ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ರಾಜಕೀಯದಲ್ಲಿ ಮಾಡಿರುವ ಸಾಧನೆ ತುಂಬಾನೇ ದೊಡ್ಡದು. ಇದರ ಜೊತೆಗೆ ಅವರು ಒಂದಷ್ಟು ವಿವಾದಗಳನ್ನು ಕೂಡ ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರು ಈಗ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೀಕೆಂಡ್ನಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಸಾಕಷ್ಟು ವಿಚಾರಗಳನ್ನು ಡಿಕೆಶಿ ಅವರು ಹೇಳಿಕೊಂಡಿದ್ದಾರೆ. ಆ ಪೈಕಿ ಅವರು ಹೇಳಿದ ಸಂಸ್ಕೃತದ ಶ್ಲೋಕ ಎಲ್ಲರ ಗಮನ ಸೆಳೆದಿದೆ. ಜೀ ಕನ್ನಡ ವಾಹಿನಿ ಈ ಪ್ರೋಮೋ ಹಂಚಿಕೊಂಡಿದೆ.
ಡಿಕೆಶಿ ಅವರು ಇಷ್ಟು ದಿನಗಳ ಕಾಲ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಆಗಿದ್ದರು. ಕಾಂಗ್ರೆಸ್ನ ಅಧಿಕಾರಕ್ಕೆ ತರಬೇಕು ಎಂದು ಶತಾಯ ಗತಾಯ ಪ್ರಯತ್ನಿಸಿದ್ದರು. ಈ ಪ್ರಯತ್ನ ಯಶಸ್ಸು ಕಂಡಿದೆ. ಕಾಂಗ್ರೆಸ್ ಸ್ಪಷ್ಟಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿದೆ. ಇದರಲ್ಲಿ ಡಿಕೆಶಿ ಅವರ ಶ್ರಮವೂ ಇದೆ. ಸರ್ಕಾರ ರಚಿಸಿ, ಮಂತ್ರಿ ಸ್ಥಾನ ಹಂಚಿಕೆ ಮಾಡಿದ ಬಳಿಕ ಡಿಕೆಶಿ ಅವರು ಕೊಂಚ ರಿಲೀಫ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಲಾಗುತ್ತದೆ. ಬಾಲ್ಯದ ದಿನಗಳು, ಸಾಧನೆ ಮಾಡಿದ್ದು ಹೇಗೆ ಎಂಬಿತ್ಯಾದಿ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತದೆ. ಅದೇ ರೀತಿ ಡಿಕೆಶಿ ಅವರು ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ದಿನಗಳು ಹಾಗೂ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆಗೆ ಅವರು ಹೇಳಿರುವ ಶ್ಲೋಕ ಗಮನ ಸೆಳೆಯುತ್ತಿದೆ.
‘ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೆ ವನೇ. ವಿಕ್ರಮಾರ್ಜಿತರಾಜ್ಯಸ್ಯ ಸ್ವಯಮೇವ ಮೃಗೇಂದ್ರತಾ’ ಎಂದು ಅವರು ಶ್ಲೋಕ ಹೇಳಿದ್ದಾರೆ. ಇದರ ಅರ್ಥವನ್ನೂ ಅವರು ವಿವರಿಸಿದ್ದಾರೆ. ‘ಕಾಡಿನಲ್ಲಿ ಬೇಕಷ್ಟು ಪ್ರಾಣಿಗಳಿವೆ. ಸಿಂಹಕ್ಕೆ ಯಾರೂ ಮೃಗರಾಜ ಎಂದು ಹೆಸರಿಟ್ಟಿಲ್ಲ. ಅದಕ್ಕೆ ಯಾರೂ ಪಟ್ಟಾಭಿಷೇಕ ಮಾಡಿಲ್ಲ. ತನ್ನ ಶಕ್ತಿ ಹಾಗೂ ಸಾಮರ್ಥ್ಯದಿಂದ ಅದು ಮೃಗರಾಜ ಎನಿಸಿಕೊಂಡಿದೆ’ ಎಂದು ಸಂಸ್ಕೃತದ ಸಾಲಿನ ಅರ್ಥವನ್ನು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಹೊರಗೆ ಟಫ್ ಆಗಿರೋ ಡಿಕೆ ಶಿವಕುಮಾರ್ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್ ವಿತ್ ರಮೇಶ್ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ
‘ಸ್ವಯಂ ಶಕ್ತಿ, ಸಾಮರ್ಥ್ಯ ಇರುವವನೇ ನಿಜವಾದ ನಾಯಕ! ವೀಕೆಂಡ್ ವಿತ್ ರಮೇಶ್-5 ಗ್ರ್ಯಾಂಡ್ ಫಿನಾಲೆ, ಶನಿ-ಭಾನು ರಾತ್ರಿ 9ಕ್ಕೆ’ ಎಂದು ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Fri, 9 June 23