ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮಗಳಲ್ಲಿ ‘ಕೌನ್ ಬನೇಗಾ ಕರೋಡ್ಪತಿ’ (Kaun Banega Crorepati) ಕೂಡ ಮುಂಚೂಣಿಯಲ್ಲಿದೆ. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಶೋಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಮನರಂಜನೆ ಜೊತೆಗೆ ಜ್ಞಾನವನ್ನೂ ನೀಡುವುದು ಈ ಕಾರ್ಯಕ್ರಮದ ವಿಶೇಷತೆ. ಅಮಿತಾಭ್ ಬಚ್ಚನ್ (Amitabh Bachchan) ಅವರು ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದ 13ನೇ ಸೀಸನ್ (KBC 13) ಪ್ರಸಾರ ಆಗುತ್ತಿದೆ. ಅದರಲ್ಲಿ ಭಾಗವಹಿಸಿದ ದೇಶ್ ಬಂಧು ಪಾಂಡೆ (Desh Bandhu Panday) ಎಂಬುವವರ ಮೇಲೆ ಈಗ ಒಂದು ಕೇಸ್ ದಾಖಲಾಗಿದೆ!
ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದು ದೇಶ್ ಬಂಧು ಪಾಂಡೆಯವರ ಬಹುಕಾಲದ ಕನಸು. ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ಬರುವ ಮೂಲಕವಾದರೂ ಅಮಿತಾಭ್ ಬಚ್ಚನ್ ಅವರನ್ನು ನೇರವಾಗಿ ಭೇಟಿಯಾಗಬೇಕು ಎಂದು ಅವರು ಕನಸು ಕಂಡಿದ್ದರು. ಅದು ಈ ಸೀಸನ್ನಲ್ಲಿ ನನಸಾಗಿದೆ. ಅಮಿತಾಭ್ ಕೇಳಿದ ಪ್ರಶ್ನೆಗಳಿಗೆ ಕಾರ್ಯಕ್ರಮದ ಹಾಟ್ ಸೀಟ್ನಲ್ಲಿ ಕುಳಿತು ಉತ್ತರಿಸಿದ ದೇಶ್ ಬಂಧು ಪಾಂಡೆ ಅವರಿಗೆ 3,40,000 ಸಾವಿರ ರೂ. ಸಿಕ್ಕಿದೆ. ಆ ಖುಷಿಯಲ್ಲೇ ತೇಲುತ್ತಿದ್ದ ಅವರಿಗೆ ಈಗ ಹೊಸ ತಲೆನೋವು ಶುರು ಆಗಿದೆ.
ದೇಶ್ ಬಂಧು ಪಾಂಡೆ ಮೂಲತಃ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿ ಆಗಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ತಪ್ಪೇನು? ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅವರು ತಮ್ಮೂರಿನಿಂದ ಮುಂಬೈಗೆ ಬರಬೇಕಾಯಿತು. ಅದಕ್ಕಾಗಿ ಕೆಲವು ದಿನಗಳ ಕಾಲ ರಜೆ ಪಡೆಯುವುದು ಅನಿವಾರ್ಯ. ರಜೆ ಬೇಕು ಎಂದು ತಮ್ಮ ಮೇಲಾಧಿಕಾರಿಗಳಿಗೆ ಅರ್ಜಿ ನೀಡಿಯೇ ಅವರು ಬಂದಿದ್ದರು. ಆದರೆ ಮೇಲಾಧಿಕಾರಿಗಳಿಂದ ಅದಕ್ಕೆ ಸಮ್ಮತಿ ಸಿಕ್ಕಿರಲಿಲ್ಲ!
ಅನುಮತಿ ಇಲ್ಲದೇ ಇದ್ದರೂ ಕೂಡ ಅವರು ಕೆಲಸಕ್ಕೆ ರಜೆ ಹಾಕಿ ಕೌನ್ ಬನೇಗಾ ಕರೋಡ್ಪತಿ ಶೋನಲ್ಲಿ ಭಾಗವಹಿಸಿರುವುದರಿಂದ ಅವರ ವಿರುದ್ಧ ರೇಲ್ವೆ ಇಲಾಖೆಯಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ವರದಿ ಆಗಿದೆ. ಅಲ್ಲದೇ ಮುಂದಿನ ಮೂರು ವರ್ಷಗಳ ಕಾಲ ಅವರ ಸಂಬಳ ಹೆಚ್ಚಳ ಆಗದಂತೆ ತಡೆ ಹಿಡಿಯಲಾಗಿದೆ ಎಂದು ಸ್ವತಃ ದೇಶ್ ಬಂಧು ಪಾಂಡೆ ಅವರು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ರೇಲ್ವೆ ಇಲಾಖೆಯ ಮೇಲಾಧಿಕಾರಿಗಳ ಈ ಕ್ರಮವನ್ನು ಕೆಲವು ಉದ್ಯೋಗಿಗಳು ವಿರೋಧಿಸಿದ್ದು, ಪ್ರತಿಭಟನೆಗೂ ಮುಂದಾಗಿದ್ದಾರೆ.
ಇದನ್ನೂ ಓದಿ:
ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ₹7 ಕೋಟಿ ಪ್ರಶ್ನೆಗೆ ಉತ್ತರ ಗೊತ್ತಾ?
KBC 13: ಕರೋಡ್ಪತಿ ಹಾಟ್ಸೀಟ್ನಲ್ಲಿ ಗಂಗೂಲಿ, ಸೆಹ್ವಾಗ್? 13ನೇ ಸೀಸನ್ ನಿರೂಪಣೆಗೆ ಅಮಿತಾಭ್ ರೆಡಿ