‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್’: ‘ಜೀ ಕನ್ನಡ’ ವಾಹಿನಿಯಲ್ಲಿ ಹೊಸ ಶೋ

|

Updated on: Apr 24, 2024 | 9:39 PM

‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌’ನಲ್ಲಿ ಟಿ-20 ರೀತಿಯೇ ಟೀಮ್​ಗಳು, ಮಾಲೀಕರು ಹಾಗೂ ಕ್ಯಾಪ್ಟನ್‌ಗಳು ಇರುತ್ತಾರೆ. ಆಟಗಾರರ ಹರಾಜು ಪ್ರಕ್ರಿಯೆ ರೀತಿ ಈ ಶೋನಲ್ಲಿ ಹಾಸ್ಯ ಕಲಾವಿದರ ಹರಾಜು ನಡೆಯಲಿದೆ. ಐದು ತಂಡಗಳು ಒಂದು ಟ್ರೋಫಿ ಗೆಲ್ಲಲು ಹಣಾಹಣಿ ನಡೆಸಲಿದೆ. ಏಪ್ರಿಲ್​ 27ರಂದು ‘ಜೀ ಕನ್ನಡ’ ವಾಹಿನಿಯಲ್ಲಿ ಈ ಹೊಸ ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರ ಆಗಲಿದೆ.

‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್’: ‘ಜೀ ಕನ್ನಡ’ ವಾಹಿನಿಯಲ್ಲಿ ಹೊಸ ಶೋ
ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್
Follow us on

‘ಜೀ ಕನ್ನಡ’ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಈಗ ಹೊಸ ಅವತಾರದಲ್ಲಿ ಬರಲಿದೆ. ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌’ ಹೆಸರಿನಲ್ಲಿ ವಾರಾಂತ್ಯದಲ್ಲಿ ಪ್ರೇಕ್ಷಕರಿಗೆ ನಗುವಿನ ಟಾನಿಕ್‌ ನೀಡಲು ವೇದಿಕೆ ಸಿದ್ಧವಾಗಿದೆ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಈಗಾಗಲೇ ಹಲವು ಹಾಸ್ಯ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ‘ಜೀ ಕನ್ನಡ’ (Zee Kannada) ವಾಹಿನಿಯು ಈಗ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌’ (Comedy Khiladigalu Premier League) ಮೂಲಕ ಮನರಂಜನೆಯನ್ನು ಇನ್ನಷ್ಟು ಹೆಚ್ಚಿಸುವುದರ ಜೊತೆಗೆ ಮತ್ತಷ್ಟು ಕಾಮಿಡಿ ಕಲಾವಿದರನ್ನ ಕರ್ನಾಟಕಕ್ಕೆ ಪರಿಚಯಿಸಲು ಮುಂದಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಈಗಾಗಲೇ ಜನಮನ ಗೆದ್ದು ಲಕ್ಷಾಂತರ ವೀಕ್ಷಣೆ ಕಂಡ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌’ ಸಂಚಿಕೆಯ ಪ್ರೋಮೋ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ನಿರೂಪಕರಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಲಿದ್ದಾರೆ. ನಟ ಜಗ್ಗೇಶ್ ಅವರು ಜನರ ತಲೆಯಲ್ಲಿ ಈಗಾಗಲೇ ಹೊಸ ಹುಳ ಬಿಟ್ಟಿದ್ದಾರೆ. ‘ಇಲ್ಲಿ ನಗಿಸ್ತಾರೆ ನಗಬಾರದು’ ಅಂತ ಹೇಳುವ ಮೂಲಕ ಕೌತುಕ ಹೆಚ್ಚಿಸಿದ್ದಾರೆ.

ಕಾರ್ಯಕ್ರಮದ ಶೀರ್ಷಿಕೆಯೇ ಹೇಳುವಂತೆ ಇದು ನಗುವಿನ ಲೀಗ್‌. ಇಲ್ಲಿ ಟಿ-20ಯಲ್ಲಿ ಇರುವ ಹಾಗೆ ತಂಡಗಳು, ಮಾಲೀಕರು, ಕ್ಯಾಪ್ಟನ್‌ಗಳು ಇರುತ್ತಾರೆ. ಕ್ರಿಕೆಟಿಗರನ್ನ ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಳ್ಳುವಂತೆ ಇಲ್ಲಿಯೂ ಕೂಡ ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ.

ಇದನ್ನೂ ಓದಿ: ಕಾಮಿಡಿ ಕಿಲಾಡಿಗಳ ‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’

ಈ ಕಾರ್ಯಕ್ರಮದಲ್ಲಿ ಪ್ರರ್ದಶನ ನೀಡುವ ಕಲಾವಿದರಿಗೆ ವಾರಾಂತ್ಯದಲ್ಲಿ ಅವರ ಪ್ರದರ್ಶನದ ಆಧಾರದ ಮೇಲೆ ಪ್ರತಿ ವಾರ 1 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಅವಕಾಶವನ್ನು ನೀಡಲಾಗಿದೆ. ಇದು ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್​’ನ ವಿಶೇಷತೆಗಳಲ್ಲೊಂದಾಗಿದೆ. ಐವರು ನಿರೂಪಕರು ಈಗ ಹೊಸ ಜವಾಬ್ದಾರಿ ಹೊತ್ತ ಕಾರಣದಿಂದ ಹೊಸ ನಿರೂಪಕರನ್ನು ಈ ಶೋ ಮೂಲಕ ತೆರೆಗೆ ತರಲಾಗುವುದು. ಅವರು ಯಾರು ಎಂಬ ಪ್ರಶ್ನೆಗೆ ಇದೇ ಶನಿವಾರ ಹಾಗೂ ಭಾನುವಾರದ ರಾತ್ರಿ 9 ಗಂಟೆಯ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.