AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್ ಒಂಭತ್ತು ಸೀಸನ್​ಗಳ ವಿನ್ನರ್​, ರನ್ನರ್​​ಅಪ್​ಗಳ ಬಗ್ಗೆ ಇಲ್ಲಿದೆ ವಿವರ..

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಫಿನಾಲೆ ಹಂತಕ್ಕೆ ತಲುಪಿದೆ. ಈ ವರೆಗೂ ನಡೆದಿರುವ ಒಂಬತ್ತು ಸೀನಸ್​ನಲ್ಲಿ ವಿನ್ನರ್ ಯಾರಾಗಿದ್ದರು? ರನ್ನರ್ ಅಪ್ ಯಾರು? ಇಲ್ಲಿದೆ ಮಾಹಿತಿ.

ಬಿಗ್​ ಬಾಸ್ ಒಂಭತ್ತು ಸೀಸನ್​ಗಳ ವಿನ್ನರ್​, ರನ್ನರ್​​ಅಪ್​ಗಳ ಬಗ್ಗೆ ಇಲ್ಲಿದೆ ವಿವರ..
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Jan 25, 2024 | 3:24 PM

Share

‘ಬಿಗ್ ಬಾಸ್’ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಅತ್ಯಂತ ಯಶಸ್ವಿ ಶೋ ಎನಿಸಿಕೊಂಡಿದೆ. ಈ ಶೋ ಸಾಕಷ್ಟು ವಿವಾದಾಗಳನ್ನು ಹುಟ್ಟುಹಾಕಿದೆ. ಇದನ್ನೆಲ್ಲ ಜನರು ಹೆಚ್ಚು ನೆನಪಿಸಿಕೊಟ್ಟುಕೊಂಡಿಲ್ಲ. ಈ ಕಾರಣಕ್ಕೆ ಶೋ ಅತ್ಯಂತ ಯಶಸ್ವಿ ಎನಿಸಿಕೊಂಡಿದೆ. ಒಂಭತ್ತು ಸೀಸನ್​ಗಳು ಪೂರ್ಣಗೊಂಡು ಹತ್ತನೇ ಸೀಸನ್ ಕೂಡ ಕೊನೆಯ ಹಂತ ತಲುಪಿದೆ. ಆರು ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ನಡೆಯುತ್ತಿದೆ. ಜನವರಿ 27 ಹಾಗೂ 28ರಂದು ಫಿನಾಲೆ ನಡೆಯಲಿದೆ. ಈ ಮೊದಲಿನ ಸೀಸನ್​ಗಳ ವಿನ್ನರ್ ಹಾಗೂ ರನ್ನರ್ ಅಪ್ ವಿವರ ಇಲ್ಲಿದೆ.

ಮೊದಲ ಸೀಸನ್..

ಬಿಗ್ ಬಾಸ್ ಕನ್ನಡಕ್ಕೆ ಕಾಲಿಟ್ಟಿದ್ದು 2013ರಲ್ಲಿ. ಮಾರ್ಚ್ 24ರಂದು ಈ ಶೋ ಪ್ರಾರಂಭ ಆಯಿತು. ಈಟಿವಿ ಕನ್ನಡದಲ್ಲಿ ಈ ಶೋ ಮೊದಲ ಬಾರಿಗೆ ಪ್ರಸಾರ ಕಂಡಿತು. 98 ದಿನಗಳ ಕಾಲ ಈ ಶೋ ನಡೆದಿತ್ತು. 2013ರ ಜೂನ್ 30ರಂದು ಎಪಿಸೋಡ್ ಕೊನೆ ಆಯಿತು. ಮೊದಲ ಸೀಸನ್​ನಲ್ಲಿ 15 ಸ್ಪರ್ಧಿಗಳು ಇದ್ದರು. ಈ ಪೈಕಿ ನಟ ವಿಜಯ್ ರಾಘವೇಂದ್ರ ವಿನ್ನರ್ ಆದರೆ, ನಟ, ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ರನ್ನರ್ ಅಪ್​ ಆದರು.

ಎರಡನೇ ಸೀಸನ್..

ಮೊದಲ ಸೀಸನ್ ಬಳಿಕ ಎರಡನೇ ಸೀಸನ್ 2014ರ ಜೂನ್ ತಿಂಗಳಲ್ಲಿ ಆರಂಭ ಆಗಿ 98 ದಿನಗಳ ಕಾಲ ನಡೆಯಿತು. ಈ ಸೀಸನ್​ನಲ್ಲಿ 15 ಸ್ಪರ್ಧಿಗಳು ಇದ್ದರು. ಆ್ಯಂಕರ್ ಅಕುಲ್ ಬಾಲಾಜಿ ಅವರು ಶೋನ ಗೆದ್ದರು. ಆ್ಯಂಕರಿಂಗ್ ಮೂಲಕ ಫೇಮಸ್ ಆದ ಸೃಜನ್ ಲೋಕೇಶ್ ಅವರು ರನ್ನರ್​ ಅಪ್​ ಸ್ಥಾನಕ್ಕೆ ಖುಷಿಪಟ್ಟುಕೊಂಡಿದ್ದರು.

ಮೂರನೇ ಸೀಸನ್..

ಮೂರನೇ ಸೀಸನ್ 2015ರ ಅಕ್ಟೋಬರ್ ತಿಂಗಳಲ್ಲಿ ಆರಂಭ ಆಯಿತು. ಕಲರ್ಸ್ ಕನ್ನಡ ಇದರ ಪ್ರಸಾರ ಹಕ್ಕನ್ನು ಪಡೆಯಿತು. ಈ ಸೀಸನ್​ನಲ್ಲಿ 18 ಸ್ಪರ್ಧಿಗಳು ಇದ್ದರು. ಹಿರಿಯ ನಟಿ ಶ್ರುತಿ ಅವರು ವಿನ್ನರ್ ಆದರೆ, ನಟ ಚಂದನ್ ಕುಮಾರ್ ರನ್ನರ್​ ಅಪ್ ಆದರು. ಈ ಸೀಸನ್​ ಸಾಕಷ್ಟು ಗಮನ ಸೆಳೆದಿತ್ತು. ಈವರೆಗೆ ಆದ ಏಕೈಕ ಮಹಿಳಾ ವಿನ್ನರ್ ಎಂದರೆ ಅದು ಶ್ರುತಿ.

ನಾಲ್ಕನೇ ಸೀಸನ್..

ನಾಲ್ಕನೇ ಸೀಸನ್​ 2016ರ ಅಕ್ಟೋಬರ್​ನಲ್ಲಿ ಪ್ರಾರಂಭ ಆಯಿತು. ಬರೋಬ್ಬರಿ 112 ದಿನಗಳ ಕಾಲ ಶೋ ನಡೆಯಿತು. ಈ ಸೀಸನ್​ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಒಳ್ಳೆ ಹುಡುಗ ಪ್ರಥಮ್ ಅವರು ಕಪ್ ಗೆದ್ದರೆ, ಕಿರಿಕ್​ ಕೀರ್ತಿ ರನ್ನರ್ ಅಪ್ ಆದರು. ಪ್ರಥಮ್ ಅವರು ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದರು. ಈ ಸೀಸನ್​ನಲ್ಲೂ 18 ಸ್ಪರ್ಧಿಗಳು ಇದ್ದರು.

ಐದನೇ ಸೀಸನ್..

ಐದನೇ ಸೀಸನ್ ಆರಂಭ ಆಗಿದ್ದು  2017ರ ಅಕ್ಟೋಬರ್​ನಲ್ಲಿ. ಗಾಯಕ ಚಂದನ್ ಶೆಟ್ಟಿ ಅವರು ಈ ಸೀಸನ್ ವಿನ್ ಆದರು. ದಿವಾಕರ್ ಅವರು ರನ್ನರ್ ಅಪ್ ಆದರು. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಅವರು ಸಾಕಷ್ಟು ಗಮನ ಸೆಳೆದರು. ಈ ಸೀಸನ್​ನಲ್ಲಿ ಬರೋಬ್ಬರಿ 20 ಸ್ಪರ್ಧಿಗಳು ಇದ್ದರು. ಈ ಸೀಸನ್ 105 ದಿನಗಳ ಕಾಲ ನಡೆದಿತ್ತು.

ಆರನೇ ಸೀಸನ್..

ಆರನೇ ಸೀಸನ್​ ಸಾಕಷ್ಟು ವಿಶೇಷ ಎನಿಸಿಕೊಂಡಿತ್ತು. ಸಾಮಾನ್ಯ ವ್ಯಕ್ತಿಗಳು ಕೂಡ ಬಿಗ್ ಬಾಸ್​​ಗೆ ಬರೋಕೆ ಅವಕಾಶ ಸಿಕ್ಕಿತ್ತು. ಈ ಸೀಸನ್ ಆರಂಭ ಆಗಿದ್ದು 2018ರ ಅಕ್ಟೋಬರ್​ ತಿಂಗಳಲ್ಲಿ. ರೈತ ಎನಿಸಿಕೊಂಡಿದ್ದ ಶಶಿ ಕುಮಾರ್ ಗೆದ್ದರೆ, ಗಾಯಕ ನವೀನ್ ಸಜ್ಜು ರನ್ನರ್ ಅಪ್ ಆದರು.

ಏಳನೇ ಸೀಸನ್..

ಅತ್ಯಂತ ಎಂಟರ್​ಟೇನಿಂಗ್ ಸೀಸನ್​​ಗಳಲ್ಲಿ ಏಳನೇ ಸೀಸನ್ ಕೂಡ ಒಂದು. ಕುರಿ ಪ್ರತಾಪ್​, ಶೈನ್ ಶೆಟ್ಟಿ, ದೀಪಿಕಾ ದಾಸ್, ವಾಸುಕಿ ವೈಭವ್​ ಅಂಥ ಘಟಾನುಘಟಿ ಸ್ಪರ್ಧಿಗಳು ಈ ಸೀಸನ್​ನಲ್ಲಿ ಇದ್ದರು. ಏಳನೇ ಸೀಸನ್​ನ ವಿನ್ನರ್ ಆಗಿ ಶೈನ್ ಶೆಟ್ಟಿ ಹೊರ ಹೊಮ್ಮಿದರೆ ಕುರಿ ಪ್ರತಾಪ್ ಅವರು ರನ್ನರ್ ಅಪ್ ಆದರು. ತಮ್ಮ ಹಾಸ್ಯದ ಮೂಲಕ ಪ್ರತಾಪ್ ಎಲ್ಲರನ್ನು ನಗಿಸಿದ್ದರು.

ಎಂಟನೇ ಸೀಸನ್..

ಎಂಟನೇ ಸೀಸನ್​​ ಇನ್ನೇನು ಪೂರ್ಣಗೊಳ್ಳಲು ಕೆಲವು ದಿನ ಇದೆ ಎನ್ನುವಾಗ ಕೊರೊನಾ ಕಾಣಿಸಿಕೊಂಡಿತ್ತು. ಹೀಗಾಗಿ ಎಲ್ಲಾ ಸ್ಪರ್ಧಿಗಳು ಮನೆಗೆ ಹೋಗಬೇಕಾಯಿತು. ನಂತರ ಎಲ್ಲರನ್ನು ಮನೆ ಒಳಗೆ ಕಳುಹಿಸಲಾಯಿತು. ಈ ಕಾರಣಕ್ಕೆ ಈ ಸೀಸನ್​ ಭಿನ್ನ ಎನಿಸಿಕೊಳ್ಳುತ್ತದೆ. ಈ ಸೀಸನ್​ನಲ್ಲಿ ಮಂಜು ಪಾವಗಡ ಗೆದ್ದರೆ, ಅರವಿಂದ್ ಕೆಪಿ ರನ್ನರ್ ಅಪ್ ಆದರು.

ಒಟಿಟಿ ಸೀಸನ್

ಒಂಭತ್ತನೇ ಸೀಸನ್ ಆರಂಭಕ್ಕೂ ಮುನ್ನ ಒಟಿಟಿ ಸೀಸನ್ ನಡೆಸಲಾಯಿತು. ಇದು ಅಷ್ಟಾಗಿ ಖ್ಯಾತಿ ಪಡೆಯಲಿಲ್ಲ. ಇದರಲ್ಲಿ ರೂಪೇಶ್ ಟಾಪ್ ಪರ್ಫಾರ್ಮರ್ ಆದರು. ಈ ಸೀಸನ್​ ಮೂವರು ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಟಿವಿ ಸೀಸನ್​​ಗೆ ತೆರಳಿದರು.

ಒಂಭತ್ತನೇ ಸೀಸನ್..

ಈ ಸೀಸನ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹಳೆಯ ಸೀಸನ್​ ಸ್ಪರ್ಧಿಗಳನ್ನು ಕೂಡ ಕರೆತರಲಾಗಿತ್ತು. ಶೋ ಅಷ್ಟಾಗಿ ಹೈಲೈಟ್ ಆಗದೇ ಇರಲು ಇದುವೇ ಮುಖ್ಯ ಕಾರಣ ಎಂಬುದು ಅನೇಕರ ಅಭಿಪ್ರಾಯ. 2022ರ ಸೆಪ್ಟೆಂಬರ್​ನಲ್ಲಿ ಆರಂಭವಾದ ಈ ಶೋ, ಡಿಸೆಂಬರ್​ನಲ್ಲಿ ಕೊನೆ ಆಯಿತು. ರೂಪೇಶ್ ಶೆಟ್ಟಿ ಗೆಲುವು ಕಂಡರೆ ರಾಕೇಶ್ ಅಡಿಗ ರನ್ನರ್ ಅಪ್​ ಆದರು.

ಹತ್ತನೇ ಸೀಸನ್​..

ಹತ್ತನೇ ಸೀಸನ್​ ಸದ್ಯ ಪ್ರಗತಿಯಲ್ಲಿದೆ. ಈ ಸೀಸನ್​ನಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಮಧ್ಯೆ ಆಟ ಮುಂದುವರಿದಿದೆ. ಜನವರಿ 28ರಂದು ವಿಜೇತರ ಹೆಸರು ಗೊತ್ತಾಗಲಿದೆ.

ಮಿನಿ ಸೀಸನ್..

2021ರಲ್ಲಿ ಮಿನಿ ಸೀಸನ್​ ನಡೆಸಲಾಯಿತು. ಕನ್ನಡ ಕಿರುತೆರೆ ಲೋಕದವರನ್ನು ಕರೆದು ತರಲಾಯಿತು. ಇದು ಫನ್​ಗಾಗಿ ಮಾಡಿದ್ದ ಶೋ. ಇಲ್ಲಿ ಯಾವುದೇ ವಿಜೇತರು ಇರಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ