ಬಿಗ್​​ಬಾಸ್​​ ಬಂದ್​​ ಹಿಂದೆ ರಾಜಕೀಯ ದ್ವೇಷ: ಯಾರದ್ದು ಕೈವಾಡ?

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12 ಶೋ ಬಂದ್ ಆಗಿದೆ. ಬಿಗ್​​ಬಾಸ್ ಸೆಟ್ ಇದ್ದ ಜಾಲಿವುಡ್​ ಸ್ಟುಡಿಯೋಕ್ಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಆದರೆ ಇದರ ಹಿಂದೆ ರಾಜಕೀಯ ದ್ವೇಷ ಇದೆಯೆಂದು ಜೆಡಿಎಸ್ ಆರೋಪ ಮಾಡಿದ್ದು, ‘ಡಿಸಿಎಂ ಡಿಕೆ ಶಿವಕುಮಾರ್ ಅವರು ಕಲಾವಿದರ ಮೇಲಿನ ತಮ್ಮ ದ್ವೇಷ ತೀರಿಸಿಕೊಂಡಿದ್ದಾರೆ’ ಎಂದಿದೆ.

ಬಿಗ್​​ಬಾಸ್​​ ಬಂದ್​​ ಹಿಂದೆ ರಾಜಕೀಯ ದ್ವೇಷ: ಯಾರದ್ದು ಕೈವಾಡ?
Bigg Boss Kannada 12

Updated on: Oct 08, 2025 | 12:32 PM

ಬಿಗ್​​ಬಾಸ್ ಕನ್ನಡ ಸೀಸನ್ 12 ತಾತ್ಕಾಲಿಕವಾಗಿ ಬಂದ್ ಆಗಿದೆ. ನಿಯಮ ಉಲ್ಲಂಘನೆ ಆರೋಪದಡಿ ಬಿಗ್​​ಬಾಸ್ ನಿವಾಸ ಇದ್ದ ಜಾಲಿವುಡ್​​ ಸ್ಟುಡಿಯೋಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಬಿಗ್​​ಬಾಸ್ ಸ್ಪರ್ಧಿಗಳೆಲ್ಲ ಈಗ ಈಗಲ್​​ಟನ್ ರೆಸಾರ್ಟ್​​ನಲ್ಲಿದ್ದಾರೆ. ಬಿಗ್​​ಬಾಸ್ 12 ಪುನಃ ಆರಂಭವಾಗುತ್ತದೆಯೋ ಇಲ್ಲವೊ ಎಂಬ ಅನುಮಾನ ಮೂಡಿದೆ. ಬಿಗ್​​​ಬಾಸ್ ಶೋ ಹಠಾತ್ತನೆ ಬಂದ್ ಆಗಿರುವುದಕ್ಕೆ ರಾಜಕೀಯ ದ್ವೇಷ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಿಗ್​​ಬಾಸ್ ಬಂದ್ ಹಿಂದೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡ ಇದೆಯೆಂದು ನೇರ ಆರೋಪ ಮಾಡಿದೆ ಜೆಡಿಸ್.

‘ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಷೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ‘ನಟ್ಟು ಬೋಲ್ಟ್ ಮಿನಿಸ್ಟರ್’ ಡಿಕೆ ಶಿವಕುಮಾರ್’ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. ಜೊತೆಗೆ ಸಿನಿಮೋತ್ಸವ ಉದ್ಘಾಟನೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಲಾವಿದರಿಗೆ ನೀಡಿದ್ದ ಎಚ್ಚರಿಕೆಯ ವಿಡಿಯೋವನ್ನು ಸಹ ಟ್ವೀಟ್​​ ಜೊತೆಗೆ ಹಂಚಿಕೊಂಡಿದೆ.

ಬಿಗ್​​​ಬಾಸ್ ಸೆಟ್ ನಿರ್ಮಾಣವಾಗಿದ್ದ ಜಾಲಿವುಡ್ ಸ್ಟುಡಿಯೋಸ್ ಜೆಡಿಎಸ್​ನ ಪ್ರಭಾವಿ ಮುಖಂಡರಿಗೆ ಸೇರಿದ ಸ್ಥಳವಾಗಿದ್ದು, ಇದೇ ಕಾರಣಕ್ಕೆ ರಾಜ್ಯದ ಪ್ರಮುಖ ರಾಜಕಾರಣಿಯೋರ್ವರು ತಮ್ಮ ಪ್ರಭಾವ ಬಳಸಿ ಬಿಗ್​​ಬಾಸ್ ಅನ್ನು ಬಂದ್ ಮಾಡಿಸಿದ್ದಾರೆ ಹಾಗೂ ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಗ್​​ಬಾಸ್​​ನ ನಿರೂಪಕ ಸುದೀಪ್ ಸಹ ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದು, ಇದೂ ಸಹ ರಾಜಕೀಯ ದ್ವೇಷಕ್ಕೆ ಕಾರಣ ಆಗಿರಬಹುದು ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ.

ಇದನ್ನೂ ಓದಿ:ಇಂದು ಪ್ರಸಾರವಾಗುತ್ತಾ ಬಿಗ್​​​ಬಾಸ್? ಎಷ್ಟು ಎಪಿಸೋಡ್​​ಗಳ ಚಿತ್ರೀಕರಣ ಆಗಿದೆ?

ಬಿಗ್​​​ಬಾಸ್​​ ಶೋ ಬಂದ್ ಮಾಡಿಸಿದ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಜೆಡಿಎಸ್ ಕೇಳಿದ್ದು, ‘ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ? ರಾಜ್ಯದ ಜನರ ಮೇಲೆ ನಿರಂತರವಾಗಿ ತೆರಿಗೆ ಬರೆ ಎಳೆದು ಲೂಟಿ ಹೊಡೆಯುತ್ತಿರುವುದಕ್ಕೆ ಯಾವಾಗ ಬೀಗ ಹಾಕುತ್ತೀರಾ? ಬೆಲೆ ಏರಿಕೆಗಳ ಮೂಲಕ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ? ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯನ್ನು ತಡೆಯಲು ಯಾವ ರೀತಿ ಬೀಗ ಹಾಕಿಸುತ್ತೀರಾ? ರಾಜ್ಯದ ಜನರ ತೆರಿಗೆ ಹಣವನ್ನು ಅಕ್ರಮವಾಗಿ ವಾಮಮಾರ್ಗಗಳ ಮೂಲಕ ಹೈಕಮಾಂಡ್’ಗೆ ಕಪ್ಪ ಒಪ್ಪಿಸುತ್ತಿರುವುದಕ್ಕೆ ಯಾವಾಗ ಬೀಗ ಹಾಕಿಸುತ್ತೀರಾ? ಕರ್ನಾಟಕ ಕಾಂಗ್ರೆಸ್ ಸರ್ಕಾರದ 60% ಕಮಿಷನ್ ದಂಧೆಗೆ ಯಾವಾಗ ಬೀಗ ಹಾಕುತ್ತೀರಾ? ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಪುಢಾರಿಗಳು ನಡೆಸುತ್ತಿರುವ ಕ್ಯಾಸಿನೋ ದಂಧೆ, ಅಕ್ರಮಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ? ಭ್ರಷ್ಟಾಚಾರದ ಕೂಪಗಳಾಗಿರುವ ಸರ್ಕಾರಿ ಇಲಾಖೆ, ಕಚೇರಿಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ? ಕೈಲಾಗದವರು ಮೈಪರಚಿ ಕೊಂಡಂತೆ ಇದೆ ಕಾಂಗ್ರೆಸ್ ಸರ್ಕಾರದ ದುರಾಡಳಿತ’ ಎಂದು ಟೀಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Wed, 8 October 25