ಬಿಗ್​ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್

Bigg Boss: ತರಕಾರಿ, ಮಸಾಲೆ ಪದಾರ್ಥ ಕನಿಷ್ಟ ಉಪ್ಪು ಸಹ ಇಲ್ಲದೆ ಹಬ್ಬವನ್ನು ಸಪ್ಪೆಯಾಗಿ ಆಚರಿಸಲು ಸಿದ್ಧವಾಗಿದ್ದ ಬಿಗ್​ಬಾಸ್ ಮನೆಯ ಸದಸ್ಯರ ಪಾಲಿಗೆ ಹಬ್ಬ ತಂದರು ನಟಿ ತಾರಾ.

ಬಿಗ್​ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್
ತಾರಾ
Follow us
ಮಂಜುನಾಥ ಸಿ.
|

Updated on: Oct 24, 2023 | 11:54 PM

ನಾಡೆಲ್ಲ ದಸರಾ (Dasara) ಹಬ್ಬವನ್ನು ಸಂಭ್ರಮ ಹಾಗೂ ವೈಭವದಿಂದ ಆಚರಣೆ ಮಾಡಿದೆ. ಆದರೆ ಕೆಲ ದಿನಗಳ ಹಿಂದೆ ಲಕ್ಶುರಿ ಬಜೆಟ್ ಸೋತ ಬಿಗ್​ಬಾಸ್ ಮಂದಿ ಅಡುಗೆಗೆ ಸೂಕ್ತ ತರಕಾರಿ ಇಲ್ಲದೆ, ಕನಿಷ್ಟ ಉಪ್ಪು ಸಹ ಇಲ್ಲದೆ ಸರಿಯಾಗಿ ಹಬ್ಬ ಆಚರಿಸಲಾಗಿರಲಿಲ್ಲ. ಆದರೆ ವಿಜಯದಶಮಿಯಂದು ಬಿಗ್​ಬಾಸ್ ಮನೆಗೆ ಬಂದ ನಟಿ ತಾರಾ (Tara) ಮನೆಯ ಸದಸ್ಯರಿಗೆ ಹಲವು ಸಂತೋಷಗಳನ್ನು ತಂದರು.

ಬಿಗ್​ಬಾಸ್ ಮನೆ ಪ್ರವೇಶಿಸುತ್ತಿದ್ದಂತೆ ಅಡುಗೆ ಮನೆಗೆ ಹೋದ ತಾರಾ ಅಲ್ಲಿ ಈರುಳ್ಳಿ ಬಿಟ್ಟು ಏನೂ ಇಲ್ಲದ್ದು ನೋಡಿ, ಬಿಗ್​ಬಾಸ್​ಗೆ ಮನವಿ ಮಾಡಿ ತರಕಾರಿ ಕಳಿಸುವಂತೆ ಮನವಿ ಮಾಡಿದರು. ಅಂತೆಯೇ ತಾರಾ ಮನವಿಗೆ ಸ್ಪಂದಿಸಿದ ಬಿಗ್​ಬಾಸ್ ತಾರಾ ಕೇಳಿದಂತೆ ಎಲ್ಲ ತರಕಾರಿ, ಮಸಾಲೆ ಪದಾರ್ಥ, ಉಪ್ಪು ಇತರೆಗಳನ್ನು ಕಳಿಸಿದರು. ಆದರೆ ಕಾಫಿಯನ್ನು ಕಳಿಸಲಿಲ್ಲ. ಅದಾದ ಬಳಿಕ ಹೋಳಿಗೆ ಮಾಡಲು ಪದಾರ್ಥಗಳನ್ನು ಕಳಿಸಿ, ಹೋಳಿಗೆ ಮಾಡಿಕೊಳ್ಳುವಂತೆ ಹೇಳಿದರು ಬಿಗ್​ಬಾಸ್. ಅಂತೆಯೇ ಮನೆಯ ಗಂಡು ಮಕ್ಕಳೆಲ್ಲ ಸೇರಿ ಹೋಳಿಗೆ ಮಾಡಿಕೊಂಡರು.

ತಾರಾ ಅವರು ಮನೆಯ ಸದಸ್ಯರೊಡನೆ ಪ್ರತ್ಯೇಕವಾಗಿ ಕೆಲ ಹೊತ್ತು ಮಾತನಾಡಿದರು. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಜೊತೆ ಮಾತನಾಡುವಾಗ ಪ್ರತಾಪ್ ಭಾವುಕರಾಗಿ ಕಣ್ಣೀರು ಹಾಕಿದರು. ತಾವು ಕುಟುಂಬದವರಿಂದ ದೂರ ಇರುವುದಾಗಿ, ಸಂಬಂಧಿಕರಿಂದ ಸಾಕಷ್ಟು ಅವಮಾನ ಎದುರಿಸಿರುವುದಾಗಿ ಹೇಳಿದರು. ಕುಟುಂಬದವರನ್ನು ನೋಡುವ ಆಸೆಯಾಗಿದೆ ಎಂದು ಸಹ ಪ್ರತಾಪ್ ಹೇಳಿದರು. ಅದಕ್ಕೆ ವ್ಯವಸ್ಥೆ ಮಾಡುವಂತೆ ಬಿಗ್​ಬಾಸ್ ಬಳಿ ತಾರಾ ಮನವಿ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆ ಮಂದಿಗೆ ತರಾಟೆ: ಹಿಂದೆಂದೂ ಬಳಸದ ಅಧಿಕಾರ ಬಳಸಿದ ಸುದೀಪ್

ಅದಕ್ಕೂ ಮುನ್ನ ನಟಿ ಸಿರಿ ಅವರ ಬಳಿ ಮಾತನಾಡುತ್ತಾ, ಸಿರಿ ಅವರನ್ನು ಬೇಗನೆ ಮದುವೆ ಆಗುವಂತೆ ಹೇಳಿದರು. ಮದುವೆಯಾಗಿ ‘ರಾಜಾ ರಾಣಿ’ ಶೋಗೆ ಬನ್ನಿ ಅಲ್ಲಿಂದ ಒಂದು ವರ್ಷದಲ್ಲಿ ‘ನಮ್ಮಮ್ಮ ಸೂಪರ್ ಸ್ಟಾರ್​’ಗೆ ಬನ್ನಿ ಎಂದು ಹೇಳಿ ತಮಾಷೆ ಮಾಡಿದರು. ಆ ಬಳಿಕ ವಿನಯ್ ಬಳಿ ಮಾತನಾಡುತ್ತಾ, ಭಾಷೆಯನ್ನು ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.

ಆ ಬಳಿಕ ಹಬ್ಬದ ವಿಶೇಷವಾಗಿ ಮನೆಯ ಎಲ್ಲ ಸದಸ್ಯರಿಗೆ ಹಲ್​ದಿರಾಮ್ಸ್​ ಕಡೆಯಿಂದ ಹಬ್ಬದ ಅಡುಗೆಯನ್ನು ಕಳಿಸಲಾಯ್ತು. ಚೋಲೆ ಬಟೂರೆ ಸೇರಿದಂತೆ ಹಲವು ತಿಂಡಿ ತಿನಿಸುಗಳನ್ನು ಮನೆಯ ಎಲ್ಲ ಸದಸ್ಯರಿಗಾಗಿ ಬಿಗ್​ಬಾಸ್ ಕಳಿಸಿದರು. ತಾರಾ ಅವರೊಟ್ಟಿಗೆ ಸೇರಿ ಎಲ್ಲರೂ ರುಚಿಯಾದ ಊಟ ಸವಿದರು.

ಬಳಿಕ ಬಿಗ್​ಬಾಸ್ ಅಣತಿಯಂತೆ ಪ್ರತಿಯೊಬ್ಬರೂ ಒಂದೊಂದು ಹಾಡಿಗೆ ನರ್ತಿಸಿ ಆ ಹಾಡನ್ನು ಯಾರಿಗೆ ಡೆಡಿಕೇಟ್ ಮಾಡುವುದಾಗಿ ಹೇಳಬೇಕಿತ್ತು. ಅಂತೆಯೇ ನಮ್ರತಾ-ಸ್ನೇಹಿತ್​ಗೆ, ಸ್ನೇಹಿತ್-ನಮ್ರತಾಗೆ ಹಾಡು ಡೆಡಿಕೇಟ್ ಮಾಡಿದರು. ಸಂಗೀತಾ ಹಾಗೂ ಕಾರ್ತಿಕ್ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದರು. ಡ್ರೋನ್ ಪ್ರತಾಪ್ ಸರದಿ ಬಂದಾಗ ಬಂಡಲ್ ಬಡಾಯಿ ಮಾದೇವ ಹಾಡು ಹಾಕಲಾಯ್ತು. ಅದನ್ನು ಅವರು ಸಂತುಗೆ ಡೆಡಿಕೇಟ್ ಮಾಡಿದರು.

ಎಲ್ಲರೊಟ್ಟಿಗೆ ಬೆರೆತು ಬಿಗ್​ಬಾಸ್ ಮನೆಯ ಸದಸ್ಯರಿಗೆ ಹಬ್ಬವನ್ನು ತಂದ ತಾರಾ ಅವರು ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿ, ಎಲ್ಲರೊಟ್ಟಿಗೆ ಡ್ಯಾನ್ಸ್ ಮಾಡಿ ಬಿಗ್​ಬಾಸ್ ಮನೆಗೆ ಹಬ್ಬದ ಕಳೆ ತಂದರು. ಕೊನೆಗೆ ಬಿಗ್​ಬಾಸ್ ಅಣತಿಯಂತೆ ಎಲ್ಲರಿಗೂ ಧನ್ಯವಾದ ಹೇಳಿ ನಿರ್ಗಮಿಸಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ