ನಟಿ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ (Bigg Boss Kannada) ಪಯಣದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಹಲವು ಸ್ಟ್ರಾಂಗ್ ಸ್ಪರ್ಧಿಗಳಿಗೆ ಪೈಪೋಟಿ ನೀಡಿ ಅವರು ಫಿನಾಲೆ ವಾರದ ತನಕ ಬಂದಿದ್ದಾರೆ. ಹಲವು ಏಳು ಬೀಳುಗಳನ್ನು ಅವರು ಬಿಗ್ ಬಾಸ್ ಮನೆಯಲ್ಲಿ ಕಂಡಿದ್ದಾರೆ. ಕಳಪೆ, ಉತ್ತಮ, ಕ್ಯಾಪ್ಟನ್, ಕಿಚ್ಚನ ಚಪ್ಪಾಳೆ.. ಹೀಗೆ ಎಲ್ಲವನ್ನೂ ಅವರು ಪಡೆದುಕೊಂಡಿದ್ದಾರೆ. ಸ್ನೇಹ ಬೆಳೆಸಿದ್ದಾರೆ, ನಿಷ್ಠುರ ಕಟ್ಟಿಕೊಂಡಿದ್ದಾರೆ, ತಪ್ಪು ಮಾಡಿದ್ದಾರೆ, ಕ್ಷಮೆ ಕೇಳಿದ್ದಾರೆ. ಎಲ್ಲ ರೀತಿಯಲ್ಲೂ ಸಂಗೀತಾ ಶೃಂಗೇರಿ (Sangeetha Sringeri) ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚಿನ ಎಪಿಸೋಡ್ನಲ್ಲಿ ಕನ್ನಡಿಯ ಮುಂದೆ ನಿಂತು ತಮ್ಮ ಮನಸ್ಸಿನ ಜೊತೆ ಮಾತನಾಡುವ ಅವಕಾಶವನ್ನು ಬಿಗ್ ಬಾಸ್ (Bigg Boss) ನೀಡಿದರು. ಆಗ ಸಂಗೀತಾ ಶೃಂಗೇರಿ ಅವರು ಎಲ್ಲವನ್ನೂ ಮಾತನಾಡಿ, ಕಣ್ಣೀರು ಹಾಕಿ ಹಗುರಾದರು.
‘ಲೈಟ್ ಇರುವ ಈ ಕನ್ನಡಿ ನನ್ನ ಕನಸಾಗಿತ್ತು. ಆ ಕನಸಿನ ಲೋಕವೇ ನನ್ನನ್ನು ಬಿಗ್ ಬಾಸ್ಗೆ ಕರೆದುಕೊಂಡು ಬಂದಿದೆ. ಅದಕ್ಕೆ ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಈ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ನಾನು ಮಾತಾಡಿದ್ದು ನಿನ್ನ ಜೊತೆ. ಯಾರೂ ಜೊತೆಗೆ ಇಲ್ಲದೇ ಇದ್ದಾಗ ನೀನು ಇರುತ್ತೀಯ. ಯಾರು ಫ್ರೆಂಡ್ ಆಗುತ್ತಾರೆ? ಯಾರು ಆಗಲ್ಲ ಎಂಬುದು ನನಗೆ ಗೊತ್ತಿರಲಿಲ್ಲ. ಸಿಕ್ಕ ಸ್ನೇಹದಿಂದ ನೋವಾದಾಗ ನಾನು ಬಂದಿದ್ದು ನಿನ್ನ ಬಳಿ. ನಿನ್ನ ಕಣ್ಣಲ್ಲಿ ಇರುವ ಬೆಂಕಿ ನನ್ನನ್ನು ಕುಗ್ಗಲು ಬಿಡಲಿಲ್ಲ. ಎಲ್ಲರೂ ಕೈ ಬಿಟ್ಟರೂ ನೀನು ಕೈ ಬಿಟ್ಟಿಲ್ಲ’ಎಂದು ಸಂಗೀತಾ ಶೃಂಗೇರಿ ಅವರು ಮನಸ್ಸಿನ ಜೊತೆ ಮಾತನಾಡಿದ್ದಾರೆ.
ಇದನ್ನೂ ಓದಿ: ಫಿನಾಲೆ ವಾರ ತಲುಪಿದ ವರ್ತೂರು ಸಂತೋಷ್; ಟ್ರೋಫಿಗಾಗಿ ಸಂಗೀತಾ, ತುಕಾಲಿ ಜತೆ ಪೈಪೋಟಿ
‘ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ನಿನ್ನನ್ನು ನನ್ನಿಂದ ಯಾರೂ ಕಿತ್ತುಕೊಳ್ಳೋಕೆ ಆಗಲ್ಲ. ಐ ಲವ್ ಯೂ. ನಾನು ಆರಂಭದಲ್ಲಿ ಮಗು ರೀತಿ ಇದ್ದೆ. ಬಳಿಕ ಚಿಕ್ಕವಳಿಂದ ದೊಡ್ಡವಳಾದೆ. ಹದಿಹರೆಯದ ಸಮಯ ಬಂದಾಗ ಎಡವಿದೆ ಎನಿಸಿತು. ಆದರೆ ನೀನು ಎಡವಲಿಲ್ಲ. ತಪ್ಪು ದಾರಿ ಹಿಡಿಯದೇ ನೀನು ಒಳ್ಳೆಯ ನಿರ್ಧಾರ ತೆಗೆದುಕೊಂಡೆ. ತುಂಬ ಸಲ ಓಡಿ ಹೋಗೋಕೆ ಪ್ರಯತ್ನಿಸಿದ್ದೇನೆ. ಅದು ನಾನು ಮಾಡುವ ತಪ್ಪು. ಎಲ್ಲಿಗೆ ಹೋದರೂ ನಿನ್ನಿಂದ ಓಡಿ ಹೋಗೋಕೆ ಆಗಲ್ಲ’ ಎಂದು ಸಂಗೀತಾ ಹೇಳಿದ್ದಾರೆ.
ಇದನ್ನೂ ಓದಿ: ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್ ಇವರಲ್ಲಿ ಯಾರು ಫೇಕ್: ಅವಿನಾಶ್ ಹೇಳಿದ್ದು ಹೀಗೆ
‘ಈಗ ನಾನು ಎಷ್ಟು ದೊಡ್ಡವಳಾಗಿದ್ದೇನೆ ಎಂದರೆ ಇಲ್ಲಿ ಯಾರು ಏನೇ ಅಂದರೂ ನನಗೆ ಪರಿಣಾಮ ಬೀರುತ್ತಿಲ್ಲ. ನಾನು ಇಲ್ಲಿಗೆ ಬಂದ ಮೇಲೆ ಹುಡುಗಿಯಿಂದ ಮಹಿಳೆಯಾಗಿ ಬದಲಾಗಿದ್ದೇನೆ ಅಂತ ನನಗೆ ಅನಿಸುತ್ತದೆ. ನನ್ನ ಮೇಲೆ ಗಾಯದ ಕಲೆಗಳು ಇವೆ. ಆದರೆ ಅವು ಕಾಣಿಸದೇ, ನಗು ಮಾತ್ರ ಕಾಣಿಸುತ್ತಿದೆ. ನಾನು ಸಿಂಹಿಣಿ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಅವರೇ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ