ಬಿಗ್ಬಾಸ್ (BiggBoss) ಕನ್ನಡ ಸೀಸನ್ 10ರ ರನ್ನರ್ ಅಪ್ ಆಗಿ ಹೊರಬಂದಿದ್ದಾರೆ ಡ್ರೋನ್ ಪ್ರತಾಪ್. ಬಿಗ್ಬಾಸ್ಗೆ ಹೋಗುವ ಮುನ್ನವೇ ವಿವಾದಾತ್ಮಕ ವ್ಯಕ್ತಿಯಾಗಿದ್ದ ಪ್ರತಾಪ್, ಬಿಗ್ಬಾಸ್ ನಲ್ಲಿ ಮುಗ್ಧದೆ ಪ್ರದರ್ಶಿಸಿ ಫಿನಾಲೆವರೆಗೆ ಬಂದು ರನ್ನರ್ ಅಪ್ ಆಗಿದ್ದಾರೆ. ಇದರ ಬೆನ್ನಲ್ಲೆ ಪ್ರತಾಪ್ ವಿರುದ್ಧ ಸರಣಿ ದೂರುಗಳು ದಾಖಲಾಗುತ್ತಿವೆ. ಒಬ್ಬರಾದ ಮೇಲೆ ಒಬ್ಬರು ಪ್ರತಾಪ್ ವಿರುದ್ಧ ವಂಚನೆಯ ಆರೋಪಗಳನ್ನು ಮಾಡುತ್ತಿದ್ದಾರೆ. ದೂರುಗಳನ್ನು ದಾಖಲಿಸುತ್ತಿದ್ದಾರೆ. ಇದೀಗ ಹೊಸದೊಂದು ಆರೋಪ ಪ್ರತಾಪ್ ವಿರುದ್ಧ ಕೇಳಿ ಬಂದಿದ್ದು, ಮಾಜಿ ಸಿಎಂ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರಿಂದ ಲಕ್ಷಾಂತರ ಹಣ ಪಡೆದು ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲಾ ಪಂಚಾಯಿತಿ ಚುನಾವಣೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಎರಡು ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚಂದನ್ ಗೌಡ ಎಂಬುವರು ಡ್ರೋನ್ ಪ್ರತಾಪ್ ವಿರುದ್ಧ ದೂರು ನೀಡಿದ್ದಾರೆ. ‘ನನಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪರಿಚಯ ಚೆನ್ನಾಗಿದೆ. ಅವರ ಫಾರಂ ಹೌಸ್ಗೆ ನಾನು ಆಗಾಗ್ಗೆ ಭೇಟಿ ನೀಡುತ್ತಿರುತ್ತೇನೆ. ಕುಮಾರಸ್ವಾಮಿ ನನಗೆ ಬಹಳ ಹತ್ತಿರ ಹಲವು ಭಾರಿ ಅವರನ್ನು ಭೇಟಿ ಆಗಿದ್ದೀನಿ, ಆದರೆ ಅದರ ಚಿತ್ರಗಳನ್ನು ನಾನು ಹಂಚಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಅವರಿಗೆ ಹೇಳಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುತ್ತೇನೆ ಎಂದು ಪ್ರತಾಪ್ ಹೇಳಿದ್ದರು’ ಎಂದು ಚಂದನ್ ದೂರಿನಲ್ಲಿ ಹೇಳಿದ್ದಾರೆ.
ಚಂದನ್ ಜೊತೆಗೆ ಪ್ರತಾಪ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಅನ್ನು ಸಹ ಚಂದನ್ ಗೌಡ ಬಿಡುಗಡೆ ಮಾಡಿದ್ದಾರೆ. ಚಂದನ್ ಜೊತೆಗೆ ಮಾತನಾಡಿದ್ದ ಡ್ರೋನ್ ಪ್ರತಾಪ್ ‘ನನ್ನನ್ನು ಕಾಂಗ್ರೆಸ್ ಗೆ ಬನ್ನಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡ್ತೀನಿ ಅಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆ. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ. ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬನ್ನಿ ಪರಿಚಯ ಮಾಡಿಸುತ್ತೇನೆ, ಕುಮಾರಸ್ವಾಮಿ ಕೆಟ್ಟ ಪದ ಬೈಯಬಹುದು, ಆದರೆ ಒಳ್ಳೆಯ ಮನುಷ್ಯ, ಡಿಕೆ ಶಿವಕುಮಾರ್ ಥರ ಪೇಪರ್ ಎಸೆಯೋದು ಎಲ್ಲ ಮಾಡಲ್ಲ, ಕುಮಾರಸ್ವಾಮಿ ಯಾರೇ ಹೋದ್ರು ದುಡ್ಡು ಕೊಡ್ತಾರೆ’ ಎಂದಿದ್ದರು ಪ್ರತಾಪ್.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ 10ರ ಸ್ಪರ್ಧಿಗಳ ಆಯ್ಕೆ ಹೇಗೆ ನಡೆಯಿತು? ನಿರ್ದೇಶಕರ ಉತ್ತರ
ಪ್ರತಾಪ್, ಬಿಗ್ಬಾಸ್ನಿಂದ ಹೊರಬಂದ ಬಳಿಕ, ಚಂದನ್ ಗೌಡ, ಪ್ರತಾಪ್ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ಸತತ ಫೋನ್ ಕರೆಗಳನ್ನು ಮಾಡಿದ್ದಾರೆ. ಆದರೆ ಪ್ರತಾಪ್, ಚಂದನ್ರ ಫೋನ್ ಕರೆಗಳನ್ನು ಸ್ವೀಕರಿಸಿಲ್ಲವಂತೆ. ಇದೇ ಕಾರಣಕ್ಕೆ ಚಂದನ್ ಗೌಡ, ಇದೀಗ ಪೊಲೀಸ್ ಆಯುಕ್ತ ದಯಾನಂದ್ ಗೆ ದೂರು ನೀಡಿದ್ದಾರೆ.
ಪ್ರತಾಪ್ ವಿರುದ್ಧ ಈಗಾಗಲೇ ಎರಡು ದೂರುಗಳು ದಾಖಲಾಗಿವೆ. ಬಿಬಿಎಂಪಿ ಮಾಜಿ ನೂಡಲ್ ಅಧಿಕಾರಿ ಪ್ರಯಾಗ್, 50 ಲಕ್ಷ ರೂಪಾಯಿಗೆ ಮಾನನಷ್ಟ ಮೊಕದ್ದಮೆಯನ್ನು ಡ್ರೋನ್ ಪ್ರತಾಪ್ ವಿರುದ್ಧ ದಾಖಲು ಮಾಡಿದ್ದಾರೆ. ಅದರ ಜೊತೆಗೆ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ನಿಯಮ ಉಲ್ಲಂಘನೆ ದೂರು ದಾಖಲಾಗಿದೆ. ಪ್ರತಾಪ್, ಸೂಕ್ತ ಅನುಮತಿಗಳನ್ನು ಪಡೆಯದೆ ಡ್ರೋನ್ ಮಾರಾಟ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಿರೆಂದು ಮಹೇಶ್ ಎಂಬುವರು ದೂರು ದಾಖಲು ಮಾಡಿದ್ದಾರೆ. ಇನ್ನು ಪುಣೆಯ ಉದ್ಯಮಿ ಸಾರಂಗ್ ಸಹ ಮಾಧ್ಯಮಗಳ ಮುಂದೆ ಪ್ರತಾಪ್ ವಿರುದ್ಧ ಆರೋಪ ಮಾಡಿದ್ದು, ಪ್ರತಾಪ್ 35 ಲಕ್ಷ ರೂಪಾಯಿ ಹಣ ಪಡೆದು ಒಪ್ಪಂದದ ಅನುಗುಣವಾಗಿ ಡ್ರೋನ್ಗಳನ್ನು ನೀಡಿಲ್ಲ. ಈಗ ನೀಡಿರುವ ಕೆಲವು ಡ್ರೋನ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Sat, 3 February 24