ಈಗ ಬಿಗ್ಬಾಸ್ನ ಹತ್ತನೇ ಸೀಸನ್ (Bigg Boss Kannada season 10) ನಡೆಯುತ್ತಿದೆ. ಈ ವೆರಗೆ ನಡೆದಿರುವ ಒಂಬತ್ತು ಸೀಸನ್ಗಳಲ್ಲಿ ಒಂದು ಬಾರಿ ಮಾತ್ರವೇ ಮಹಿಳೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ ಅದುವೇ ನಟಿ ಶ್ರುತಿ. ಈ ಸೀಸನ್ನಲ್ಲಿ ಕೆಲ ಗಟ್ಟಿ ಆಟಗಾರ್ತಿಯರು ಮನೆಯಲ್ಲಿದ್ದಾರೆ. ಆದರೆ ಅವರನ್ನು ಗೆಲ್ಲಲು ಪುರುಷ ಸ್ಪರ್ಧಿಗಳು ಬಿಡುತ್ತಿಲ್ಲವೇ, ಬಿಗ್ಬಾಸ್ ನಲ್ಲಿ ಮಹಿಳೆಯರು ಗೆಲ್ಲದಿರಲು ಅವಕಾಶಗಳ ಕೊರತೆಯೇ ಕಾರಣವೇ? ಈ ಬಗ್ಗೆ ಚರ್ಚೆಯೊಂದನ್ನು ಸಂಗೀತಾ ಶೃಂಗೇರಿ ಶುರು ಮಾಡಿದ್ದಾರೆ. ಈ ಬಗ್ಗೆ ಜೋರು ಚರ್ಚೆ ಮನೆಯಲ್ಲಿ ನಡೆದಿದೆ.
ಬಿಗ್ಬಾಸ್ ಮನೆಯಲ್ಲಿ ಕಳೆದೆರಡು ವಾರ ಹೆಚ್ಚು ಜಗಳಿಗೆ ಅವಕಾಶ ಇಲ್ಲದ ಮಾದರಿಯ ಟಾಸ್ಕ್ಗಳಿದ್ದವು. ಕಳೆದ ವಾರವಂತೂ ಸ್ಪರ್ಧಿಗಳ ಕುಟುಂಬದವರು ಮನೆಗೆ ಬಂದಿದ್ದರಿಂದ ಯಾವುದೇ ಟಾಸ್ಕ್ ನಡೆದಿರಲಿಲ್ಲ. ಸ್ಪರ್ಧಿಗಳ ಕುಟುಂಬದ ಸದಸ್ಯರ ಕೋರಿಕೆಯನ್ನು ಪರಿಗಣಿಸಿ ತನಿಷಾ ಮನೆಯ ಕ್ಯಾಪ್ಟನ್ ಆದರು. ಆದರೆ ಈ ವಾರ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ತಲೆದೂರುವ ರೀತಿಯ ಟಾಸ್ಕ್ಗಳೇ ಹೆಚ್ಚಿಗೆ ಬರುತ್ತಿವೆ.
ಹತ್ತು ಲಕ್ಷ ಗೆಲ್ಲಲು ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ನೀರಿನಲ್ಲಿ ಇಳಿದು, ಉಸಿರು ಬಿಗಿ ಹಿಡಿದು ಹಾಗೂ ಗುರಿ ಇಡುವ ಕುಶಲತೆ ಬಯಸುವ ಟಾಸ್ಕ್ ಇದಾಗಿರಲಿದೆ ಎಂದು ಬಿಗ್ಬಾಸ್ ಮೊದಲೇ ಹೇಳಿದ್ದರು. ಹಾಗಾಗಿ ಮನೆಯ ಹಲವು ಸ್ಪರ್ಧಿಗಳು ಸಂಗೀತಾರನ್ನು ಹೊರಗಿಟ್ಟು ವಿನಯ್, ಕಾರ್ತಿಕ್, ಮೈಖಲ್ ಹಾಗೂ ತುಕಾಲಿಯನ್ನು ಆರಿಸಿದರು. ಅಂತಿಮವಾಗಿ ಕ್ಯಾಪ್ಟನ್ ತನಿಷಾ ಸಹ ಅದೇ ಆಯ್ಕೆ ಮಾಡಿದರು. ಇದು ಸಂಗೀತಾಗೆ ತುಸುವೂ ಇಷ್ಟವಾಗಲಿಲ್ಲ.
ಇದನ್ನೂ ಓದಿ:ಬಿಗ್ಬಾಸ್: ಯಾವ ಸ್ಪರ್ಧಿಗಳಿಗೆ ಬಿತ್ತು ಕಿಚ್ಚ ಸುದೀಪ್ರ ಮಾತಿನ ಚಾಟಿ ಏಟು
ಬಾತ್ರೂಂನಲ್ಲಿ ಅಳುತ್ತಾ ಕೂತಿದ್ದ ಸಂಗೀತಾ, ಹಾಲ್ಗೆ ಬಂದ ಬಳಿಕ ವಿನಯ್ ಏನಾಯ್ತೆಂದು ಕೇಳಿದರು. ಆಗ ಸಂಗೀತಾ ನೀವು ನನಗೆ ಅವಕಾಶ ನೀಡಲಿಲ್ಲ, ಹೀಗೆ ಮಾಡುವುದರಿಂದಲೇ ಈ ಮನೆಯಲ್ಲಿ ಮಹಿಳೆಯರು ಗೆಲ್ಲುವುದಿಲ್ಲ ಎಂದರು. ಪುರುಷ ಸ್ಪರ್ಧಿಗಳು ಮಹಿಳೆಯರನ್ನು ವೀಕೆ ಎಂದು ಪರಿಗಣಿಸುತ್ತಾರೆ, ಆಡಲು ಸಮಾನ ಅವಕಾಶ ನೀಡುವುದಿಲ್ಲ ಎಂಬ ಚರ್ಚೆ ಆರಂಭಿಸಿದರು.
ಅಪರೂಪಕ್ಕೆ ತಾಳ್ಮೆ ಕಳೆದುಕೊಳ್ಳದೆ ಮಾತನಾಡಿದ ವಿನಯ್, ಮಹಿಳೆ-ಪುರುಷ ಎಂಬ ವಿಷಯವನ್ನು ತರಬೇಡ, ಇದು ಕೌಶಲ್ಯ ಆಧರಿತ ಟಾಸ್ಕ್ ಎಂದರು. ಮೈಖಲ್ ಇನ್ನೂ ವಿವರವಾಗಿ, ನಿನಗೆ ಆಡಲು ಅವಕಾಶ ಸಿಗಲಿಲ್ಲ ಅದಕ್ಕೆ ನಿನಗೆ ಈ ಟಾಸ್ಕ್ಗೆ ಬೇಕಾದ ಕೌಶಲ್ಯ ಇಲ್ಲದಿರುವುದು ಕಾರಣ, ಅದನ್ನು ಹೇಳುವ ಬದಲಿಗೆ ಮಹಿಳೆಯರಿಗೆ ಅವಕಾಶ ನೀಡಲಾಗಿಲ್ಲ ಎಂದು ಹೇಳುವುದು ತಪ್ಪು ಎಂದರು. ಅಲ್ಲದೆ, ಅದಕ್ಕೆ ಮುಂಚಿನ ಟಾಸ್ಕ್ನಲ್ಲಿ ತನಿಷಾ ಮೊದಲಿಗೆ ಸಂಗೀತಾ ಹೆಸರನ್ನೇ ತೆಗೆದುಕೊಂಡು ಅವಕಾಶ ಕೊಟ್ಟಿದ್ದನ್ನು ಸಹ ಮೈಖಲ್ ಹೇಳಿದರು. ಬಳಿಕ ಸಂಗೀತಾ ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 pm, Wed, 3 January 24