ಕಿರುತೆರೆ ಲೋಕದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈ ಮೊದಲು ಮಾಡಲಾದ ಪ್ರಯೋಗಗಳು ಯಶಸ್ವಿ ಆದರೆ ಅದನ್ನು ಪಾಲಿಸಿಕೊಂಡು ಹೋಗಲಾಗುತ್ತದೆ. ಆ ಪೈಕಿ ‘ಮಹಾ ಸಂಚಿಕೆ’ ಪ್ರಯೋಗವೂ ಒಂದು. ಹಬ್ಬದ ಸಂದರ್ಭದಲ್ಲಿ ಮಹಾ ಸಂಚಿಕೆ, ಅಂದರೆ ಒಂದು ಗಂಟೆಗಳ ಕಾಲ ಧಾರಾವಾಹಿ ಪ್ರಸಾರ ಮಾಡಲಾಗುತ್ತದೆ. ಈಗ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜೀ ಕನ್ನಡ (Zee Kannada) ವಾಹಿನಿ ಧಾರಾವಾಹಿಗಳ ಮಹಾ ಸಂಚಿಕೆ ಆರಂಭಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಈ ವಿಚಾರ ವೀಕ್ಷಕರ ಖುಷಿಗೆ ಕಾರಣ ಆಗಿದೆ.
ಸೆಪ್ಟೆಂಬರ್ 7 ಕೃಷ್ಣ ಜನ್ಮಾಷ್ಟಮಿ ಇದೆ. ಇದು ಹಿಂದೂಗಳ ಪಾಲಿಗೆ ವಿಶೇಷ ಹಬ್ಬ. ಈ ಕಾರಣದಿಂದ ಜೀ ಕನ್ನಡ ವಾಹಿನಿ ವೀಕ್ಷಕರಿಗೆ ವಿಶೇಷ ಉಡುಗೊರೆ ನೀಡುತ್ತಿದೆ. ಸೋಮವಾರದಿಂದ (ಸೆಪ್ಟೆಂಬರ್ 4) ಶುಕ್ರವಾರದವರೆಗೆ (ಸೆಪ್ಟೆಂಬರ್ 8) ಕೆಲವು ಧಾರಾವಾಹಿಗಳ ಮಹಾ ಸಂಚಿಕೆ ಪ್ರಸಾರ ಕಾಣಲಿದೆ. ಈ ಕುರಿತು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ.
ಸೆಪ್ಟೆಂಬರ್ 4ರಂದು ‘ಅಮೃತಧಾರೆ’ ಧಾರಾವಾಹಿಯ ಮಹಾ ಸಂಚಿಕೆ ಪ್ರಸಾರ ಕಂಡಿದೆ. ಈಗಾಗಲೇ ಮಹಿಮಾ ಹಾಗೂ ಜೀವಾ ಮದುವೆ ನೆರವೇರಿದೆ. ಈಗ ಭೂಮಿಕಾ ಹಾಗೂ ಗೌತಮ ಮದುವೆ ನಡೆಯುತ್ತಿದೆ. ಈ ವಿಶೇಷ ಸಂದರ್ಭದಲ್ಲೇ ಮಹಾ ಸಂಚಿಕೆ ಪ್ರಸಾರ ಕಂಡಿರೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಸಂಜೆ 6:30-7:30ರವರೆಗೆ ಮಹಾ ಸಂಚಿಕೆ ಪ್ರಸಾರಗೊಂಡಿದೆ.
ಇಂದು (ಸೆಪ್ಟೆಂಬರ್ 5) ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಮಹಾ ಸಂಚಿಕೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಮೊದಲ ಸ್ಥಾನದಲ್ಲಿದೆ. ಒಂದೇ ದಿನ ಎರಡು ಎಪಿಸೋಡ್ಗಳನ್ನು ವೀಕ್ಷಕರು ಕಣ್ತುಂಬಿಕೊಳ್ಳಬಹುದು. ಪ್ರಸಾರ ಸಮಯ: 7:30ರಿಂದ 8:30.
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಈ ಧಾರಾವಾಹಿ ದಿನ ಕಳೆದಂತೆ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಈ ಧಾರಾವಾಹಿಯ ಮಹಾ ಸಂಚಿಕೆ ಬುಧವಾರ (ಸೆಪ್ಟೆಂಬರ್ 6) ಪ್ರಸಾರ ಕಾಣುತ್ತಿದೆ ಅನ್ನೋದು ವಿಶೇಷ. ಪ್ರಸಾರ ಸಮಯ 8:30ರಿಂದ 9:30.
ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್ಪಿ
‘ಸೀತಾ ರಾಮ’ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಮೊದಲ ಸ್ಥಾನದಲ್ಲಿ (ನಗರ ಭಾಗ) ಇದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಪೂಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಅಶೋಕ್ ಮೊದಲಾದವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿ ಬಗ್ಗೆ ದಿನ ಕಳೆದಂತೆ ಕುತೂಹಲ ಹೆಚ್ಚುತ್ತಿದೆ. ಕೃಷ್ಣಾಷ್ಟಮಿ ದಿನ ಈ ಧಾರಾವಾಹಿಯ ಮಹಾ ಸಂಚಿಕೆ ಪ್ರಸಾರ ಕಾಣಲಿದೆ. ಪ್ರಸಾರ ಸಮಯ 9:30ರಿಂದ 10:30.
‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಸಾಕಷ್ಟು ಮೆಚ್ಚುಗೆ ಪಡೆದಿದೆ. ಮಧ್ಯಮ ವರ್ಗದ ಜನರ ಜಂಜಾಟದ ಕಥೆಯನ್ನು ಈ ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ. ನವೀನ್ ಕೃಷ್ಣ, ಕೃತಿಕಾ ರವೀಂದ್ರ, ಉಮೇಶ್ ಮೊದಲಾದವರು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈ ಧಾರಾವಾಹಿಯ ಮಹಾ ಸಂಚಿಕೆ ಶುಕ್ರವಾರ ಪ್ರಸಾರ ಕಾಣಲಿದೆ. ಪ್ರಸಾರ ಸಮಯ 10:30ರಿಂದ 11:30.
ಟಿಆರ್ಪಿ ರೇಸ್ನಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಹಾಗೂ ‘ಸತ್ಯ’ ಧಾರಾವಾಹಿ ಇದೆ. ಆದರೆ, ಇವುಗಳಿಗೆ ಮಹಾ ಸಂಚಿಕೆ ಇಲ್ಲ. ಇದು ಈ ಧಾರಾವಾಹಿ ವೀಕ್ಷಕರ ಬೇಸರಕ್ಕೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ