ಕಾರು ಡಿಸೈನರ್ ಮೇಲೆ ವಂಚನೆ ಪ್ರಕರಣ ದಾಖಲಿಸಿದ ಕಪಿಲ್ ಶರ್ಮಾ

|

Updated on: Feb 08, 2024 | 6:35 PM

Kapil Sharma: ನಟ, ಕಮಿಡಿಯನ್ ಕಪಿಲ್ ಶರ್ಮಾ, ಸೆಲೆಬ್ರಿಟಿ ಕಾರು ಡಿಸೈನರ್ ದಿಲಿಪ್ ದಿಲಿಪ್ ಚಬ್ರಿಯಾ ವಿರುದ್ಧ ಕೋಟ್ಯಂತರ ರೂಪಾಯಿ ಹಣ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಕಾರು ಡಿಸೈನರ್ ಮೇಲೆ ವಂಚನೆ ಪ್ರಕರಣ ದಾಖಲಿಸಿದ ಕಪಿಲ್ ಶರ್ಮಾ
Follow us on

ನಟ, ಕಮಿಡಿಯನ್ ಕಪಿಲ್ ಶರ್ಮಾ (Kapil Sharma) ಮುಂಬೈನ ಜನಪ್ರಿಯ ಕಾರು ಡಿಸೈನರ್ ವಿರುದ್ಧ ಕೋಟ್ಯಂತರ ರೂಪಾಯಿ ಹಣ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸೆಲೆಬ್ರಿಟಿ ಕಾರು ಡಿಸೈನರ್ ಆಗಿರುವ ದಿಲಿಪ್ ಚಬ್ರಿಯಾ ತಮಗೆ 5 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣ ವಂಚನೆ ಮಾಡಿದ್ದಾರೆಂದು ಕಪಿಲ್ ತಮ್ಮ ಮ್ಯಾನೇಜರ್ ಮೊಹಮ್ಮದ್ ಹಮೀದ್ ಅವರಿಂದ ಮೊಕದ್ದಮೆ ಹೂಡಿಸಿದ್ದಾರೆ.

ಕಪಿಲ್ ಶರ್ಮಾರ ಆಪ್ತ ಮೊಹಮ್ಮದ್ ಹಮ್ಮೀದ್ ನೀಡಿರುವ ದೂರಿನ ಪ್ರಕಾರ, ಕಪಿಲ್ ಶರ್ಮಾ ಅವರು ತಮಗಾಗಿ ಐಶಾರಾಮಿ ವ್ಯಾನಿಟಿ ವ್ಯಾನ್ ನಿರ್ಮಿಸಿ ಕೊಡುವಂತೆ 2016ರಲ್ಲಿ ದಿಲಿಪ್ ಚಬ್ರಿಯಾ ಅವರಿಗೆ 4.50 ಕೋಟಿ ರೂಪಾಯಿ (ತೆರಿಗೆ ಹೊರತುಪಡಿಸಿ) ಹಣ ನೀಡಿದ್ದರಂತೆ. ಹಣ ವರ್ಗಾವಣೆ ಹಾಗೂ ವ್ಯಾನಿಟಿ ವ್ಯಾನ್ ನೀಡುವ ಬಗ್ಗೆ ಕಪಿಲ್ ಶರ್ಮಾರ ಸಂಸ್ಥೆ ಕೆ9 ಹಾಗೂ ದಿಲಿಪ್ ಅವರ ಡಿಸಿ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ 2017ರಲ್ಲಿ ಒಪ್ಪಂದ ಆಗಿ ತೆರಿಗೆ ಸೇರಿಸಿ ಒಟ್ಟು 5.35 ಕೋಟಿ ಹಣವನ್ನು ಕಪಿಲ್ ದಿಲೀಪ್​ಗೆ ನೀಡಿದ್ದರು.

ಆದರೆ ಹಣ ನೀಡಿ ವರ್ಷವಾದರೂ ದಿಲಿಪ್, ಒಪ್ಪಂದದ ಪ್ರಕಾರ ವ್ಯಾನಿಟಿ ವ್ಯಾನ್ ಡೆಲಿವರಿ ನೀಡಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ, ವಾಹನದ ಬಿಡಿ ಭಾಗಗಳು ಬಂದಿವೆ, ನಮ್ಮ ಗ್ಯಾರೇಜ್​ನಲ್ಲಿ ವಾಹನ ರೆಡಿಯಾಗುತ್ತಿದೆ ಎಂದಿದ್ದರಂತೆ ದಿಲಿಪ್. ಕಪಿಲ್ ಪರವಾಗಿ ಮೊಹಮ್ಮದ್ ಹಮೀದ್, ದಿಲಿಪ್​ರ ಗ್ಯಾರೇಜ್​ಗೆ ಹೋದಾಗ ಗಾಡಿ ರೆಡಿಯಾಗಿರಲಿಲ್ಲವಂತೆ. ಆಗ ದಿಲಿಪ್, ತಮಗೆ ಹಣಕಾಸಿನ ಸಮಸ್ಯೆ ಇದ್ದು ಕಪಿಲ್ ಅವರು ಇನ್ನಷ್ಟು ಹಣ ಕೊಟ್ಟರೆ ಗಾಡಿ ರೆಡಿ ಮಾಡಿಕೊಡುವುದಾಗಿ ಹೇಳಿ ಮತ್ತೆ 54 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಂತೆ.

ಇದನ್ನೂ ಓದಿ:Brahmanandam: ಕಪಿಲ್ ಶರ್ಮಾ ಅಲ್ಲ, ಬ್ರಹ್ಮಾನಂದಂ ಭಾರತದ ಶ್ರೀಮಂತ ಕಾಮಿಡಿಯನ್; ಸ್ಟಾರ್​​​ಗಳನ್ನೂ ಮೀರಿಸುತ್ತದೆ ಆಸ್ತಿ

ಇದರಿಂದ ಅನುಮಾನಕ್ಕೊಳಗಾದ ಕಪಿಲ್ ಶರ್ಮಾ, ಹೆಚ್ಚುವರಿ ಹಣವನ್ನು ಕೊಡುವುದಿಲ್ಲವೆಂದು, ಕೂಡಲೇ ಗಾಡಿ ಡೆಲಿವರಿ ನೀಡುವಂತೆ ಕೇಳಿದ್ದಾರೆ. ಇಲ್ಲವಾದಲ್ಲಿ ಹಣ ಮರುಪಾವತಿಸುವಂತೆ ಸೂಚಿಸಿದ್ದಾರೆ. ಅದಾದ ಬಳಿಕ ದಿಲಿಪ್, ಕಪಿಲ್​ಗೆ ಕೆಲವು ಇ-ಮೇಲ್​ಗಳನ್ನು ಕಳಿಸಿದ್ದು, ‘ನೀವು ಸರಿಯಾದ ಸಮಯಕ್ಕೆ ಬಂದು ಗಾಡಿಯನ್ನು ಪರಿಶೀಲನೆ ಮಾಡಿ ಓಕೆ ಮಾಡಲಿಲ್ಲ, ನಿಮ್ಮಿಂದಲೇ ಗಾಡಿ ಡೆಲಿವರಿ ತಡವಾಗಿದೆ’ ಎಂದಿದ್ದರಂತೆ. ಇದರಿಂದ ಸಿಟ್ಟಾದ ಕಪಿಲ್ 2019ರಲ್ಲಿ ದಿಲಿಪ್ ವಿರುದ್ಧ ದೂರು ದಾಖಲಿಸಿದ್ದರು.

ಪ್ರಕರಣದ ಬಗ್ಗೆ ಚಾರ್ಜ್​ಶೀಟ್ ಸಲ್ಲಿಸಲಾಗಿದ್ದು ನಿನ್ನೆ (ಫೆಬ್ರವರಿ 07) ಪ್ರಕರಣದ ವಿಚಾರಣೆ ನಡೆಸಿರುವ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ನ್ಯಾಯಾಲಯವು ಆರೋಪಿ ದಿಲಿಪ್ ಸೇರಿದಂತೆ ಇನ್ನೂ ಐದು ಮಂದಿಯನ್ನು ಫೆಬ್ರವರಿ 26ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ಸಮನ್ಸ್ ಜಾರಿ ಮಾಡಿದೆ.

ದಿಲಿಪ್​ ವಿರುದ್ಧ ಈ ಹಿಂದೆಯೂ ಕೆಲವು ದೂರುಗಳು ದಾಖಲಾಗಿವೆ. ಜಾರಿ ನಿರ್ದೇಶನಾಲಯವು (ಇಡಿ) ದಿಲೀಪ್ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದಾರೆಂದು, 18 ಕೋಟಿಗೂ ಹೆಚ್ಚು ಹಣವನ್ನು ವಿದೇಶದಿಂದ ಅಕ್ರಮವಾಗಿ ಖಾಸಗಿ ಬಳಕೆಗೆ ತೆಗೆದುಕೊಂಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿತ್ತು. ಆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ