ವಿವಾಹೇತರ ಸಂಬಂಧ: ಗೆಳತಿಯ ಮಾಜಿ ಪತಿಗೆ ಗುಂಡು ಹಾರಿಸಿದ ನಟ

|

Updated on: Jul 15, 2023 | 6:15 PM

Tv Actor: ಧಾರಾವಾಹಿ ನಟನೊಬ್ಬ ತಾನು ಸಂಬಂಧದ ಹೊಂದಿದ್ದ ವಿವಾಹಿತ ಮಹಿಳೆಯ ಮಾಜಿ ಪತಿಯ ಮೇಲೆ ಗುಂಡು ಹಾರಿಸಿದ್ದಾನೆ.

ವಿವಾಹೇತರ ಸಂಬಂಧ: ಗೆಳತಿಯ ಮಾಜಿ ಪತಿಗೆ ಗುಂಡು ಹಾರಿಸಿದ ನಟ
ಮನೋಜ್ ಕುಮಾರ್
Follow us on

ತೆಲುಗು ಧಾರಾವಾಹಿ (Telugu Serial) ರಂಗದಲ್ಲಿ ಜನಪ್ರಿಯವಾಗಿರುವ ಯುವನಟ ಮನೋಜ್ ಕುಮಾರ್ (Manoj Kumar) ತನ್ನ ಗೆಳತಿಯ ಮಾಜಿ ಪತಿಯ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ವ್ಯಕ್ತಿಗೆ ತೀವ್ರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈದರಾಬಾದ್ (Hyderabad) ಪೊಲೀಸರು ಪ್ರಸ್ತುತ ಮನೋಜ್ ಕುಮಾರ್​ಗಾಗಿ ಹುಡುಕಾಟ ನಡೆಸಿದ್ದು ಆತ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಹೈದರಾಬಾದ್​ನ ಶಮೀರ್​ಪೇಟ್​ನಲ್ಲಿ ಈ ಘಟನೆ ನಡೆದಿದೆ. ಸಿದ್ಧಾರ್ಥ್ ದಾಸ್ ಎಂಬಾತ, ಸೆಲೆಬ್ರಿಟಿ ಕ್ಲಬ್ ವಿಲ್ಲಾಗೆ ತನ್ನ ಮಾಜಿ ಪತ್ನಿ ಹಾಗೂ ಮಕ್ಕಳನ್ನು ನೋಡಲು ಬಂದಿದ್ದಾನೆ. ಆ ಸಮಯದಲ್ಲಿ ಆಕೆಯೊಟ್ಟಿಗೆ ಮನೋಜ್ ಕುಮಾರ್ ಇದ್ದುದ್ದನ್ನು ಕಂಡಿದ್ದಾನೆ. ಇಬ್ಬರಿಗೂ ಜಗಳವಾಗಿದೆ. ಜಗಳ ತಾರಕಕ್ಕೆ ಹೋಗಿ ನಟ ಮನೋಜ್ ಕುಮಾರ್ ತನ್ನ ಏರ್​ಗನ್​ನಿಂದ ಸಿದ್ಧಾರ್ಥ್ ದಾಸ್​ಗೆ ಗುಂಡಿಟ್ಟಿದ್ದಾನೆ. ಗಾಯಗೊಂಡ ಸಿದ್ಧಾರ್ಥ್ ದಾಸ್ ಹೇಗೋ ತಪ್ಪಿಸಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿ, ಪೊಲೀಸರಿಗೆ ವಿಷಯ ತಲುಪಿಸಿದ್ದಾನೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಸಂದೀಪ್ ಕುಮಾರ್, ”2019 ರಲ್ಲಿ ಸಿದ್ಧಾರ್ಥ್ ದಾಸ್ ತಮ್ಮ ಪತ್ನಿ ಸುಶ್ಮಿತಾ ಇಂದ ದೂರಾಗಿದ್ದರು. ಅವರಿಗೆ ಒಂದು ಹೆಣ್ಣು ಒಂದು ಗಂಡು ಮಗುವಿತ್ತು. ಸಿದ್ಧಾರ್ಥ್ ದಾಸ್ ಮಾಜಿ ಪತ್ನಿ ಶಮೀರ್​ಪೇಟ್​ನ ಸೆಲೆಬ್ರಿಟಿ ಕ್ಲಬ್ ಹೌಸ್​ನ ವಿಲ್ಲಾ ನಂಬರ್ 21ರಲ್ಲಿ ವಾಸವಿದ್ದರು. ಸಿದ್ಧಾರ್ಥ್ ತಮ್ಮ ಮಕ್ಕಳನ್ನು ನೋಡಲು ಬಂದಾಗ ಅಲ್ಲಿಯೇ ಒಟ್ಟಿಗಿದ್ದ ಮನೋಜ್ ಹಾಗೂ ಸುಶ್ಮಿತಾ ಜೊತೆ ಜಗಳವಾಡಿದರು. ಆಗ ಮನೋಜ್, ತಮ್ಮ ಏರ್​ಗನ್​ನಿಂದ ಸಿದ್ಧಾರ್ಥ್ ಮೇಲೆ ಗುಂಡು ಹಾರಿಸಿದರು. ಹೇಗೋ ತಪ್ಪಿಸಿಕೊಂಡ ಸಿದ್ಧಾರ್ಥ್ ಕೂಡಲೇ ಬಂದು ಪೊಲೀಸರಿಗೆ ದೂರು ನೀಡಿದರು. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ” ಎಂದಿದ್ದಾರೆ.

ಇದನ್ನೂ ಓದಿ:‘ಆಕಾಶ ದೀಪ’ ಧಾರಾವಾಹಿ ನಟಿ ದಿವ್ಯಾ ಹೊರಿಸಿದ ಆರೋಪಕ್ಕೆ ಸ್ಪಷ್ಟನೆ ನೀಡಿದ ಪತಿ ಅಮ್ಜದ್​ ಖಾನ್​

ಸಿದ್ಧಾರ್ಥ್​ರ ಮಕ್ಕಳು ಸಹ ನಟ ಮನೋಜ್ ಕುಮಾರ್ ವಿರುದ್ಧ ಮಕ್ಕಳ ಕಲ್ಯಾಣ ಇಲಾಖೆಗೆ ಮೌಖಿಕ ದೂರು ನೀಡಿದ್ದು, ಮನೋಜ್ ಕುಮಾರ್ ತಮ್ಮನ್ನು ಹೊಡೆಯುತ್ತಿದ್ದನೆಂದು, ಬೈಯುತ್ತಿದ್ದನೆಂದು ಹೇಳಿದ್ದಾರೆ. ತಾವು, ತಾಯಿಯೊಂದಿಗೆ ಅಥವಾ ತಾಯಿಯ ಸಂಬಂಧಿಗಳೊಂದಿಗೆ ಇರಲು ಇಚ್ಛಿಸುವುದಿಲ್ಲ” ಎಂದಿದ್ದಾರೆ. ಮಕ್ಕಳ ಕಲ್ಯಾಣ ಇಲಾಖೆಯು ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿದ್ದು ಅವರ ತಂದೆಯಾದ ಸಿದ್ಧಾರ್ಥ್ ದಾಸ್ ವಶಕ್ಕೆ ನೀಡುವ ಬಗ್ಗೆ ಚಿಂತಿಸುತ್ತಿದೆ.

ತೆಲುಗು ಟಿವಿಯ ಜನಪ್ರಿಯ ಧಾರಾವಾಹಿಯಾದ ‘ಕಾರ್ತಿಕ ದೀಪಂ’ ನಲ್ಲಿ ಮನೋಜ್ ಕುಮಾರ್ ನಟಿಸಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲಿಯೂ ಮನೋಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಮನೋಜ್ ಕುಮಾರ್ ಪ್ರಸ್ತುತ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ