ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಶಾ ಶರ್ಮಾ (Tunisha Sharma) ಅವರ ನಿಧನದಿಂದ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಸಖತ್ ನೋವಾಗಿದೆ. ಮಂಗಳವಾರ (ಡಿ.27) ಅವರ ಅಂತ್ಯಕ್ರಿಯೆ ನಡೆಯಿತು. ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಬಗ್ಗೆ ಈಗ ತನಿಖೆ ಜಾರಿಯಲ್ಲಿದೆ. ಮಾಜಿ ಬಾಯ್ಫ್ರೆಂಡ್ ಶೀಜಾನ್ ಖಾನ್ (Sheezan Khan) ಅವರನ್ನು ಪೊಲೀಸರು ಬಂಧಿಸಿದ್ದು, ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ತುನಿಶಾ ಶರ್ಮಾ ಮತ್ತು ಶೀಜಾನ್ ಖಾನ್ ನಡುವೆ ಪ್ರೀತಿ ಚಿಗುರಿತ್ತು. ಆ ಬಳಿಕ ತುನಿಶಾ ಅವರು ಹಿಜಾಬ್ (Hijab) ಧರಿಸಲು ಆರಂಭಿಸಿದ್ದರು ಎಂಬುದನ್ನು ಅವರ ಸಂಬಂಧಿಯೊಬ್ಬರು ಬಾಯ್ಬಿಟ್ಟಿದ್ದಾರೆ.
‘ಅಲಿಬಾಬಾ’ ಧಾರಾವಾಹಿಯಲ್ಲಿ ತುನಿಶಾ ಶರ್ಮಾ ಮತ್ತು ಶೀಜಾನ್ ಖಾನ್ ಅವರು ಒಟ್ಟಾಗಿ ನಟಿಸುತ್ತಿದ್ದರು. ಆ ಕಾರಣದಿಂದ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನಂತರ ಅದು ಪ್ರೀತಿಗೆ ತಿರುಗಿತ್ತು. ಬೇರೆ ಬೇರೆ ಧರ್ಮಕ್ಕೆ ಸೇರಿದ ಇವರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಈ ನಡುವೆ ಶೀಜಾನ್ ಖಾನ್ ಅವರಿಗೆ ಬೇರೆ ಹುಡುಗಿಯ ಜೊತೆಗೂ ಸಂಬಂಧ ಬೆಳೆದಿತ್ತು ಎನ್ನಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಶೀಜಾನ್ ಖಾನ್ ಮತ್ತು ತುನಿಶಾ ಶರ್ಮಾ ನಡುವೆ ಇತ್ತೀಚಿನ ದಿನಗಳಲ್ಲಿ ವೈಮನಸ್ಸು ಮೂಡಿತ್ತು. ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ 15 ದಿನಗಳ ಹಿಂದೆ ಬ್ರೇಕಪ್ ಆಗಿತ್ತು. ಆ ಬಳಿಕ ತುನಿಶಾ ಶರ್ಮಾ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗುತ್ತಿದೆ. ಎಲ್ಲ ಆಯಾಮದಿಂದಲೂ ತನಿಖೆ ಮಾಡಲಾಗುತ್ತಿದೆ. ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳಲು ನಿಜಕ್ಕೂ ಕಾರಣ ಆಗಿದ್ದು ಏನು ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ಇದನ್ನೂ ಓದಿ: Tunisha Sharma Funeral: ತುನಿಶಾ ಶರ್ಮಾ ಅಂತ್ಯಕ್ರಿಯೆ: ಅಗಲಿದ ನಟಿಗೆ ಅಂತಿಮ ನಮನ ಸಲ್ಲಿಸಿದ ಕಿರುತೆರೆ ಸೆಲೆಬ್ರಿಟಿಗಳು
ತುನಿಶಾ ಶರ್ಮಾ ಅಲ್ಲದೇ ಮತ್ತೋರ್ವ ಹುಡುಗಿಯ ಜೊತೆಗೂ ಶೀಜಾನ್ ಖಾನ್ ಸಂಪರ್ಕದಲ್ಲಿ ಇದ್ದರು. ಆಕೆಯ ಜೊತೆಗಿನ ವಾಟ್ಸಾಪ್ ಸಂದೇಶವನ್ನು ಡಿಲೀಟ್ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಡಿಲೀಟ್ ಆದ ಮೆಸೇಜ್ಗಳನ್ನು ಮರಳಿ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆ ಸೀಕ್ರೆಟ್ ಗರ್ಲ್ಫ್ರೆಂಡ್ ಯಾರು ಎಂಬುದು ಗೊತ್ತಾದ ಬಳಿಕ ಅವರನ್ನು ಕೂಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Tunisha Sharma: ಪಂಚಭೂತಗಳಲ್ಲಿ ಲೀನವಾದ ತುನಿಶಾ ಶರ್ಮಾ; ಇಲ್ಲಿದೆ ಅಂತ್ಯಕ್ರಿಯೆಯ ಫೋಟೋ ಗ್ಯಾಲರಿ..
ವಿಚಾರಣೆ ವೇಳೆ ಶೀಜಾನ್ ಖಾನ್ ಅವರು ತಮ್ಮ ಹೇಳಿಕೆಗಳನ್ನು ಬದಲಿಸುತ್ತಿದ್ದಾರೆ ಎಂದು ಕೂಡ ವರದಿ ಆಗಿದೆ. ತಮ್ಮಿಬ್ಬರ ಧರ್ಮ ಬೇರೆ ಬೇರೆ ಆಗಿದ್ದರಿಂದ ಬ್ರೇಕಪ್ ಮಾಡಿಕೊಂಡೆವು ಎಂದು ಅವರು ಹೇಳಿದ್ದಾರೆ ಎನ್ನಲಾಗಿತ್ತು. ಈಗ ಇನ್ನೂ ಹಲವು ವಿವರಗಳು ಹೊರಬರುತ್ತಿವೆ. ಒಟ್ಟಿನಲ್ಲಿ ತುನಿಶಾ ಶರ್ಮಾ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬದವರು ಮತ್ತು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:27 pm, Wed, 28 December 22