ಬಿಗ್ ಬಾಸ್ ಕನ್ನಡ ಸೀಸನ್ 8ನಲ್ಲಿ ಕೊನೇ ದಿನಗಳು ಹತ್ತಿರ ಆಗುತ್ತಿದ್ದಂತೆಯೇ ದೊಡ್ಮನೆಯಲ್ಲಿ ರೋಚಕತೆ ಹೆಚ್ಚಿದೆ. ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ನಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್ಗಳನ್ನು ನೀಡಲಾಗುತ್ತಿದೆ. ಕಳೆದ ಭಾನುವಾರ (ಜು.25) ಇಬ್ಬರು ಎಲಿಮಿನೇಟ್ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ವಾರಾಂತ್ಯದ ಬದಲು ಮಿಡ್ವೀಕ್ನಲ್ಲಿ ಎಲಿಮಿನೇಷನ್ (Elimination) ಇಡಲಾಗಿದೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಔಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದೆ. ಅದಕ್ಕೆ ಕರೆ ಮಾಡಿ ಒಂದು ಮೆಸೇಜ್ ನೀಡಲಾಯಿತು. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ಫೋನ್ನಲ್ಲಿ ಮಾತನಾಡಿದರು. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್ ಬಾಸ್ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಯಿತು. ಪ್ರತಿಯೊಬ್ಬರೂ ಗೇಟ್ ಬಳಿ ಹೋಗಿ ನಿಲ್ಲಬೇಕು. ಯಾರಿಗೆ ಬಾಗಿಲು ತೆರೆಯುತ್ತದೆಯೋ ಅವರು ಎಲಿಮಿನೇಟ್ ಆದಂತೆ. ಈ ವೇಳೆ ಚಕ್ರವರ್ತಿಗೆ ಬಾಗಿಲು ತೆಗೆದಿದೆ.
ಸಾಮಾನ್ಯವಾಗಿ ವೀಕೆಂಡ್ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್ ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ಇದು ವಿಡ್ವೀಕ್ ಎಲಿಮಿನೇಷನ್ ಆದಕಾರಣ ಸುದೀಪ್ ಅನುಪಸ್ಥಿತಿಯಲ್ಲೇ ಚಕ್ರವರ್ತಿ ಔಟ್ ಆಗಿದ್ದಾರೆ.
ಪ್ರಿಯಾಂಕಾ ಎಲಿಮಿನೇಟ್ ಆದಾಗ ಚಕ್ರವರ್ತಿ ಚಂದ್ರಚೂಡ್ ನಡೆದುಕೊಂಡಿದ್ದ ರೀತಿ ಅನೇಕರಿಗೆ ಇಷ್ಟವಾಗಿರಲಿಲ್ಲ. ಅವರು ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಇವರು ಕಡಿಮೆ ವೋಟ್ ಪಡೆದು ಔಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಸಂಖ್ಯೆ 8ಕ್ಕೆ ಇಳಿಕೆ ಆಗಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ವೈಷ್ಣವಿ ಹಾಗೂ ಶುಭಾ ಪೂಂಜಾ ಆಟ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್: ತೆರೆಯಿತು ಬಾಗಿಲು; ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ