ಪ್ರತಿ ಸೀಸನ್ನಲ್ಲೂ ಬಿಗ್ ಬಾಸ್ ಮನೆಗೆ ಕಾಮಿಡಿ ಕಲಾವಿದರು ಬರುತ್ತಾರೆ. ಈ ಬಾರಿ ಅದರ ಕೊರತೆ ಆಗಬಹುದೇನೂ ಎನಿಸಿತ್ತು. ಯೂಟ್ಯೂಬ್ ಮೂಲಕ ಖ್ಯಾತಿ ಪಡೆದಿದ್ದ ಧನರಾಜ್ ಅವರು ‘ಬಿಗ್ ಬಾಸ್ ಕನ್ನಡ 11’ ಶೋಗೆ ಬಂದಿದ್ದರೂ ಕೂಡ ಅವರು ಯಾರೋ ಅಷ್ಟೇನೂ ಕಾಮಿಡಿ ಮಾಡಿರಲಿಲ್ಲ. ಆದರೆ ಅವರ ಜೊತೆ ಹನುಮಂತ ಅವರು ಕೈ ಜೋಡಿಸಿದ ಬಳಿಕ ಕಾಮಿಡಿ ಕಿಕ್ ಶುರುವಾಯಿತು. ಹನುಮಂತ ಹಾಗೂ ಧನರಾಜ್ ಅವರು ಸಾಧ್ಯವಾದಷ್ಟು ಸಮಯ ಒಟ್ಟಿಗೆ ಕಳೆಯುತ್ತಾರೆ. ಆ ಬಗ್ಗೆ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಮಾತನಾಡಿದ್ದಾರೆ.
ಹನುಮಂತ ಅವರು ಬಿಗ್ ಬಾಸ್ ಶೋಗೆ ಬಂದ ದಿನದಿಂದಲೂ ಧನರಾಜ್ ಅವರ ಜೊತೆ ಕ್ಲೋಸ್ ಆಗಿದ್ದಾರೆ. ಇಷ್ಟ ದಿನ ಅವರಿಬ್ಬರು ಜೊತೆಯಾಗಿ ಕಾಲ ಕಳೆದ ಕ್ಷಣಗಳನ್ನು ಜೋಡಿ ವಿಡಿಯೋ ಬಿತ್ತರ ಮಾಡಲಾಯಿತು. ಅದನ್ನು ನೋಡಿ ಮನೆ ಮಂದಿಯೆಲ್ಲ ಖುಷಿಯಾದರು. ಧನರಾಜ್ ಅವರಿಗೆ ಹನುಮಂತನ ಮುಗ್ಧತೆ ಹೆಚ್ಚು ಇಷ್ಟ ಆಗುತ್ತಿದೆ. ಹಾಗಾಗಿ ಅವರು ಸ್ನೇಹ ಬೆಳೆಸಿದ್ದಾರೆ.
ಧನರಾಜ್ ಅವರಿಗೆ ಹನುಮನ ಜೊತೆಗಿನ ಸ್ನೇಹ ಕೆಲವೊಮ್ಮೆ ಮುಳುವಾಗುತ್ತಿದೆ. ಹನುಮಂತನನ್ನು ಬಿಟ್ಟರೆ ಬೇರೆ ಯಾರ ಜೊತೆಗೂ ಧನರಾಜ್ ಹೆಚ್ಚು ಬೆರೆಯುವುದಿಲ್ಲ ಎಂದು ಕೆಲವರು ನಾಮಿನೇಷನ್ಗೆ ಕಾರಣ ನೀಡಿದ್ದೂ ಉಂಟು. ಹಾಗಂದೆಮಾತ್ರಕ್ಕೆ ಅವರಿಬ್ಬರ ಬಂಧ ಕಡಿಮೆ ಆಗಿಲ್ಲ. ಅಲ್ಲದೇ ಹನುಮಂತ ಅವರು ನಾಮಿನೇಷನ್ ವಿಚಾರದಲ್ಲಿ ಯಾವುದೇ ಮುಲಾಜು ಇಟ್ಟುಕೊಳ್ಳುವವರಲ್ಲ. ಆ ಗುಣ ಎಲ್ಲರಿಗೂ ಇಷ್ಟ ಆಗಿದೆ.
ಇದನ್ನೂ ಓದಿ: ಹನುಮಂತ ಮುಗ್ಧನಾ? ಚಾಲಾಕಿಯಾ? ಸುದೀಪ್ ಎದುರು ಮನೆ ಮಂದಿ ಹೇಳಿದ್ದೇನು?
ಭಾನುವಾರದ ಎಪಿಸೋಡ್ನಲ್ಲಿ ಹನುಮಂತ ಮತ್ತು ಧನರಾಜ್ ಅವರು ಸಿನಿಮಾದ ಡೈಲಾಗ್ಗಳನ್ನು ಹೇಳಿಯೂ ಎಲ್ಲರನ್ನೂ ರಂಜಿಸಿದ್ದಾರೆ. ಇನ್ನು, ಹನುಮಂತ ಅವರ ಗರ್ಲ್ಫ್ರೆಂಡ್ ಬಗ್ಗೆಯೂ ಪ್ರಸ್ತಾಪ ಆಯಿತು. ಪ್ರೇಯಸಿಯ ಅಂದವನ್ನು ಹನುಮಂತ ವರ್ಣಿಸಿದರು. ಅದನ್ನು ಕೇಳಿಸಿಕೊಂಡು ಗೋಲ್ಡ್ ಸುರೇಶ್ ಚಿತ್ರ ಬಿಡಿಸಿದರು. ಆ ಚಿತ್ರವನ್ನು ಕಂಡು ಹನುಮಂತ ಹೌಹಾರಿದರು. ಬಳಿಕ ಗೌತಮಿ ಬರೆದ ಚಿತ್ರ ಹನುಮಂತ ಅವರಿಗೆ ಸ್ವಲ್ಪ ಸಮಾಧಾನ ತರಿಸಿತು. ಒಟ್ಟಿನಲ್ಲಿ ಅವರಿಬ್ಬರು ಇಡೀ ಸಂಚಿಕೆಯಲ್ಲಿ ಹೈಲೈಟ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.