ಪ್ರತಾಪ್ ಅವರು ಡ್ರೋನ್ ವಿಚಾರದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದಾರೆ. ಡ್ರೋನ್ ಕಂಡು ಹಿಡಿದಿದ್ದಾಗಿ ಅವರು ಹೇಳಿಕೊಂಡಿದ್ದರು. ಈ ವಿಚಾರದಲ್ಲಿ ಅವರಿಗೆ ಸಾಕಷ್ಟು ಸನ್ಮಾನಗಳನ್ನು ಮಾಡಲಾಯಿತು. ಅನೇಕ ಕಡೆಗಳಲ್ಲಿ ಅವರು ಸಂದರ್ಶನ ನೀಡಿದರು. ಆದರೆ, ಅವರು ಡ್ರೋನ್ ಕಂಡು ಹಿಡಿದೇ ಇರಲಿಲ್ಲ ಅನ್ನೋದು ಆ ಬಳಿಕ ಗೊತ್ತಾಯಿತು. ಇದರಿಂದ ಡ್ರೋನ್ ಪ್ರತಾಪ್ (Drone Prathap) ಸಾಕಷ್ಟು ನೋವು ತಿಂದರು. ಈಗ ಅವರು ಕಣ್ಣೀರು ಹಾಕಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರ ಮೊಬೈಲ್ ಸಂಖ್ಯೆಯನ್ನು ಅವರು ಬ್ಲಾಕ್ ಮಾಡಿದ್ದಾರೆ. ಈ ಬಗ್ಗೆ ಅವರು ತಾರಾ ಅನುರಾಧ ಬಳಿ ಹೇಳಿಕೊಂಡಿದ್ದಾರೆ.
ಹಬ್ಬದ ಪ್ರಯುಕ್ತ ತಾರಾ ವಿಶೇಷ ಅತಿಥಿಯಾಗಿ ಬಂದಿದ್ದರು. ಡ್ರೋನ್ ಪ್ರತಾಪ್ ಅವರನ್ನು ಕರೆದು ಕೂರಿಸಿ ತಾರಾ ಮಾತನಾಡಿದರು. ‘ನಿನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜನರು ನಿನ್ನನ್ನು ಪ್ರೀತಿ ಮಾಡುತ್ತಿದ್ದಾರೆ. ನೀನು ಮಾನಸಿಕವಾಗಿ ಎಷ್ಟು ಟಾರ್ಚರ್ ಅನುಭವಿಸಿದ್ದೀಯಾ ಅನ್ನೋದು ನನಗೆ ಗೊತ್ತು. ನೀನು ತಪ್ಪು ಮಾಡಿರಬಹುದು. ಈಗ ಒಂದು ಅವಕಾಶ ಸಿಕ್ಕಿದೆ. ಅಮ್ಮ ಅಂದ್ಕೊಂಡು ನನ್ನ ಬಳಿ ಹೇಳು’ ಎಂದರು ತಾರಾ.
ಆಗ ಪ್ರತಾಪ್ ಕಣ್ಣಲ್ಲಿ ನೀರು ಬಂತು. ವಾಶ್ರೂಂ ಹೋಗೋಕೆ ಪ್ರಯತ್ನಿಸಿದರೂ ತಾರಾ ಅವಕಾಶ ಕೊಡಲಿಲ್ಲ. ‘ನಿನಗೇ ಇಷ್ಟು ನೋವಾಗಿದೆ ಎಂದರೆ ಹೆತ್ತವರಿಗೆ ಎಷ್ಟು ನೋವಾಗಿರಬೇಡ ಹೇಳು’ ಎಂದರು ತಾರಾ. ಈ ವೇಳೆ ಪ್ರತಾಪ್ ಅವರು ಮನಸ್ಸಿನ ಮಾತನ್ನು ತೆರೆದಿಟ್ಟರು. ‘ಅವರು ಎಷ್ಟು ನೋವು ಅನುಭವಿಸಿದ್ದಾರೆ ಅನ್ನೋದು ಗೊತ್ತು. ನಿನ್ನ ಮಗನನನ್ನು ಯಾಕೆ ಉಳಿಸಿದ್ದಿಯಾ. ಏನಾದರೂ ಹಾಕಿ ಸಾಯಿಸಿಬಿಡು ಎಂದು ಹೇಳಿದ್ದರು. ನಾನು ದುಡ್ಡು ಮಾಡಿದೀನಿ ಎನ್ನುವ ಆರೋಪ ಇದೆ. ನನ್ನ ಅಮ್ಮ ಮದುವೆ, ಮುಂಜಿಗೆ ಹೋಗಲ್ಲ. ಇದಕ್ಕೆ ನಾನೇ ಕಾರಣ ಎಂದರು. ಈಗ ಊರಲ್ಲಿ ಅವರು ಒಂದು ಮನೆ ಕಟ್ಟಿದ್ದಾರೆ. ಅದರ ಗೃಹ ಪ್ರವೇಶಕ್ಕೆ ಕರೆದರು. ಆದರೆ, ನಾನು ಹೋಗಿಲ್ಲ. ನನ್ನ ಹೆಸರನ್ನು ಎಲ್ಲೂ ಹೇಳಬೇಡಿ ಎಂದೆ. ನನ್ನ ಅಪ್ಪ, ಅಮ್ಮ, ತಂಗಿ ನಂಬರ್ ಬ್ಲಾಕ್ ಮಾಡಿದೀನಿ’ ಎಂದು ಗಳಗಳನೆ ಅತ್ತರು ಪ್ರತಾಪ್.
‘ಮದುವೆ ಆಗಬೇಕಿರೋ ತಂಗಿ ಇದಾಳೆ. ಅದಕ್ಕಾಗಿ ನಾನು ಕಂಪನಿ ಮಾಡಿದೀನಿ. ಕಂಪನಿಯನ್ನು ಬೆಳೆಸಬೇಕಿದೆ. ಡ್ರೋನ್ ಮಾಡ್ತಾ ಇದೀಯಾ ಅದನ್ನೇ ಮಾಡ್ಕೊಂಡು ಇರು ಬಿಗ್ ಬಾಸ್ಗೆ ಹೋಗಬೇಡ ಎಂದು ಮಾವನ ಮೂಲಕ ಮನೆಯವರು ಹೇಳಿಸಿದರು. ಆದರೆ, ನಾನು ಕೇಳಲಿಲ್ಲ. ಅಪ್ಪನ ನೋಡಬೇಕು ಎನಿಸುತ್ತಿದೆ’ ಎಂದರು ಪ್ರತಾಪ್.
ಇದನ್ನೂ ಓದಿ: ಬಿಗ್ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್
‘ಅಪ್ಪ, ಅಮ್ಮ, ತಂಗಿನ ನೋಡೋಕೆ ಒಂದು ಅವಕಾಶ ಮಾಡಿಕೊಡಿ’ ಎಂದು ತಾರಾ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡರು. ಬಂದರೆ ಭೇಟಿ ಮಾಡ್ತೀಯಾ ಎಂದು ತಾರಾ ಕೇಳಿದರು. ಇದಕ್ಕೆ ತಲೆ ಆಡಿಸಿದರು ಪ್ರತಾಪ್. ‘ತಂಗಿ ಮದುವೆ, ನಿನ್ನ ಮದುವೆಗೆ ಆಮಂತ್ರಣ ನೀಡಬೇಕು’ ಎಂದು ಪ್ರತಾಪ್ಗೆ ಧೈರ್ಯ ತುಂಬಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ