಸೀಸನ್ 10 (Bigg Boss) ಪ್ರಾರಂಭವಾದಾಗ ಮೊದಲೆರಡು ವಾರ ಡ್ರೋನ್ ಪ್ರತಾಪ್ ಎಲ್ಲರಿಗೂ ಟಾರ್ಗೆಟ್ ಆಗಿದ್ದರು. ಹೀಗಳಿಕೆ, ವ್ಯಂಗ್ಯಕ್ಕೆಲ್ಲ ಅವರೇ ವಸ್ತುವಾಗಿದ್ದರು. ಮಾತ್ರವಲ್ಲ ಮೊದಲ ವಾರ ಅಸಮರ್ಥರ ಗುಂಪಿನಲ್ಲಿದ್ದ ಅವರನ್ನು ಸೇವೆಗೂ ಬಳಸಿಕೊಳ್ಳಲಾಗಿತ್ತು. ಆದರೆ ಸುದೀಪ್ ಅವರು ಸಣ್ಣದಾಗಿ ಬಿಸಿ ಮುಟ್ಟಿಸಿದ ಬಳಿಕ ಡ್ರೋನ್ ಬಗೆಗಿನ ವ್ಯಂಗ್ಯ ಕಡಿಮೆ ಆಗಿದೆ. ಆದರೂ ಸಹ, ಸ್ಪಷ್ಟವಾಗಿ ಅಂದುಕೊಂಡದ್ದನ್ನು ಹೇಳಲಾರದ, ದೊಡ್ಡ ದನಿಯಲ್ಲಿ ಮಾತನಾಡಲಾರದ, ಆತ್ಮವಿಶ್ವಾಸದ ಕೊರತೆಯುಳ್ಳ ವ್ಯಕ್ತಿತ್ವದ ಡ್ರೋನ್ ಪ್ರತಾಪ್ ಅವರನ್ನು ಮನೆಯ ಮಂದಿ ಈಸಿ ಟಾರ್ಗೆಟ್ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಮತ್ತೆ ಮೂಡುವಂಥಹಾ ಘಟನೆ ನಡೆದಿದೆ.
ಭಾಗ್ಯಶ್ರೀ, ಡ್ರೋನ್ ಪ್ರತಾಪ್, ಕಾರ್ತಿಕ್, ತನಿಷಾ, ಮೈಖಲ್, ಸ್ನೆಹಿತ್, ವಿನಯ್ ಅವರುಗಳೂ ಎಲಿಮಿನೇಶನ್ಗೆ ನಾಮಿನೇಟ್ ಆಗಿದ್ದಾರೆ. ನೀತು ಹಾಗೂ ಇಶಾನಿ ಅವರುಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ನೇರವಾಗಿ ನಾಮಿನೇಟ್ ಆಗಿರುವ ನೀತು ಹಾಗೂ ಇಶಾನಿಯನ್ನು ಹೊರತುಪಡಿಸಿ ಉಳಿದವರಲ್ಲಿ ಒಬ್ಬ ಅದೃಷ್ಟಶಾಲಿಯನ್ನು ನಾಮಿನೇಷನ್ನಿಂದ ಪಾರು ಮಾಡುವ ಟಾಸ್ಕ್ ಒಂದನ್ನು ಬಿಗ್ಬಾಸ್ ಆಡಿಸಿದರು. ಟಾಸ್ಕ್ನಂತೆ ನಾಮಿನೇಟ್ ಆಗಿರುವ ಸದಸ್ಯರು, ತಮ್ಮನ್ನು ನಾಮಿನೇಟ್ ಮಾಡಿರಬಹುದಾದ ಸದಸ್ಯರ ಹೆಸರುಗಳನ್ನು ಸರಿಯಾಗಿ ಅಂದಾಜು ಮಾಡಿ ಹೇಳಿದರೆ ಅವರಿಗೆ ನಾಮಿನೇಷನ್ನಿಂದ ಮುಕ್ತಿ. ಈ ಟಾಸ್ಕ್ನಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಅವರುಗಳು ತಮ್ಮನ್ನು ನಾಮಿನೇಟ್ ಮಾಡಿದವರ ಹೆಸರನ್ನು ಬಹುತೇಕ ಸರಿಯಾಗಿ ಹೇಳಿದರು. ಹಾಗಾಗಿ ಇಬ್ಬರಿಗೂ ಮನೆ ಮಂದಿಯೊಟ್ಟಿಗೆ ಸಂವಾದ ಏರ್ಪಡಿಸಿ ಮನೆ ಮಂದಿಯೇ ವಿನ್ನರ್ ಅನ್ನು ತೀರ್ಮಾನಿಸುವಂತೆ ಹೇಳಲಾಯ್ತು.
ಇದನ್ನೂ ಓದಿ:ಬಿಗ್ಬಾಸ್ ಮನೆ ಮಂದಿಗೆ ತರಾಟೆ: ಹಿಂದೆಂದೂ ಬಳಸದ ಅಧಿಕಾರ ಬಳಸಿದ ಸುದೀಪ್
ಸಂವಾದದ ಆರಂಭದಲ್ಲಿ ವಿನಯ್ ಕೆಲವು ಆರೋಪಗಳನ್ನು ಡ್ರೋನ್ ಪ್ರತಾಪ್ ಮೇಲೆ ಮಾಡಿದರು. ಸದಾ ಗೊಂದಲದಲ್ಲಿರುತ್ತಾನೆ, ದ್ವಿ-ವ್ಯಕ್ತಿತ್ವವುಳ್ಳ ವ್ಯಕ್ತಿ, ಡ್ಯಾನ್ಸ್ ಮಾಡುತ್ತಾ ಹೀರೋ ಆಗಲು ನೋಡುತ್ತಾನೆ ಎಂಬ ಕೆಲವು ಆರೋಪಗಳನ್ನು ಮಾಡಿದರು. ಪ್ರತಾಪ್ ಸಹ, ನಾನು ಸಿಟ್ಟು ಮಾಡಿಕೊಳ್ಳಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ತಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆಯಷ್ಟೆ ಮಾತನಾಡಿದರು. ವಿರೋಧಿಯ ಅವಗುಣಗಳ ಪಟ್ಟಿ ಮಾಡಲಿಲ್ಲ. ಆ ನಂತರ ಮನೆಯ ಸದಸ್ಯರು ಇಬ್ಬರಿಗೂ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವಂತೆ ಸೂಚಿಸಲಾಯ್ತು. ಆ ಸಮಯದಲ್ಲಿ ಹಲವರು ಡ್ರೋನ್ ಪ್ರತಾಪ್ಗೆ ಮಾತ್ರವೇ ಪ್ರಶ್ನೆ ಕೇಳಿದರು. ನಮ್ರತಾ, ತುಕಾಲಿ ಸಂತು ಅವರುಗಳಂತೂ ಪೂರ್ವನಿರ್ಧಾರಿತವಾಗಿ ಸಿಟ್ಟಿನಿಂದಲೇ ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳ ಸತತ ದಾಳಿಯಿಂದ ಕಂಗಾಲಾದ ಪ್ರತಾಪ್ ಕೆಲವಕ್ಕೆ ಉತ್ತರಿಸಿದರು. ಪ್ರತಾಪ್ರ ಉತ್ತರವನ್ನು ಸ್ವೀಕರಿಸದೆ ಮತ್ತೆ ಪ್ರಶ್ನೆಗಳೇ ಎದುರಿನಿಂದ ತೂರಿಬಂದವು. ವಿನಯ್ಗೆ ಯಾರೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಿಲ್ಲ.
ಅಂತಿಮವಾಗಿ ಮನೆಯ ಸದಸ್ಯರೆಲ್ಲ ಸೇರಿ ಏಕಪಕ್ಷೀಯವಾಗಿ ವಿನಯ್ ಅನ್ನು ನಾಮಿನೇಷನ್ನಿಂದ ಪಾರು ಮಾಡಿದರು. ಡ್ರೋನ್ ಪ್ರತಾಪ್ ಅನ್ನು ನಾಮಿನೇಷನ್ನಲ್ಲಿಯೇ ಉಳಿಸಿದರು. ಸಂವಾದದ ಬಳಿಕ, ನೀವು ನನಗೆ ಮತಹಾಕಲಿಲ್ಲ ಎಂಬ ಬೇಸರ ನನಗಿಲ್ಲ ಎಂದರು ಡ್ರೋನ್. ಭಾಗ್ಯಶ್ರೀ, ಪ್ರತಾಪ್, ಕಾರ್ತಿಕ್, ತನಿಷಾ, ಮೈಖಲ್, ಸ್ನೆಹಿತ್, ನೀತು, ಇಶಾನಿ ಅವರುಗಳು ನಾಮಿನೇಷನ್ನಲ್ಲಿದ್ದು ಇವರಲ್ಲಿ ಒಬ್ಬರು ಈ ವಾರ ಹೊರಗೆ ಹೋಗಲಿದ್ದಾರೆ. ಬಿಗ್ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:28 pm, Tue, 24 October 23