ಕಿರುತೆರೆಯ ಖ್ಯಾತ ನಟ ವಿಕಾಸ್​ ಸೇಥಿ ಹೃದಯಾಘಾತದಿಂದ ನಿಧನ; ಹಬ್ಬದ ನಡುವೆ ಕಹಿಸುದ್ದಿ

|

Updated on: Sep 08, 2024 | 4:17 PM

ಖ್ಯಾತ ನಟ ವಿಕಾಸ್​ ಸೇಥಿ ಅವರಿಗೆ ಆರ್ಥಿಕ ತೊಂದರೆ ಉಂಟಾಗಿತ್ತು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಕೇಳಿಬಂದಿದೆ. ಭಾನುವಾರ (ಸೆಪ್ಟೆಂಬರ್​ 8) ಮಲಗಿರುವಾಗಲೇ 48ರ ಪ್ರಾಯದ ವಿಕಾಸ್​ ಸೇಥಿ ಅವರಿಗೆ ಹೃದಯಾಘಾತ ಆಗಿದೆ. ಮುಂಬೈನಲ್ಲಿ ಅವರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..

ಕಿರುತೆರೆಯ ಖ್ಯಾತ ನಟ ವಿಕಾಸ್​ ಸೇಥಿ ಹೃದಯಾಘಾತದಿಂದ ನಿಧನ; ಹಬ್ಬದ ನಡುವೆ ಕಹಿಸುದ್ದಿ
ವಿಕಾಸ್​ ಸೇಥಿ
Follow us on

ಹಿಂದಿ ಸಿನಿಮಾ ಹಾಗೂ ಸೀರಿಯಲ್​ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟ ವಿಕಾಸ್​ ಸೇಥಿ ಅವರ ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಇಂದು (ಸೆಪ್ಟೆಂಬರ್​ 8) ಕೊನೆಯುಸಿರು ಎಳೆದಿದ್ದಾರೆ. ವಿಕಾಸ್ ಸೇಥಿ ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದ ಎಲ್ಲರಿಗೂ ಈ ಸುದ್ದಿ ಕೇಳಿ ಶಾಕ್​ ಆಗಿದೆ. ಹಬ್ಬದ ನಡುವೆ ಸೂತಕದ ಛಾಯೆ ಆವರಿಸಿದೆ. ವಿಕಾಸ್​ ಸೇಥಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ಪ್ರಾರ್ಥಿಸಿದ್ದಾರೆ.

ನಿದ್ರೆಯಲ್ಲಿ ಇರುವಾಗಲೇ ವಿಕಾಸ್​ ಸೇಥಿ ಅವರಿಗೆ ಹೃದಯಾಘಾತ ಆಗಿದೆ. ಬಳಿಕ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಅವರ ಉಸಿರು ನಿಂತಿತ್ತು. ಈ ವಿಷಯ ತಿಳಿದ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ವಿಕಾಸ್ ಸೇಥಿ ಅವರು ಸಕ್ರಿಯರಾಗಿದ್ದಾರೆ. ಸೀರಿಯಲ್​ಗಳು ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಸಿ ಅವರು ಹೆಸರು ಗಳಿಸಿದ್ದರು.

ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ, ಕಸೌಟಿ ಜಿಂದಗಿ ಕೆ, ಕಹಿ ತೋ ಹೋಗಾ, ಕೆ. ಸ್ಟ್ರೀಟ್​ ಪಾಲಿ ಹಿಲ್​, ಹಮಾರಿ ಬೇಟಿಯೋಂಕಾ ವಿವಾಹ್, ಡರ್​ ಸಬ್ಕೋ ಲಗ್ತಾ ಹೈ, ಸಂಸ್ಕಾರ್​ ಲಕ್ಷ್ಮಿ, ಸರುರಾಲ್​ ಸಿಮರ್​ ಕಾ ಮುಂತಾದ ಧಾರಾವಾಹಿಗಳಲ್ಲಿ ವಿಕಾಸ್​ ಸೇಥಿ ನಟಿಸಿದ್ದರು. ‘ದೀವಾನಾಪನ್​’, ‘ಕಭಿ ಖುಷಿ ಕಭಿ ಗಮ್​’, ‘ಓಪ್ಸ್​’, ‘ಇಸ್ಮಾರ್ಟ್​ ಶಂಕರ್​’ ಮುಂತಾದ ಸಿನಿಮಾಗಳಲ್ಲಿ ಕೂಡ ವಿಕಾಸ್​ ಸೇಥಿ ಅವರು ಅಭಿನಯಿಸಿದ್ದರು.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಹೃದಯಾಘಾತ, ಜೀವ ಉಳಿಸಲು ವೈದ್ಯರ ಹೋರಾಟ ಹೇಗಿತ್ತು ನೋಡಿ…

2021ರಲ್ಲಿ ವಿಕಾಸ್​ ಸೇಥಿ ಅವರಿಗೆ ಕಾಲಿನ ಸರ್ಜರಿ ಆಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಫಿಟ್ನೆಸ್​ ಬಗ್ಗೆ ಅವರು ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಸ್ವಂತ ನಿರ್ಮಾಣ ಸಂಸ್ಥೆಯನ್ನು ಅವರು ಆರಂಭಿಸಿದ್ದರು. ಇತ್ತೀಚೆಗೆ ವಿಕಾಸ್​ ಸೇಥಿ ಅವರಿಗೆ ಹಣಕಾಸಿನ ತೊಂದರೆ ಆಗಿತ್ತು ಎನ್ನಲಾಗಿದೆ. ಆ ಕಾರಣದಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೂಡ ಕೇಳಿಬರುತ್ತಿದೆ. ಈ ಬಗ್ಗೆ ಕುಟುಂಬದವರ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.