ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್ನ ಈ ವಾರಾಂತ್ಯದ ಶನಿವಾರದ ಅತಿಥಿಯಾಗಿ ಸಾಹಿತಿ, ಕನ್ನಡ ಪ್ರೇಮಿ, ಗೀತ ಸಾಹಿತಿ ದೊಡ್ಡರಂಗೇಗೌಡರು (Doddarangegowda) ಸಾಧಕರ ಕುರ್ಚಿಯನ್ನು ಅಲಂಕರಿಸಿದ್ದರು. ತಮ್ಮ ಬಾಲ್ಯ, ಶಿಕ್ಷಣ, ಹಳ್ಳಿ, ಅಲ್ಲಿಯ ಜೀವನ ತಮ್ಮ ಮೇಲೆ, ತಮ್ಮ ಸಾಹಿತ್ಯದ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತನಾಡಿದ ದೊಡ್ಡರಂಗೇಗೌಡರು ತಮ್ಮ ಇಡೀಯ ಜೀವನವನ್ನು ಮೆಲುಕು ಹಾಕಿದ ಬಳಿಕ ಕೊನೆಯಲ್ಲಿ ತಮಗೊಂದು ಸರಿಯಾದ ಮನೆ ಮಾಡಿಕೊಳ್ಳಲು ಈಗಲೂ ಆಗದೇ ಇರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ವೀಕೆಂಡ್ ವಿತ್ ರಮೇಶ್ನ ಪ್ರತಿ ಎಪಿಸೋಡ್ನ ಕೊನೆಯಲ್ಲಿ ನಟ ರಮೇಶ್ ಕೇಳುವ ಕೊನೆಯ ಪ್ರಶ್ನೆ, ಧನ್ಯವಾದ ಹೇಳುವುದಾದರೆ ಯಾರಿಗೆ? ಕ್ಷಮೆ ಕೇಳುವುದಾದರೆ ಯಾರಿಗೆ? ಏತಕ್ಕೆ? ಎಂಬುದು. ಅಂತೆಯೇ ದೊಡ್ಡರಂಗೇಗೌಡರಿಗೂ ಇದೇ ಪ್ರಶ್ನೆ ಎದುರಾದಾಗ. ಧನ್ಯವಾದವನ್ನು ತಮ್ಮ ತಾಯಿಯವರಿಗಷ್ಟೆ ಹೇಳಿದರು. ನನ್ನ ತಾಯಿ ನನ್ನ ಗುರುವೂ ಸಹ ಹೌದು. ಆಕೆಯ ಮಾರ್ಗದರ್ಶನದಿಂದಲೇ ನಾನು ಏನನ್ನಾದರೂ ಸಾಧಿಸಲಾಯ್ತು ಎಂದಿದ್ದಾರೆ. ದೊಡ್ಡರಂಗೇಗೌಡರ ತಾಯಿಯ ಹೆಸರು ಅಕ್ಕಮ್ಮ.
ಇನ್ನು ಯಾರಿಗೆ ಕ್ಷಮೆ ಕೇಳಬೇಕು ಎಂಬ ಪ್ರಶ್ನೆ ಬಂದಾಗ. ಭಾವುಕರಾದ ದೊಡ್ಡರಂಗೇಗೌಡರು. ನಾನು ನನ್ನ ಜೀವಮಾನದಲ್ಲಿ ನನ್ನ ಕುಟುಂಬಕ್ಕಾಗಿ ಒಂದು ಸರಿಯಾದ ಮನೆ ಕಟ್ಟಿಸಿಕೊಡಲಾಗಲಿಲ್ಲ. ಈಗಿರುವ ಮನೆಯಲ್ಲಿ ನನ್ನ ಪುಸ್ತಕಗಳನ್ನು ಇಟ್ಟುಕೊಳ್ಳಲು ಸಹ ಸರಿಯಾಗಿ ಜಾಗವಿಲ್ಲ. ನನ್ನ ಬಳಿ ರಾಶಿ ಪುಸ್ತಕಗಳಿವೆ ಅವುಗಳನ್ನು ಇಟ್ಟುಕೊಳ್ಳಲು ಸಹ ಮನೆಯಲ್ಲಿ ಜಾಗವಿಲ್ಲ, ನನ್ನ ಮಗ ಹಾಗೂ ಮನೆಯ ಇತರರು ಆ ಪುಸ್ತಕಗಳನ್ನೇ ಬದಿಗೆ ಸರಿಸಿ ಮಲಗುವ ಸ್ಥಿತಿ ಇದೆ.
ನಾನು ಈವರೆಗೆ ಏಳು ಬಾರಿ ಬಿಡಿಎಗೆ ನಿವೇಶನಕ್ಕಾಗಿ ಅರ್ಜಿ ಹಾಕಿದ್ದೇನೆ ಆದರೆ ಪ್ರತಿಬಾರಿಯೂ ಅದು ರದ್ದಾಗಿದೆ. ಅರ್ಜಿ ಹಾಕಿದ ಬಳಿಕ ಅಲ್ಲಿ ಹೋಗಿ ನಾನು ವಶೀಲಿಬಾಜಿ ಮಾಡಿಲ್ಲವಾದ್ದರಿಂದ ನನಗೆ ಸೈಟು ದೊರಕಿಲ್ಲ. ಸರ್ಕಾರಗಳು ಬರಹಗಾರರಿಗೆ ಸಹಾಯ ಮಾಡಲಿಲ್ಲವಾದರೆ ಬಹಳ ಕಷ್ಟವಾಗುತ್ತದೆ. ಸರ್ಕಾರಗಳು ಬರಹಗಾರರಿಗೆ ನೆರವು ನೀಡಬೇಕು. ನಾನು ನನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಅದರಲ್ಲೂ ನನ್ನ ಪತ್ನಿಯನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಆ ಬಗ್ಗೆ ನನಗೆ ಈಗಲೂ ಬೇಸರವಿದೆ ಎಂದಿದ್ದಾರೆ ಹಿರಿಯ ಕವಿ ದೊಡ್ಡರಂಗೇಗೌಡರು.
ಇದನ್ನೂ ಓದಿ:ಕರ್ನಾಟಕದಲ್ಲಿ ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕಿದೆ: ಪ್ರೊ. ದೊಡ್ಡರಂಗೇಗೌಡ
1956ರಲ್ಲಿ ಶಿರಾ ತಾಲ್ಲೂಕು ಬರಗೂರಿನಲ್ಲಿ ಜನಿಸಿದ ದೊಡ್ಡರಂಗೇಗೌಡರ ಬಾಲ್ಯ ಕಳೆದಿದ್ದು ಮಧುಗಿರಿ ಬಳಿಯ ಕುರುಬರಹಳ್ಳಿಯಲ್ಲಿ. ಅಕ್ಕಮ್ಮ ಅವರ ತಾಯಿ ಎಂಟು ಮಕ್ಕಳಲ್ಲಿ ದೊಡ್ಡರಂಗೇಗೌಡರು ಸಹ ಒಬ್ಬರು. 1964 ರೈಲ್ವೆ ಮೇಲ್ ಸರ್ವೀಸ್ನಲ್ಲಿ ಕೆಲಸ ಆರಂಭಿಸಿದ ದೊಡ್ಡರಂಗೇಗೌಡರು ಬಳಿಕ ಎನ್ಎಲ್ಎನ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 32 ವರ್ಷಗಳ ಕಾಲದ ಸೇವೆ ಸಲ್ಲಿಸಿದರು, ಆರು ವರ್ಷ ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ ದುಡಿದರು. ವಿಶೇಷವೆಂದರೆ ಒಮ್ಮೆ ವಿಧಾನಪರಿಷತ್ತಿನ ಸದಸ್ಯರು (ಎಂಎಲ್ಸಿ) ಸಹ ಆಗಿದ್ದಾರೆ. ಈವರೆಗೆ ಕನ್ನಡ ಸಾಹಿತ್ಯಕ್ಕೆ 114 ಕೃತಿಗಳನ್ನು ನೀಡಿದ್ದಾರೆ. 700ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿದ್ದಾರೆ, 12 ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಈ ಸಾಧಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಪದ್ಮಶ್ರೀ ಸಹ ಲಭಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Sun, 28 May 23