ಧಾರಾವಾಹಿ: ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಭೂಪತಿಯ ಮನೆಗೆ ಬಂದ ಮೌರ್ಯ ಮನೆಯವರ ಕೈಗೆ ಸಿಕ್ಕಿ ತಪ್ಪಿಸಿಕೊಂಡು ಹೋಗುವಾಗ ಶ್ವೇತಾಳ ಕೋಣೆ ಸೇರಿಕೊಳ್ಳುತ್ತಾನೆ. ಅಲ್ಲೇ ಇದ್ದ ಶ್ವೇತಾಳಿಗೆ ಬ್ಲಾಕ್‌ಮೇಲ್ ಮಾಡುತ್ತಾ ನಾನು ಹೇಳಿದ ಮಾತನ್ನು ಕೇಳದಿದ್ದರೆ ನಿನ್ನ ಬಂಡವಾಳ ಬಯಲು ಮಾಡುತ್ತೇನೆ ಎಂದು ಹೇಳುತ್ತಾನೆ. ಆಕೆಗೆ ಮೌರ್ಯ ಹೇಳಿದಂತೆ ನಡೆದುಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ಮೌರ್ಯನ ಜೊತೆ ಕೈಜೋಡಿಸಿದ ಶ್ವೇತಾ
ಶ್ವೇತಾಳ ಪರಿಸ್ಥಿತಿ ಬಿಸಿ ತುಪ್ಪವನ್ನು ಬಾಯಿಗೆ ಹಾಕಿ ನುಂಗಲು ಆಗದೆ ಉಗುಳಲು ಆಗದೆ ಇರುವಂತಹ ಪರಿಸ್ಥಿತಿಯಾಗಿದೆ. ನೆನ್ನೆ ಮೌರ್ಯ ಹೇಳಿದ ಹಾಗೆ ನಕ್ಷತ್ರಳನ್ನು ಸಾಯಿಸಲು ಶ್ವೇತಾ ಅವನಿಗೆ ಸಹಾಯ ಮಾಡಲೇಬೇಕಾಗಿದೆ. ಇಲ್ಲಂದ್ರೆ ಶ್ವೇತಾಳ ಬಣ್ಣ ಬಯಲಾಗುವುದು ಖಂಡಿತ. ಮೌರ್ಯ ಬೆಳಗ್ಗೆನೇ ಶ್ವೇತಾಳಿಗೆ ಫೋನ್ ಮಾಡಿ ಹೇಗಾದರೂ ನಕ್ಷತ್ರಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬಾ, ಅವಳ ಪ್ರಾಣವನ್ನು ಇಂದೇ ತೆಗೆದುಬಿಡುತ್ತೇನೆ ಎಂದು ಹೇಳುತ್ತಾನೆ.
ಇದರಿಂದ ಭಯಗೊಂಡ ಶ್ವೇತಾ ಈ ಕೆಲಸ ನನ್ನಿಂದ ಆಗುವುದಿಲ್ಲ, ಏನು ಹುಡುಗಾಟ ಆಡುತ್ತಿದ್ದೀರಾ ಮೌರ್ಯ ಎಂದು ಕೇಳಿದಾಗ, ನನ್ನ ಮಾತನ್ನು ಕೇಳದೆ ನಿನಗೆ ಬೇರೆ ದಾರಿ ಇಲ್ಲ. ನಾನು ಹೇಳಿದ ಹಾಗೆ ನಕ್ಷತ್ರಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರದಿದ್ದರೆ, ನೀನು ಏನೆಲ್ಲಾ ಕತರ್ನಾಕ್ ಆಟಗಳನ್ನು ಆಡಿದ್ದೀಯಾ ಹಾಗೂ ನನಗೆ ಈ ಮೊದಲು ಎಷ್ಟೆಲ್ಲಾ ಸಹಾಯ ಮಾಡಿದ್ದೀಯಾ ಎಂಬುವುದನ್ನು ಎಲ್ಲರ ಬಳಿಯೂ ಹೇಳುತ್ತೇನೆ. ಆಗ ನನ್ನೊಂದಿಗೆ ನೀನು ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ಮೌರ್ಯ ಹೆದರಿಸುತ್ತಾನೆ.
ಇದನ್ನು ಓದಿ: Lakshana Serial: ಮೌರ್ಯನ ಕೈಗೊಂಬೆಯಾಗಿದ್ದಾಳೆ ಶ್ವೇತಾ, ನಾನು ಹೇಳಿದ ಹಾಗೆ ನೀನು ಕೇಳಲೇಬೇಕು
ಇವನ ಈ ಮಾತನ್ನು ಕೇಳಿ ಬೇರೆ ವಿಧಿಯಿಲ್ಲದೆ ಸಹಾಯ ಮಾಡಲೇಬೇಕಾಗುತ್ತದೆ. ಇದಕ್ಕೆ ಏನೋ ಒಂದು ಪ್ಲಾನ್ ಮಾಡಿ ಹೇಗಾದರೂ ನಕ್ಷತ್ರಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರಲೇಬೇಕು ಅಂತ ಯೋಜನೆಯನ್ನು ಹಾಕುತ್ತಾಳೆ. ತಾನು ಮಾಡಿದ ಪ್ಲಾನ್ ಪ್ರಕಾರ ಯಾರು ಇಲ್ಲದ ಸಂದರ್ಭದಲ್ಲಿ ನಕ್ಷತ್ರಳ ಬಳಿ ಹೋದ ಶ್ವೇತಾ, ನನಗೆ ದೇವಸ್ಥಾನಕ್ಕೆ ಹೋಗಬೇಕು ಪ್ಲೀಸ್ ನನ್ನ ಜೊತೆ ನೀನು ಕೂಡಾ ಬಾ ಎಂದು ಹೇಳುತ್ತಾಳೆ. ಈಕೆಯ ಈ ಮಾತನ್ನು ಕೇಳಿ ನಕ್ಷತ್ರಳಿಗೆ ಏನೋ ಸರಿಯಿಲ್ಲ ಎಂದು ಆಗುತ್ತದೆ. ಆದರೂ ಒತ್ತಾಯ ಮಾಡಿ ದೇವಸ್ಥಾನಕ್ಕೆ ಬಾ ಎಂದು ಹೇಳುತ್ತಾಳೆ.
ಈಕೆಯ ಮಾತನ್ನು ಕೇಳಿದ ಭೂಪತಿ ಕೋಪಗೊಂಡು, ಏನು ಹೇಳುತ್ತಿದ್ದೀರಾ ಶ್ವೇತಾ. ನಿನ್ನೆ ತಾನೆ ಮನೆಯಲ್ಲಿ ಇಷ್ಟೆಲ್ಲಾ ರಾದ್ಧಾಂತ ಆಗಿದೆ. ನಕ್ಷತ್ರಳ ಪ್ರಾಣಕ್ಕೆ ಮೌರ್ಯನಿಂದ ಆಪತ್ತು ಇದೇ ಎಂದು ಗೊತ್ತಿದ್ದರೂ ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಬೇಕೆಂದಿದ್ದೀರಾ. ಯಾರು ಕೂಡಾ ಮನೆಯಿಂದ ಹೊರಗೆ ಹೋಗುವ ಹಾಗೆ ಇಲ್ಲ ಎಂದು ಹೇಳಿ ಹೋಗುತ್ತಾನೆ. ಆಗಂತೂ ಶ್ವೇತಾಳಿಗೆ ಕೋಪ ನೆತ್ತಿಗೇರುತ್ತದೆ. ಆಕೆಯ ಮುಖಭಾವವನ್ನು ಗಮನಿಸಿದ ನಕ್ಷತ್ರಳಿಗೆ ಈಕೆ ಏನೋ ಮಸಲತ್ತು ನಡೆಸುತ್ತಿದ್ದಾಳೆ ಎಂಬ ಸಂಶಯ ಮೂಡುತ್ತದೆ. ಹಾಗಾಗಿ ಶ್ವೇತಾಳ ಹಿಂದೆಯೇ ಅವಳ ರೂಮ್ ಬಳಿ ಹೋಗುತ್ತಾಳೆ.
ನನ್ನಿಂದ ನಕ್ಷತ್ರಳನ್ನು ಹೊರಗಡೆ ಕರೆದುಕೊಂಡು ಬರಲು ಆಗುವುದಿಲ್ಲ. ಅದಕ್ಕೆ ಭೂಪತಿ ಯಾವ ಅವಕಾಶವನ್ನು ಮಾಡಿಕೊಡುವುದಿಲ್ಲ. ಅವಳ ಪ್ರಾಣವನ್ನು ತೆಗೆಯಬೇಕೆಂದಿದ್ದರೆ ಸೈಲೆಂಟ್ ಆಗಿ ಕೆಲಸ ಮುಗಿಸಬೇಕಿತ್ತು. ಇಷ್ಟೆಲ್ಲಾ ಡ್ರಾಮ ಮಾಡುವ ಅವಶ್ಯಕತೆ ಏನಿತ್ತು. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡು ಎಂದು ಮೌರ್ಯನ ಬಳಿ ಗದರುತ್ತಾ ಮಾತನಾಡುತ್ತಾಳೆ. ಇದೆಲ್ಲ ನನ್ನ ಜೊತೆ ಬೇಡ, ಅದೇನು ಮಾಡುತ್ತೀಯಾ ಗೊತ್ತಿಲ್ಲ ನಕ್ಷತ್ರ ಮನೆಯಿಂದ ಹೊರಗೆ ಬರಬೇಕು. ಇಲ್ಲ ಅಂದ್ರೆ ನಿನ್ನ ಬಂಡವಾಳ ಬಯಲಾಗುತ್ತದೆ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ. ಈಗ ಶ್ವೇತಾಳಿಗೆ ಏನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಇವಳ ಮಾತನ್ನು ದೂರದಿಂದಲೇ ಕೇಳಿಸಿದ ನಕ್ಷತ್ರಳಿಗೆ ಇವಳೇನಾದರೂ ಮೌರ್ಯನ ಜೊತೆ ಕೈಜೋಡಿಸಿದ್ದಾಳಾ ಎಂಬ ಅನುಮಾನ ಮೂಡುತ್ತದೆ. ಮೌರ್ಯನ ಮಾತಿನ ಪ್ರಕಾರ ಶ್ವೇತಾ, ನಕ್ಷತ್ರಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರುತ್ತಾಳಾ ಎಂಬುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ