‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಅದ್ದೂರಿಯಾಗಿ ಆರಂಭ ಆಗಿದೆ. ಸಿನಿಮಾ, ಕಿರುತೆರೆ, ಸೋಶಿಯಲ್ ಮೀಡಿಯಾ ಮುಂತಾದ ಕ್ಷೇತ್ರದಲ್ಲಿ ಸದ್ದು ಮಾಡಿದ ವ್ಯಕ್ತಿಗಳು ಬಿಗ್ ಬಾಸ್ ಅಖಾಡಕ್ಕೆ ಬಂದಿದ್ದಾರೆ. ಕ್ರಿಕೆಟರ್ ಆಗಬೇಕು ಅಂತ ಕನಸು ಕಂಡ ತ್ರಿವಿಕ್ರಮ್ ಅವರು ಕೂಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಅವರಿಗೆ ಸೀರಿಯಲ್ ನಟ ಶಿಶಿರ್ ಅವರು ಪೈಪೋಟಿ ನೀಡಿದ್ದಾರೆ. ಅನುಷಾ ರೈ, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಧನರಾಜ್, ಗೌತಮಿ ಜಾಧವ್, ಭವ್ಯಾ ಗೌಡ, ಯಮುನಾ ಶ್ರೀನಿಧಿ ಮುಂತಾದವರು ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಝಗಮಗಿಸುವ ವೇದಿಕೆಯಲ್ಲಿ ತ್ರಿವಿಕ್ರಮ್ ಅವರು ಎಂಟ್ರಿ ನೀಡಿದ್ದಾರೆ. ಸಿಸಿಎಲ್ನಲ್ಲಿ ಅವರು ಆಟ ಆಡಿದ ಅನುಭವ ಹೊಂದಿದ್ದಾರೆ. ಮುಂದಿನ ಮೂರು ತಿಂಗಳ ಕಾಲ ಅವರು ಬಿಗ್ ಬಾಸ್ನಲ್ಲೇ ಇದ್ದರೆ ಜನವರಿಯಲ್ಲಿ ಸಿಸಿಎಲ್ ಬಂದಾಗ ಏನು ಮಾಡೋದು ಎಂದು ಸುದೀಪ್ ಅವರು ಕಾಲೆಳೆದರು. ತ್ರಿವಿಕ್ರಮ್ ಅವರು ಎಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂಬುದನ್ನು ಕಾದು ನೋಡಬೇಕು.
ಕಳೆದ 6 ವರ್ಷಗಳಿಂದ ತ್ರಿವಿಕ್ರಮ್ ಅವರು ನಟನಾಗಿ ಗುರುತಿಸಿಕೊಂಡಿದ್ದಾರೆ. ‘ಮಧ್ಯಮವರ್ಗದಿಂದ ಬಂದಿರುವ ಜನರಿಗೆ ಬಿಗ್ ಬಾಸ್ ರೀತಿಯ ಒಂದು ವೇದಿಕೆ ಖಂಡಿತವಾಗಿಯೂ ಬೇಕು. ನಮ್ಮ ಅಪ್ಪ ಡ್ರೈವರ್, ಅಮ್ಮ ಗೃಹಿಣಿ. ಕ್ರಿಕೆಟರ್ ಆಗಬೇಕು ಅಂತ ಕನಸು ಇಟ್ಟುಕೊಂಡು ನಾನು ಬೆಂಗಳೂರಿಗೆ ಬಂದವನು’ ಎಂದು ತ್ರಿವಿಕ್ರಮ್ ಅವರು ಹೇಳಿದ್ದಾರೆ.
‘ನಾನು ಕ್ರಿಕೆಟರ್ ಆಗಬೇಕು ಅಂತ ಬೆಂಗಳೂರಿಗೆ ಬಂದೆ. ಆದರೆ ಕ್ರಿಕೆಟರ್ ಆಗಲು ಒಂದು ಹಿನ್ನೆಲೆ ಬೇಕು ಅಂತ ಗೊತ್ತಾಯಿತು. ಜಿಮ್ ಟ್ರೇನರ್ ಆಗಿ ಸೇರಿಕೊಂಡೆ. ಅಲ್ಲಿ ಜನರ ಪರಿಚಯ ಆಯಿತು. ಸಿರಿಯಲ್ ಮತ್ತು ಸಿನಿಮಾದ ಅವಕಾಶಗಳು ಸಿಕ್ಕವು. ಆದರೆ ಅಷ್ಟರಲ್ಲೇ ಲಾಕ್ಡೌನ್ ಶುರುವಾಯಿತು. ಲಾಕ್ಡೌನ್ ಬಂದಿದ್ದರಿಂದ ನಮಗೆ ದೊಡ್ಡ ಹಿನ್ನಡೆ ಆಯಿತು’ ಎಂದಿದ್ದಾರೆ ತ್ರಿವಿಕ್ರಮ್.
ಇದನ್ನೂ ಓದಿ: ಬಿಗ್ ಬಾಸ್ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ
‘ನನಗೆ ಅಡುಗೆ ಬರುತ್ತದೆ. ಯಾವುದೇ ಕೆಲಸವನ್ನೂ ನೀಟಾಗಿ ಮಾಡುತ್ತೇನೆ. ಸ್ಪೋರ್ಟ್ಸ್, ಜಿಮ್ ಮತ್ತು ನಟನೆಯ ಅನುಭವವನ್ನು ಬಿಗ್ ಬಾಸ್ ಮನೆಯಲ್ಲಿ ಬಳಸಿಕೊಳ್ಳುತ್ತೇನೆ’ ಎಂದು ತ್ರಿವಿಕ್ರಮ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವಾಗ ತ್ರಿವಿಕ್ರಮ್ ಅವರು ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.