ಕರ್ನಾಟಕದಲ್ಲಿ ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕಿದೆ: ಪ್ರೊ. ದೊಡ್ಡರಂಗೇಗೌಡ
ಕರ್ನಾಟಕದಲ್ಲಿ ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕಿದೆ ಎಂದು ಸಾಹಿತ್ಯ ಸಂವಾದದಲ್ಲಿ ಸರ್ವಾಧ್ಯಕ್ಷ ಪ್ರೊ. ದೊಡ್ಡರಂಗೇಗೌಡ ಹೇಳಿದರು.
ಹಾವೇರಿ: ಕರ್ನಾಟಕದಲ್ಲಿ ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕಿದೆ ಎಂದು ಸಾಹಿತ್ಯ ಸಂವಾದದಲ್ಲಿ ಸರ್ವಾಧ್ಯಕ್ಷ ದೊಡ್ಡರಂಗೇಗೌಡ (Prof. Doddarange Gowda) ಹೇಳಿದರು. ಪ್ರಸ್ತುತ ಕನ್ನಡ ವಿಶ್ವಮುಖಿ ಕೂಡ ಹೌದು. ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಕನ್ನಡದ ಕೆಲಸಗಳಾಗುತ್ತಿವೆ. ಅಮೆರಿಕದಲ್ಲಿ 16 ಕನ್ನಡ ಸಂಘಗಳಿವೆ. ಹೀಗಾಗಿ ಪ್ರಸ್ತುತ ಕನ್ನಡ ವಿಶ್ವಮುಖಿ ಆಗಿದೆ ಅಂತಾ ಹೇಳಿದ್ದೇನೆ. ಇವತ್ತು ಸಾಹಿತಿಗಳಾವವರು ಮೊದಲು ಆಲಿಸುವುದನ್ನ ಕಲಿಯಬೇಕು. ಹಳೆಯ ಕವಿಗಳನ್ನ ಓದಬೇಕು. ಇದರಿಂದ ಪದಜ್ಞಾನ, ಭಾಷಾಜ್ಞಾನ ಹೆಚ್ಚುತ್ತದೆ. ಕನ್ನಡದಲ್ಲಿ ಬೇಂದ್ರೆ, ಕುವೆಂಪು, ಮಾಸ್ತಿ ಸೇರಿದಂತೆ ಅನೇಕರಿದ್ದಾರೆ ಅವರೆಲ್ಲರನ್ನೂ ಓದಬೇಕು ಎಂದು ಇತ್ತೀಚಿನ ಚಿತ್ರ ಸಾಹಿತಿಗಳಿಗೆ ಪ್ರೊ. ದೊಡ್ಡರಂಗೇಗೌಡ ಕಿವಿ ಮಾತು ಹೇಳಿದರು.
ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ ದೊಡ್ಡರಂಗೇಗೌಡ
ಕಂಬಳಿ ಹುಳ ಚಿಟ್ಟೆ ಆಗಬೇಕು. ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಅದರಲ್ಲಿ ಶೇ. ಹತ್ತರಷ್ಟಾದ್ರೂ ಓದಿ. ಇದು ನನ್ನ ಪ್ರಾರ್ಥನೆ. ಪ್ರಜಾಪ್ರಭುತ್ವ ಇತ್ತೀಚೆಗೆ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಇಂತಹ ಸಮಯ ಇದು ಸಹಜ. ಇವತ್ತು ದುಡ್ಡಿದ್ದವರು ಗೆಲ್ಲುತ್ತಾರೆ. ಆ ದುಡ್ಡು ಎಲ್ಲಿಂದ ಬಂತು ಎಂದು ಯಾರೂ ಪ್ರಶ್ನಿಸೋದಿಲ್ಲ. ಹಣದಿಂದ ಅಧಿಕಾರ ಕೊಂಡವರಿಂದ ಸಮಸ್ಯೆ ಆಗುತ್ತಿದೆ. ಇವತ್ತು ರಾಜಕಾರಣಿಗಳ ಭಾಷೆ ಏನಾಗಿದೆ? ಅವರ ವರ್ತನೆ ಹೇಗಿದೆ? ಸದನದದಲ್ಲಿ ಪಂಚೆಕಟ್ಟಿ, ತೊಡೆ ತಟ್ಟಿ ಮಾತನಾಡಿದ್ರೆ ಹೇಗೆ? ಇದನ್ನ ನೋಡಿದ್ರೆ ದುಃಖ ಆಗುತ್ತದೆ ಎಂದು ಪರೋಕ್ಷವಾಗಿ ಹೆಸರು ಹೇಳದೆ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಕೋರ್ಟಿಗೆ ಹೋಗುತ್ತೇವೆ: ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಪರಿಷತ್, ವಿಧಾನಸಭೆ ಬಗ್ಗೆ ದೂರುವಾಗ ಮೂರು ಬೆರಳು ನಮ್ಮ ಕಡೆ ತೋರಿಸುತ್ತವೆ. ಇವತ್ತು ಪ್ರಾಮಾಣಿಕವಾಗಿ ಇರುವವರು ಸಿಗುತ್ತಿಲ್ಲ. ಎಲ್ಲೆಡೆ ಸ್ವಾರ್ಥದ ಲಾಲಸೆ ಹೆಚ್ಚಾಗಿದೆ. ವ್ಯವಸ್ಥೆಗೆ ಹೊಂದಾಣಿಕೆ ಮಾಡಿಕೊಂಡರೆ ಎಲ್ಲಾ ಸಿಗುತ್ತದೆ. ಇದು ವಿಶ್ವವನ್ನೇ ಆವರಿಸಿಕೊಂಡಿರುವ ರೋಗ. ಹೀಗಾಗಿ ಇದೀಗ ಕ್ರಾಂತಿ ಆಗಬೇಕಿದೆ. ಎಲ್ಲರೂ ವ್ಯಕ್ತಿಗತವಾಗಿ ಇದರ ವಿರುದ್ಧ ನಿಲ್ಲಬೇಕಿದೆ ಎಂದು ಹೇಳಿದರು.
ರೈತರು ಹೋರಾಟದ ರೋಚಕ ಘಟನೆ
ಬೆಳಗಾವಿಯ ಸುವರ್ಣ ಸೌಧದ ಆಚೆ ರೈತರು ಹೋರಾಟ ಮಾಡುತ್ತಿದ್ದರು. ಕಬ್ಬಿನ ಬಿಲ್ ಪಾವತಿಗಾಗಿ ಧರಣಿ ನಡೆಸಿದ್ದರು. ಇದೇ ವೇಳೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ನನಗೆ ಧರಣಿ ನೋಡುವುದು ಸಾಧ್ಯ ಆಗಲಿಲ್ಲ. ಏಕೆಂದರೆ ನಾನೂ ಕೂಡ ರೈತನ ಮಗನೇ. ಆದ್ರೆ ನಾನೂ ಆಡಳಿತ ಪಕ್ಷದಲ್ಲಿದೆ. ಆದರೂ ನಾನೂ ಸದನದ ಬಾವಿಗೆ ಇಳಿಯಬೇಕಾಯಿತು. ನಾನು ರೈತರ ಪರವಾಗಿ ಹೋರಾಟ ಮಾಡಿದೆ. ಇದು ನನಗೆ ಮರೆಯಲಾಗದ ಅನುಭವ ಎಂದು ಪರಿಷತ್ ಸದಸ್ಯರಾಗಿದ್ದ ಸಂದರ್ಭದ ರೋಮಾಂಚನಗೊಳಿಸಿದ ಘಟನೆ ಬಿಚ್ಚಿಟ್ಟರು.
ಕವಿಗಳು, ಸಾಹಿತಿಗಳು ಎಲ್ಲವನ್ನೂ ಬರೆದುಬಿಟ್ಟಿರುತ್ತಾರೆ. ಅವರು ಹೊಟ್ಟೆಯಲ್ಲಿ ಏನೂ ಬಚ್ಚಿಟ್ಟುಕೊಳ್ಳುವುದಿಲ್ಲ. ಬೇರೆ ರೂಪದಲ್ಲಿಯಾದ್ರೂ ಅದನ್ನ ಬರೆದಿರುತ್ತಾರೆ. ಹೀಗಾಗಿ ಅವರು ನೆಮ್ಮದಿಯಾಗಿರುತ್ತಾರೆ. ಇದೇ ಕಾರಣಕ್ಕೆ ಅವರು ದೀರ್ಘಾಯುಷಿಗಳಾಗಿರುತ್ತಾರೆ ಎಂದು ದೀರ್ಘಾಯುಷ್ಯದ ಗುಟ್ಟನ್ನು ದೊಡ್ಡರಂಗೇಗೌಡ ಬಿಟ್ಟುಕೊಟ್ಟರು.
ಸಂಬಂಧಗಳಿಗೆ ಬೆಲೆ ಕೊಡ್ತಿಲ್ಲ: ಡಾ.ಮಂಜುನಾಥ್
ಇನ್ನು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಹೇಳಿಕೆ ನೀಡಿದ್ದು, ಇತ್ತೀಚೆಗೆ ನಾವೆಲ್ಲಾ ಯಂತ್ರಗಳ ರೀತಿ ಕೆಲಸ ಮಾಡುತ್ತಿದ್ದೇವೆ. ಸಂಬಂಧಗಳಿಗೆ ಬೆಲೆ ಕೊಡ್ತಿಲ್ಲ, ಅವಶ್ಯಕತೆ ಇದ್ದರೆ ಮಾತಾಡಿಸುತ್ತೇವೆ. ಸಂಬಂಧಗಳ ಮೌಲ್ಯ ಮಕ್ಕಳಿಗೆ ತಿಳಿಸಬೇಕಿದೆ. ನಾಲಗೆ ಚೆನ್ನಾಗಿದ್ರೆ ಮಾನಸಿಕ, ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಯುವ ಪೀಳಿಗೆಗೆ ಯಾರ ಜೊತೆ ಹೇಗೆ ಮಾತಾಡಬೇಕು ಗೊತ್ತಿಲ್ಲ. ಸಹೋದರರ ಜೊತೆ ಸಹಾನುಭೂತಿಯಿಂದ ಮಾತನಾಡಬೇಕು. ಅಧಿಕಾರಿಗಳ ಜೊತೆ ನಯವಾಗಿ ಮಾತನಾಡಬೇಕು. ರಾಜಕಾರಣಿಗಳ ಜೊತೆ ಎಚ್ಚರಿಕೆಯಿಂದ ಮಾತನಾಡಬೇಕು. ದೇವರ ಜೊತೆ ಮೌನವಾಗಿ ಮಾತನಾಡಬೇಕು. ಅಂದು ಕಂಚಿನ ತಟ್ಟೆಯಲ್ಲಿ ಊಟ ಮಾಡಿ ಸಂಬಂಧ ಗಟ್ಟಿಯಾಗಿದ್ವು. ಆದರೆ ಇಂದು ಪೇಪರ್ ತಟ್ಟೆಯಲ್ಲಿ ಊಟ ಮಾಡಿ ಸಂಬಂಧ ಹರಿದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:49 pm, Sat, 7 January 23