ಕನ್ನಡ ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ ನಡುವೆ ಸಖತ್ ಪೈಪೋಟಿ ಇದೆ. ಹೊಸ ಹೊಸ ಸೀರಿಯಲ್ಗಳು ಕೂಡ ಜನಮನ ಗೆಲ್ಲುತ್ತಿವೆ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಲಕ್ಷಣ’ ಧಾರಾವಾಹಿ ಆರಂಭ ಆಗಿತ್ತು. ವಿಭಿನ್ನವಾದ ಕಥಾಹಂದರ ಇಟ್ಟುಕೊಂಡು ಈ ಸೀರಿಯಲ್ ಮೂಡಿಬರುತ್ತಿದೆ. ಪ್ರಮುಖ ಪಾತ್ರದಲ್ಲಿ ಹೊಸ ನಟಿ ವಿಜಯಲಕ್ಷ್ಮೀ ಮತ್ತು ಜಗನ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಒಂದು ವಿಶೇಷ ಎಪಿಸೋಡ್ಅನ್ನು ಚಿತ್ರೀಕರಿಸಲಾಯಿತು. ಅದರಲ್ಲಿ ನಟಿ ವಿಜಯಲಕ್ಷ್ಮೀ ಅವರ ಬದ್ಧತೆ ಕಂಡು ಜಗನ್ ಫಿದಾ ಆಗಿದ್ದಾರೆ. ಹೊಸ ನಟಿಗೆ ಅವರು ಮನಸಾರೆ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಅವರಿಗೆ ದೊಡ್ಡ ಪ್ರೋತ್ಸಾಹ ಸಿಕ್ಕಂತಾಗಿದೆ.
ವಿಜಯಲಕ್ಷ್ಮೀ ಅವರಿಗೆ ಇದು ಮೊದಲ ಸೀರಿಯಲ್. ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಲು ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಅದನ್ನು ಅವರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅದು ಇಡೀ ತಂಡಕ್ಕೆ ಮೆಚ್ಚುಗೆ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ನಿಭಾಯಿಸುತ್ತಿರುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಜಗನ್ ನಿರ್ವಹಿಸುತ್ತಿದ್ದಾರೆ. ವಿಜಯಲಕ್ಷ್ಮೀ ಬಗ್ಗೆ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆ ಮೂಲಕ ಹೊಗಳಿಕೆ ಮಾತುಗಳನ್ನು ಹಂಚಿಕೊಂಡರು.
‘ಸತತ 12 ಗಂಟೆಗಳ ಕಾಲ ಮಳೆಯಲ್ಲಿ ಚಿತ್ರೀಕರಿಸಿದರೂ ಕೂಡ ನೀವು ಕಿಂಚಿತ್ತೂ ವಿಚಲಿತ ಆಗಲಿಲ್ಲ. ನಿಮ್ಮ ಬದ್ಧತೆಯನ್ನು ಮೆಚ್ಚುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ಜಗನ್ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ಅನೇಕ ವೀಕ್ಷಕರು ಧಾರಾವಾಹಿ ಕಥೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಂದು ಒಳ್ಳೆಯ ಸಂದೇಶ ಇರುವ ಸೀರಿಯಲ್ ಎಂಬ ಹೊಗಳಿಕೆ ಕೇಳಿಬರುತ್ತಿದೆ.
ಕಪ್ಪು ಮೈಬಣ್ಣ ಹೊಂದಿದವಳು ಎಂಬ ಕಾರಣಕ್ಕೆ ಕಥಾನಾಯಕಿಯನ್ನು ಎಲ್ಲರೂ ಜರಿಯುತ್ತಾರೆ. ಸಮಾಜದಲ್ಲಿ ಇಂಥ ಅವಮಾನವನ್ನು ಕೋಟ್ಯಂತರ ಜನರು ಪ್ರತಿದಿನ ಅನುಭವಿಸುತ್ತಿದ್ದಾರೆ. ಕಪ್ಪು ಸುಂದರವಲ್ಲ ಎಂಬ ತಪ್ಪು ಕಲ್ಪನೆಯನ್ನು ಹೊಡೆದುಹಾಕಲು ಈ ಸೀರಿಯಲ್ ಪ್ರಯತ್ನಿಸುತ್ತಿದೆ. ಆ ಕಾರಣಕ್ಕಾಗಿ ಜನರಿಗೆ ಇದು ಇಷ್ಟವಾಗುತ್ತಿದೆ. ಮೊದಲ ಸೀರಿಯಲ್ನಲ್ಲೇ ವಿಜಯಲಕ್ಷ್ಮೀ ಅವರಿಗೆ ವೀಕ್ಷಕರಿಗೆ ಭರ್ಜರಿ ಪ್ರೀತಿ ಸಿಗುತ್ತಿದೆ.
ಭೂಪತಿ ಎಂಬ ಪಾತ್ರಕ್ಕೆ ಜಗನ್ ಬಣ್ಣ ಹಚ್ಚುತ್ತಿದ್ದಾರೆ. ಬಾಣಸಿಗನಾಗಿ ಹಾಗೂ ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿಯಾಗಿ ಎರಡು ಶೆಡ್ನಲ್ಲಿ ಜಗನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್ ರಾಜ್ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
ಬಾಲಿವುಡ್ನಲ್ಲಿ ಸ್ಟಾರ್ ಆದಮೇಲೂ ಸುಶಾಂತ್ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?