ಬಿಗ್​​ಬಾಸ್ ಸೀಸನ್ 12 ಪ್ರಾರಂಭ ಯಾವಾಗ? ದಿನಾಂಕ ಘೋಷಿಸಿಯೇ ಬಿಟ್ಟರು ಸುದೀಪ್

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ಶೀಘ್ರವೇ ಪ್ರಾರಂಭವಾಗಲಿದೆ. ಸೀಸನ್ 12ರ ಮೊದಲ ಪ್ರೋಮೊ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆದರೆ ಸೀಸನ್ 12 ಯಾವಾಗಿನಿಂದ ಪ್ರಾರಂಭ ಆಗಲಿದೆ ಎಂಬ ದಿನಾಂಕವನ್ನು ಘೋಷಣೆ ಮಾಡಲಾಗಿರಲಿಲ್ಲ. ಇದೀಗ ಆಯೋಜಕರು ದಿನಾಂಕ ಘೋಷಣೆ ಮಾಡುವ ಮುಂಚೆಯೇ ನಟ ಸುದೀಪ್ ಅವರು ಬಿಗ್​ಬಾಸ್ ಕನ್ನಡ ಸೀಸನ್ 12ರ ಪ್ರಾರಂಭದ ದಿನಾಂಕ ಘೋಷಣೆ ಮಾಡಿದ್ದಾರೆ.

ಬಿಗ್​​ಬಾಸ್ ಸೀಸನ್ 12 ಪ್ರಾರಂಭ ಯಾವಾಗ? ದಿನಾಂಕ ಘೋಷಿಸಿಯೇ ಬಿಟ್ಟರು ಸುದೀಪ್
Bigg Boss Kannada12

Updated on: Aug 31, 2025 | 3:07 PM

ಎಲ್ಲೆಡೆ ಬಿಗ್​ಬಾಸ್ ಸೀಸನ್ ಪ್ರಾರಂಭವಾಗಿದೆ. ಹಿಂದಿ ಬಿಗ್​​ಬಾಸ್ ಕಳೆದ ವಾರವಷ್ಟೆ ಪ್ರಾರಂಭವಾಗಿದೆ. ಕನ್ನಡ ಬಿಗ್​ಬಾಸ್​ನ 12ರ ಮೊದಲ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ದಿನಾಂಕ ಘೋಷಣೆಯಷ್ಟೆ ಬಾಕಿ ಇತ್ತು. ಚಾನೆಲ್​​ನವರು ದಿನಾಂಕ ಘೋಷಣೆ ಮಾಡುವ ಮುಂಚೆಯೇ ಸುದೀಪ್ ಅವರು ಬಿಗ್​​ಬಾಸ್ ಸೀಸನ್ 12 ಪ್ರಾರಂಭವಾಗುವ ದಿನಾಂಕವನ್ನು ಘೋಷಣೆ ಮಾಡಿಬಿಟ್ಟಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಸುದೀಪ್ ಈ ಬಾರಿಯ ಬಿಗ್​​ಬಾಸ್ ಪ್ರಾರಂಭದ ದಿನಾಂಕ ಯಾವುದೆಂದು ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು (ಆಗಸ್ಟ್ 31) ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಇನ್ನೂ ಹಲವು ಗಣ್ಯರು ಭಾಗಿ ಆಗಿದ್ದರು. ಇದೇ ಕಾರ್ಯಕ್ರಮದಲ್ಲಿ ನಟ ಸುದೀಪ್ ಸಹ ಅತಿಥಿಯಾಗಿ ಭಾಗಿ ಆಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸುದೀಪ್ ಬಿಗ್​​ಬಾಸ್ ಬಗ್ಗೆಯೂ ಮಾತನಾಡಿದರು.

ಅಭಿಮಾನಿಗಳ ಕೂಗಾಟ, ಚಪ್ಪಾಳೆ, ಶಿಳ್ಳೆಗಳ ನಡುವೆ ಮಾತನಾಡಿದ ಸುದೀಪ್, ‘ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ ಆಶೀರ್ವಾದ ಮಾಡಿ’ ಎಂದರು. ಆ ಮೂಲಕ ಬಿಗ್​​ಬಾಸ್ ಸೀಸನ್ 12 ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ ಎಂದು ಘೋಷಣೆ ಮಾಡಿದರು. ಈ ಬಾರಿಯೂ ಸುದೀಪ್ ಅವರೇ ಬಿಗ್​​ಬಾಸ್ ನ ನಿರೂಪಣೆ ಮಾಡಲಿದ್ದು, ದಿನಾಂಕವನ್ನೂ ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:Bigg Boss ಟೈಟಲ್​ನಲ್ಲಿ ಹೆಚ್ಚುವರಿ G ಏಕೆ? ಇದಕ್ಕಿದೆ ಸಂಖ್ಯಾಶಾಸ್ತ್ರದ ಲೆಕ್ಕಾಚಾರ

ಕಳೆದ ಬಾರಿಯ ಬಿಗ್​​ಬಾಸ್ ಸೀಸನ್ 11 ಸೆಪ್ಟೆಂಬರ್ 29ರಂದು ಪ್ರಾರಂಭವಾಗಿತ್ತು. ಈ ಬಾರಿ ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ. ಮೂಲಗಳ ಪ್ರಕಾರ ಈಗಾಗಲೇ ಬಹುತೇಕ ಸ್ಪರ್ಧಿಗಳ ಆಯ್ಕೆ ಆಗಿದ್ದು, ಕೆಲವರ ಆಯ್ಕೆಯಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ಕಳೆದ ಸೀಸನ್ ನಿರೂಪಣೆ ಮಾಡುವಾಗ ತಾವು ಇನ್ನು ಮುಂದೆ ಬಿಗ್​​ಬಾಸ್ ನಿರೂಪಣೆ ಮಾಡುವುದಿಲ್ಲ ಇದೇ ನನ್ನ ಕೊನೆಯ ಸೀಸನ್ ಎಂದಿದ್ದರು. ಆದರೆ ಆಯೋಜಕರು ಸುದೀಪ್ ಅವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಆಯೋಜಕರ ಒತ್ತಡಕ್ಕೆ ಮಣಿದು ಸುದೀಪ್ ಅವರು ಬಿಗ್​​ಬಾಸ್ ನಿರೂಪಣೆಗೆ ಒಪ್ಪಿಗೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ