ಕೆಬಿಸಿ 13: ರಿಯಾಲಿಟಿ ಶೋಗಳಲ್ಲಿ ತನ್ನದೇ ಆದ ಶೈಲಿಯಿಂದ ದೇಶದಾದ್ಯಂತ ಪ್ರೇಕ್ಷಕರನ್ನು ಹೊಂದಿರುವ ಕೌನ್ ಬನೇಗಾ ಕರೋಡ್ಪತಿಯ 13ನೇ ಸೀಸನ್ ಪ್ರಸಾರವಾಗುತ್ತಿದೆ. ಅಮಿತಾಭ್ ಬಚ್ಚನ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಪ್ರತಿ ಶುಕ್ರವಾರ ವಿವಿಧ ರಂಗಗಳಲ್ಲಿ ಹೆಸರು ಮಾಡಿರುವ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಅದರಲ್ಲಿ ಗೆದ್ದ ಹಣವನ್ನು ವಿವಿಧ ಚಾರಿಟಿಯ ಕಾರ್ಯಗಳಿಗೆ ಮೀಸಲಿಡುವುದು ಕಾರ್ಯಕ್ರಮದ ವಿಶೇಷ. ಈಗಾಗಲೇ ಈ ಕಾರ್ಯಕ್ರಮದಲ್ಲಿ ಹಲವು ಖ್ಯಾತನಾಮರು ಭಾಗವಹಿಸಿ ಎಲ್ಲರ ಮನಗೆದ್ದಿದ್ದಾರೆ. ಈ ವಾರ ಭಾಗವಹಿಸುತ್ತಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರಿಗೆ ಪ್ರತ್ಯಕ್ಷವಾಗಿ ಮತ್ತೋರ್ವರಿಗೆ ಪರೋಕ್ಷವಾಗಿ ಕನ್ನಡದ ನಂಟಿದೆ ಎನ್ನುವುದು ವಿಶೇಷ. ಏನಿದು ಅಚ್ಚರಿ! ಅಂತೀರಾ? ಮುಂದೆ ಓದಿ.
ಕೆಬಿಸಿ 13ರ ಪ್ರತಿ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ಸೆಲೆಬ್ರಿಟಿ ಸಂಚಿಕೆ ಪ್ರಸಾರವಾಗುತ್ತದೆ. ಇದರಲ್ಲಿ ಮೊದಲ ವಾರ ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಈ ತಾರೆಯರು ಬರೋಬ್ಬರಿ ₹ 25 ಲಕ್ಷ ಹಣವನ್ನು ಗೆದ್ದಿದ್ದರು. ಎರಡನೇ ವಾರದಲ್ಲಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶನಕಿ ಫರಾ ಖಾನ್ ಭಾಗವಹಿಸಿದ್ದರು. ಮೂರನೇ ವಾರದಲ್ಲಿ ಟೊಕಿಯೊ ಒಲಂಪಿಕ್ಸ್ ಪದಕ ವಿಜೇತ ತಾರೆಯರಾದ ನೀರಜ್ ಚೋಪ್ರಾ ಹಾಗೂ ಪಿ.ಶ್ರೀಜೇಶ್ ಭಾಗವಹಿಸಿದ್ದರು. ಕಳೆದ ವಾರದ ಸಂಚಿಕೆಯಲ್ಲಿ ಕನ್ನಡದಲ್ಲೂ ನಟಿಸಿದ್ದ ಸುನೀಲ್ ಶೆಟ್ಟಿ ಹಾಗೂ ಜಾಕಿ ಶ್ರಾಫ್ ಪಾಲ್ಗೊಂಡು ಭರ್ಜರಿ ಆಟವಾಡಿದ್ದರು. ಆದ್ದರಿಂದಲೇ ವೀಕ್ಷಕರಿಗೆ ಈ ವಾರ ಯಾವ ತಾರೆ ಭಾಗವಹಿಸುತ್ತಾರೆ ಎಂಬ ಕುತೂಹಲ ಇತ್ತು.
ಈ ವಾರ ಭಾರತೀಯ ವೆಬ್ ಸೀರೀಸ್ ಹಾಗೂ ಚಿತ್ರಗಳಲ್ಲಿ ವಿಶಿಷ್ಟ ಅಭಿನಯದಿಂದ ಹೆಸರು ಮಾಡಿರುವ ಇಬ್ಬರು ತಾರೆಯರಾದ ಪಂಕಜ್ ತ್ರಿಪಾಠಿ ಹಾಗೂ ಪ್ರತೀಕ್ ಗಾಂಧಿ ಭಾಗವಹಿಸಲಿದ್ದಾರೆ. ಈಗಾಗಲೇ ಚಾನಲ್ ಈ ಕುರಿತು ಪ್ರೋಮೋ ಹಂಚಿಕೊಂಡಿದ್ದು, ಈ ನಟರ ಸಂಭಾಷಣೆಗಳು ಎಲ್ಲರ ಮುಖದಲ್ಲಿ ನಗು ಮೂಡಿಸಿವೆ. ಪಂಕಜ್ ತ್ರಿಪಾಠಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಶಿವರಾಜ್ ಕುಮಾರ್ ನಟನೆಯ ‘ಚಿಗುರಿದ ಕನಸು’ ಚಿತ್ರದಲ್ಲಿ ಸಣ್ಣ ಪಾತ್ರವೊಂದನ್ನು ನಿಭಾಯಿಸಿದ್ದರು. ನಂತರ ಬಾಲಿವುಡ್ನಲ್ಲಿ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡ ಈ ನಟ, ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಶಕೀಲಾ’ ಚಿತ್ರದ ಮೂಲಕ ಕನ್ನಡಕ್ಕೆ ಕಮ್ಬ್ಯಾಕ್ ಮಾಡಿದ್ದರು. ಪ್ರಸ್ತುತ ವಿವಿಧ ಸೀರೀಸ್ ಹಾಗೂ ಚಿತ್ರಗಳಲ್ಲಿ ಬ್ಯುಸಿಯಿರುವ ಪಂಕಜ್ ತ್ರಿಪಾಠಿ ಕೆಬಿಸಿ 13ರ ಈ ವಾರದ ಸೆಲೆಬ್ರಿಟಿ ಅತಿಥಿಗಳಲ್ಲಿ ಒಬ್ಬರಾಗಿದ್ದಾರೆ.
ಶೋನಲ್ಲಿ ಭಾಗವಹಿಸುತ್ತಿರುವ ಮತ್ತೊಬ್ಬ ನಟ ಪ್ರತೀಕ್ ಗಾಂಧಿ ಈಗಾಗಲೇ ‘ಸ್ಕ್ಯಾಮ್ 1992’ ಚಿತ್ರದ ಮೂಲಕ ದೇಶದೆಲ್ಲೆಡೆ ತಮ್ಮದೇ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಅವರ ಮುಂದಿನ ಚಿತ್ರ ‘ಭವಾಯಿ’ಗೆ ಕನ್ನಡದ ನೆಲದಲ್ಲಿ ವೃತ್ತಿ ಬದುಕು ರೂಪಿಸಿಕೊಂಡ ಐಂದ್ರಿತಾ ರೇ ನಾಯಕಿ. ಹೀಗೆ ಪ್ರತೀಕ್ ಗಾಂಧಿ ಅವರಿಗೂ ಪರೋಕ್ಷವಾಗಿ ಕನ್ನಡದ ನಂಟಿದೆ. ಇದೀಗ ಈ ವಾರದ ಸೆಲೆಬ್ರಿಟಿ ಶೋನಲ್ಲಿ ಪಂಕಜ್ ಹಾಗೂ ಪ್ರತೀಕ್ ಭಾಗವಹಿಸುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕಾರ್ಯಕ್ರಮದ ಒಂದು ಪ್ರೋಮೋ:
ಪಂಕಜ್ ತ್ರಿಪಾಠಿ ಹಾಗೂ ಪ್ರತೀಕ್ ಗಾಂಧಿ ಭಾಗವಹಿಸಿರುವ ಸಂಚಿಕೆ ಅಕ್ಟೋಬರ್ 1ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಇದನ್ನೂ ಓದಿ:
‘GST ಪಾವತಿಸಿದ್ದೀರಾ?’ ಎಂದು ಕೆಬಿಸಿ ವೇದಿಕೆಯಲ್ಲೇ ಅಮಿತಾಭ್ರನ್ನು ಪ್ರಶ್ನಿಸಿದ ಮಹಿಳಾ ಅಧಿಕಾರಿ; ಮುಂದೇನಾಯ್ತು?
ಸ್ಪರ್ಧಿ ತನ್ನೊಂದಿಗೆ ಫ್ಲರ್ಟ್ ಮಾಡಿದಾಗ ಕೆಬಿಸಿ ನಿರ್ಮಾಪಕರಿಗೆ ಶೋ ನಿಲ್ಲಿಸಲು ಹೇಳಿದ ಅಮಿತಾಭ್!; ಕಾರಣವೇನು?
ಕಿರುತೆರೆ ನಟಿಯ ಜತೆಗಿನ ಪ್ರೀತಿಯನ್ನು ಅಧಿಕೃತ ಮಾಡಿದ ಹೀರೋ; ಮೊದಲೇ ಗೊತ್ತಿತ್ತು ಎಂದ ಫ್ಯಾನ್ಸ್