‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 29: ಸಿಹಿ ಅಜ್ಜಿ, ತಾತನ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ತಯಾರಿ ನಡೆಯುತ್ತಿದೆ. ಜೊತೆಗೆ ಸಿಹಿ, ಹಬ್ಬದ ಬಗ್ಗೆ ಅನೇಕ ಪ್ರಶ್ನೆಗಳನ್ನು ಅಜ್ಜಿ ಬಳಿ ಕೇಳಿ ತಿಳಿದುಕೊಳ್ಳುತ್ತಾಳೆ. ಲಕ್ಷ್ಮೀಯನ್ನು ಯಾರು ಆರಾಧಿಸುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ ಎಂಬ ಅಜ್ಜಿ ಮಾತಿಗೆ, ಸಿಹಿ, ಅಪ್ಪ ಬೇಗ ಬರುವುದಾಗಿ ಕೇಳಬಹುದಿತ್ತು ಅಂದುಕೊಳ್ಳುತ್ತಾಳೆ. ಆದರೆ ಸೀತಾ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮನೆಗೆ ಬಂದ ಅವಳ ಗೆಳತಿ ಸೀತಾ ಕೂಡ ನಿನ್ನ ಜೀವನದಲ್ಲಿ ಆದದ್ದನ್ನು ನನ್ನ ಬಳಿ ಹಂಚಿಕೋ ಎನ್ನುತ್ತಾಳೆ. ಆದರೆ ಇದಕ್ಕೆಲ್ಲಾ ಸೀತಾಳದ್ದು ಮೌನವೇ ಉತ್ತರ.
ಇನ್ನು ಮನೆ ಬಿಡಿಸಿಕೊಳ್ಳುವ ವಿಚಾರವಾಗಿ ರಾಮ್, ಸೀತಾಳಿಗೆ ಫೋನ್ ಮಾಡುತ್ತಾನೆ. ಅಡ್ವಾನ್ಸ್ ಸ್ಯಾಲರಿ ಬಗ್ಗೆ ರಾಮ್ ಹೇಳಿದರೂ ಅದರಿಂದ ಮನೆ ಸಾಲ ತಿರುವುದಿಲ್ಲ ಎನ್ನುತ್ತಾಳೆ. ಅವಳ ನಿರ್ಧಾರ ಮಾತ್ರ ಮನೆ ಮಾರುವುದಾಗಿರುತ್ತದೆ. ಈ ಮಾತನ್ನು ಸಿಹಿಗೂ ಅರ್ಥ ಮಾಡಿಸುತ್ತೇನೆ, ಅವಳಿಗೂ ಈ ಕಷ್ಟ ಅರ್ಥವಾಗುತ್ತೆ ಎಂದು ರಾಮ್ ಬಳಿ ಸೀತಾ ಹೇಳುತ್ತಾಳೆ. ಅವನ ಬಳಿಯೇ ಬಾಡಿಗೆ ಮನೆಯನ್ನೂ ಹುಡುಕಲು ಹೇಳುತ್ತಾಳೆ. ಸಣ್ಣದಾದರೂ ತೊಂದರೆ ಇಲ್ಲ ಚಿಕ್ಕ ಮನೆ ಹುಡುಕಿ ಎನ್ನುತ್ತಾಳೆ. ಮನಸ್ಸಿಲ್ಲದಿದ್ದರೂ ಕಷ್ಟ ಪಟ್ಟು ರಾಮ್ ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ.
ಅಜ್ಜಿ ಹೇಳಿದ ಮಾತನ್ನು ಸರಿಯಾಗಿ ಕೇಳಿಸಿಕೊಂಡ ಸಿಹಿ, ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಳಿಗ್ಗೆ ಬೇಗ ಎದ್ದು ತಯಾರಾಗಿ, ಅಮ್ಮನನ್ನು ರೆಡಿ ಮಾಡುತ್ತಾಳೆ. ಇನ್ನು ಒಬ್ಬರಿಗೊಬ್ಬರು ದೃಷ್ಟಿಯನ್ನು ತೆಗೆದು ಖುಷಿ ಹಂಚಿಕೊಳ್ಳುತ್ತಾರೆ. ಅಜ್ಜಿ ಮನೆಯ ಪೂಜೆಗೆ ಅಮ್ಮ ಮಗಳು ಹಾಜರಿ ಹಾಕುತ್ತಾರೆ. ಅಲ್ಲಿ ಬಂದವರೆಲ್ಲಾ ಅರಿಶಿನ, ಕುಂಕುಮ ಕೊಡುವುದನ್ನು ನೋಡಿ ತನ್ನ ಸೀತಮ್ಮನಿಗೂ ಕುಂಕುಮ ಕೊಡಿ ಎಂದು ಸಿಹಿ ಕೇಳುತ್ತಾಳೆ. ಆದರೆ ಅಲ್ಲಿದ್ದವರು ಮುತ್ತೈದೆಯರಿಗೆ ಮಾತ್ರ ಇದನ್ನು ಕೊಡಬೇಕು ಎನ್ನುತ್ತಾರೆ. ಅವಳ ಗಂಡ ಎಲ್ಲಿದ್ದಾನೋ ಏನೋ ಎಂದು ಮಾತನಾಡಿಕೊಳ್ಳುತ್ತಾರೆ. ಈ ಮಾತು ಸೀತಾಳನ್ನು ನೋಯಿಸುತ್ತದೆ. ಮುಂದೇನಾಗಬಹುದು? ಕಾದು ನೋಡಬೇಕಾಗಿದೆ.