
ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ನಗೆಹಬ್ಬ ಸೃಷ್ಟಿಸಿದ್ದ ಕಲರ್ಸ್ ಕನ್ನಡದ ‘ಗಿಚ್ಚಿ ಗಿಲಿಗಿಲಿ’ (Gicchi Gili Gili) ಮೂರು ಸೀಸನ್‌ಗಳನ್ನು ಯಶಸ್ವಿಯಾಗಿ ಈಗಾಗಲೇ ಪೂರ್ಣಗೊಳಿಡಿದೆ. ಈಗ ಮಕ್ಕಳ ಸೈನ್ಯದೊಂದಿಗೆ ವಿಶೇಷ ಆವೃತ್ತಿಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ಶೋ ಇದಾಗಿದೆ. ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ (Gicchi Gili Gili Juniors) ಕಾರ್ಯಕ್ರಮ ಇದೇ ಶನಿವಾರದಿಂದ (ಜನವರಿ 31) ಶುರುವಾಗಲಿದೆ. ಈಗಾಗಲೇ ಪ್ರೋಮೋಗಳು ಗಮನ ಸೆಳೆದಿದೆ. 5ರಿಂದ 10 ವರ್ಷದ ಒಳಗಿನ ಮಕ್ಕಳು ಹಾಗೂ ಹಿರಿಯ ಹಾಸ್ಯ ಕಲಾವಿದರು ಜೊತೆಗೂಡಿ ನಗಿಸಲಿದ್ದಾರೆ.
ಮಕ್ಕಳ ಮುಗ್ಧತೆ ಹಾಗೂ ಹಿರಿಯ ಕಲಾವಿದರ ಸಮ್ಮಿಲನ ಈ ಬಾರಿ ಆಗಲಿದೆ. ಈ ಪುಟ್ಟ ಮಕ್ಕಳು ಇಲ್ಲಿ ಕೇವಲ ಸ್ಪರ್ಧಿಗಳಲ್ಲ, ಇವರು ವೃತ್ತಿಪರ ನಟರಲ್ಲದಿದ್ದರೂ ಸಹಜವಾದ ಹಾಸ್ಯ ಪ್ರಜ್ಞೆಯೊಂದಿಗೆ ಸ್ಕಿಟ್‌ಗಳಲ್ಲಿ ಮಿಂಚಲಿದ್ದಾರೆ. ಅನುಭವಿ ಹಾಸ್ಯ ಕಲಾವಿದರು ಇವರಿಗೆ ಮಂಟರ್ಸ್ ಆಗಿ ಸಾಥ್ ನೀಡಲಿದ್ದಾರೆ. ಮಕ್ಕಳ ದೃಷ್ಟಿಕೋನದಲ್ಲಿ ಪ್ರಪಂಚ ಹೇಗಿರುತ್ತದೆ ಎಂಬ ಕಥೆಗಳು ಮತ್ತು ನಗೆಯ ಸನ್ನಿವೇಶಗಳು ಇಲ್ಲಿ ಅನಾವರಣಗೊಳ್ಳಲಿವೆ.
ಒಬ್ಬ ಸಾಮಾನ್ಯ ಮಗು ನಟನೆಯ ಜಗತ್ತಿನಲ್ಲಿ ಹಾಸ್ಯ ಕಲಾವಿದನಾಗಿ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಈ ಶೋ ಪ್ರತಿಬಿಂಬಿಸಲಿದೆ. ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತ ಬರುತ್ತಿರುವ ಕಲರ್ಸ್ ಕನ್ನಡ ವಾಹಿನಿಯು ನನ್ನಮ್ಮ ಸೂಪರ್ ಸ್ಟಾರ್, ರಾಜ ರಾಣಿ, ಮಜಾ ಟಾಕೀಸ್ ರೀತಿಯ ಶೋಗಳನ್ನು ನೀಡಿದೆ. ಇದೀಗ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಕೂಡ ಸೇರ್ಪಡೆ ಆಗುತ್ತಿದೆ.
ಜನವರಿ 31ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗಲಿದೆ. ಈ ಬಾರಿ ಕೂಡ ಸಾಧುಕೋಕಿಲ, ಸೃಜನ್ ಲೋಕೇಶ್ ಹಾಗೂ ಹಿರಿಯ ನಟಿ ಶ್ರುತಿ ಅವರು ತೀರ್ಪುಗಾರರಾಗಿ ಮುಂದುವರಿಯಲಿದ್ದಾರೆ. ಈ ಬಾರಿ ಅನುಪಮಾ ಗೌಡ ಅವರು ಈ ಶೋನ ನಿರೂಪಣೆ ಮಾಡಲಿದ್ದಾರೆ.
ಇದನ್ನೂ ಓದಿ: ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಆಡಿಷನ್ ಮೂಲಕ ಅತ್ಯಂತ ಚುರುಕಾದ ಮಕ್ಕಳನ್ನು ಶೋಗೆ ಆಯ್ಕೆ ಮಾಡಲಾಗಿದೆ. ‘ನಿನಗಾಗಿ’ ಸೀರಿಯಲ್ನಲ್ಲಿ ಕೃಷ್ಣನಾಗಿ ನಟಿಸಿ ಮನೆಮಾತಾಗಿದ್ದ 7 ವರ್ಷದ ಸಿರಿಸಿಂಚನ ಕೂಡ ಈ ತಂಡದಲ್ಲಿದ್ದಾರೆ. ಅಕ್ಷಯ್ ರವಿತೇಜ್ (ಚಿಕ್ಕಮಗಳೂರು), ಗೌಶಿಕ ಗೌಡ (ಶ್ರೀರಂಗಪಟ್ಟಣ), ಚಿರುಶ್ ಆದಿತ್ಯ (ಮಂಗಳೂರು), ಏಕಾoತ್ ಚಂದ್ರಪ್ಪ ಮಲಗುಂದ (ಹಾವೇರಿ), ಪಲ್ಲವಿ (ಅರಕಲಗೂಡು), ಸಿರಿಸಿಂಚನ (ಬೆಂಗಳೂರು), ಆತ್ಮಿ ಗೌಡ (ಪುತ್ತೂರು), ಪ್ರಗ್ಯಾ (ಮಂಗಳೂರು), ಪ್ರಗ್ಯ (ಮಂಗಳೂರು), ಅದ್ವಿಕಾ ಬಾಕಿಲ (ಪುತ್ತೂರು), ಮೋಹಕ್ ಗೌಡ (ಬೆಂಗಳೂರು), ವಿಹಾನ್ ಸೂರ್ಯ (ಮೈಸೂರು), ಮಾದೇಶ (ಹೊಳೆನರಸೀಪುರ) ಈ ಶೋನ ಹೈಲೈಟ್ ಆಗಿರುತ್ತಾರೆ.
ಜೂನಿಯರ್ ಹಾಸ್ಯ ಕಲಾವಿದರಿಗೆ ಸೂರ್ಯ ಕುಂದಾಪುರ, ರಾಘವೇಂದ್ರ, ಮಾನಸಾ, ಶಿವು, ಮಂಜು, ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಬಸವರಾಜ್, ಸೂರಜ್, ಪ್ರಶಾಂತ್, ವಾಣಿ, ತುಕಾಲಿ ಸಂತೋಷ್ ಅವರಂತಹ ಹಾಸ್ಯಗಾರರು ಸಾಥ್ ನೀಡಲಿದ್ದಾರೆ. ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಶೋನಲ್ಲಿ ಮಕ್ಕಳ ತರಲೆ, ತುಂಟಾಟ, ಅತಿ ಮುಗ್ಧತೆಯ ಈ ಹಾಸ್ಯ ಇರಲಿದೆ ಎಂದು ವಾಹಿನಿ ತಿಳಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.