
ಸಿನಿಮಾಗಳ ರೀತಿಯೇ ಬಿಗ್ಬಾಸ್ ಸಹ ಸುದೀಪ್ (Sudeep) ಅವರ ವೃತ್ತಿ ಜೀವನದ ಭಾಗವಾಗಿದೆ. ಸುದೀಪ್ ಅವರು ಸಿನಿಮಾ ಪ್ರಚಾರಕ್ಕೆ ಹೋದರೂ ಸಹ ಬಿಗ್ಬಾಸ್ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಸುದೀಪ್ ಅವರು ಬಿಗ್ಬಾಸ್ ಮನೆಯಲ್ಲಿ ಆಡಿದ ಮಾತುಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಸುದೀಪ್ ಮಾತನಾಡಿದ್ದು ಸರಿ, ತಪ್ಪು ಹೀಗೆ ವಿಶ್ಲೇಷಣೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಸುದೀಪ್ ಅವರು, ಈ ಸೀಸನ್ನ ಬಿಗ್ಬಾಸ್ನಲ್ಲಿ ಸ್ಪರ್ಧಿಯೊಬ್ಬರು ಆಡಿದ ಮಾತೊಂದರ ಬಗ್ಗೆ ಏಕೆ ವಿಶ್ಲೇಷಣೆ ಮಾಡಲಿಲ್ಲ ಎಂಬುದನ್ನು ಇದೀಗ ವಿವರಿಸಿದ್ದಾರೆ.
ಬಿಗ್ಬಾಸ್ ಆರಂಭವಾದ ಕೆಲ ವಾರದ ಬಳಿಕ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಯ ಜೊತೆ ಜಗಳ ಆಡುತ್ತಾ, ‘ನಿನ್ನ ಬಟ್ಟೆ, ನಿನ್ನ ಅವತಾರ ನೋಡಿದರೆ ನೀನು ಎಲ್ಲಿಂದ ಬಂದವಳು, ನೀನೊಬ್ಬ ‘ಎಸ್’ ಎಂದಿದ್ದರು. ಅಶ್ವಿನಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಯ್ತು. ರಕ್ಷಿತಾ ವಿರುದ್ಧ ಜಾತಿ ನಿಂದಕ ಪದ ಬಳಸಿದ್ದಾರೆ ಎಂದು ಕೆಲವರು ಹೇಳಿದರು. ಇನ್ನು ಕೆಲವರು ರಕ್ಷಿತಾರನ್ನು ‘ಸ್ಲಂ’ ಎಂದು ಕರೆಯಲಾಗಿದೆ ಎಂದರು. ಅಸಲಿಗೆ ಅಶ್ವಿನಿ ಅವರು ರಕ್ಷಿತಾ ಬಗ್ಗೆ ಅವಮಾನಕರ, ಕೀಳು ಪದವನ್ನೇ ಬಳಸಿದ್ದಾರೆಂಬುದು ನೋಡುಗರಿಗೆ ಖಾತ್ರಿ ಆಗಿತ್ತು.
ಅಶ್ವಿನಿ ಅವರು ರಕ್ಷಿತಾರ ಮೇಲೆ ಜಗಳ ಮಾಡಿದ್ದು, ನಿಂದಿಸಿದ್ದನ್ನು ಖಂಡಿಸಿ, ಸುದೀಪ್ ಮಾತನಾಡಿದ್ದರು. ಆದರೆ ‘ಎಸ್’ ಪದದ ಬಗ್ಗೆ ಹೆಚ್ಚಾಗಿ ಚರ್ಚೆ ಆಗಲಿಲ್ಲ. ಈ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಇದೀಗ ‘ಮಾರ್ಕ್’ ಸಿನಿಮಾ ಪ್ರಚಾರದಲ್ಲಿರುವ ಸುದೀಪ್, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ‘ಒಂದೊಮ್ಮೆ ನಾನು ‘ಎಸ್’ ಎಂದು ಏಕೆ ಹೇಳಿದಿರಿ ಎಂದು ಕೇಳಿದೆ ಎಂದುಕೊಳ್ಳಿ, ಆಗ ಆ ಸ್ಪರ್ಧಿ, ‘ಇಲ್ಲ ಅಣ್ಣ, ಎಸ್ ಎಂದರೆ ಸಿಲ್ಲಿ, ಆ ಹುಡುಗಿ ರಕ್ಷಿತಾ ತುಂಬ ಸಿಲ್ಲಿ, ಹಾಗಾಗಿ ನಾನು ‘ಎಸ್’ ಅಂದೆ’ ಎಂದರು ಅಂದುಕೊಳ್ಳೋಣ. ಆಗ ನಾನೇನು ಮಾಡಬೇಕು, ಇಲ್ಲ, ಇಲ್ಲ, ‘ಎಸ್’ ಎಂದರೆ ನನ್ನ ತಲೆಯಲ್ಲಿ ಬೇರೆ ಏನೋ ಅರ್ಥ ಇದೆ, ನನ್ನ ತಲೆಯಲ್ಲಿ ಇರುವ ಆ ಕೆಟ್ಟ ಅರ್ಥದ ಪದವನ್ನೇ ನೀವು ಬಳಸಿದ್ದೀರಿ ಎಂದು ಹೇಳಲು ಆಗುತ್ತದೆಯೇ? ಏಕೆಂದರೆ ಹೇಳಿದವರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ನೋಡುಗರಿಗೆ ನಮಗೆ ಗೊತ್ತಿದೆ ಅದು ಏನೆಂಬುದು’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ:ಬಿಗ್ಬಾಸ್ ಗೌತಮಿ, ರಿಷಿ ನಟನೆಯ ಹೊಸ ಸಿನಿಮಾ ಮುಹೂರ್ತ: ವಿಡಿಯೋ
‘ಆ ‘ಟಿ ಗಾಂಚಾಲಿ’ ವಿಷಯದಲ್ಲಿಯೂ ಹಾಗೆಯೇ ಆಯ್ತು. ‘ಟಿ ಗಾಂಚಲಿ’ ಎಂದರೆ ಏನೆಂದು ನಮಗೆಲ್ಲ ಗೊತ್ತು, ಆದರೆ ನಾನು ಪ್ರಶ್ನೆ ಮಾಡಿದಾಗ ಆ ವ್ಯಕ್ತಿ ‘ಟಿ ಗಾಂಚಲಿ’ ಎಂದರೆ ತಲೆ ಗಾಂಚಲಿ ಎಂದರು. ಏನು ಮಾಡೋಣ, ಇಲ್ಲ ನೀವು ಇದೇ ಅರ್ಥದಲ್ಲಿಯೇ ಹೇಳಿದ್ದೀರಿ ಎಂದು ವಾದ ಮಾಡಲು ಆಗುತ್ತದೆ? ಆದರೆ ನಾನು ಅದನ್ನು ಅವರಿಗೆ ಹೇಗೆ ಅರ್ಥ ಮಾಡಿಸಬೇಕೊ ಹಾಗೆ ಮಾಡಿಸಿದ್ದೀನಿ’ ಎಂದಿದ್ದಾರೆ ಸುದೀಪ್. ಮುಂದುವರೆದು, ‘ಜನ ಮಾತನಾಡುತ್ತಾರೆ, ಆದರೆ ಅಲ್ಲಿ ವೇದಿಕೆ ಮೇಲೆ ನಿಂತು ಸ್ಪರ್ಧಿಗಳೊಟ್ಟಿಗೆ ವಾದ ಮಾಡುವುದು ಸುಲಭವಾಗಿರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ, ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯದ್ದಾಗಿರುತ್ತದೆ’ ಎಂದಿದ್ದಾರೆ ಕಿಚ್ಚ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Thu, 18 December 25