
‘ಹಳ್ಳಿ ಪವರ್’ (Halli Power) ರಿಯಾಲಿಟಿ ಶೋ ಜೀ ಪವರ್ನಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋಗೆ ಒಟ್ಟು 12 ಸ್ಪರ್ಧಿಗಳು ಆಗಮಿಸಿದ್ದರು. ಅಚ್ಚರಿ ಎಂಬಂತೆ ಮೊದಲ ವಾರವೇ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇಬ್ಬರ ಪೈಕಿ ಒಬ್ಬರು ಸ್ಟ್ರಾಂಗ್ ಎನಿಸಿಕೊಂಡಿದ್ದರು. ಆದಾಗ್ಯೂ ಅವರು ಹೊರ ಹೋಗಿರೋದು ಬೇಸರದ ವಿಚಾರ. ಈ ಶೋನಲ್ಲಿ ಭಿನ್ನವಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗುತ್ತಿದೆ.
ಸಾಮಾನ್ಯವಾಗಿ ರಿಯಾಲಿಟಿ ಶೋಗಳಲ್ಲಿ ಜನರಿಗೆ ವೋಟ್ ಮಾಡುವ ಅವಕಾಶ ಇರುತ್ತದೆ. ಆದರೆ, ‘ಹಳ್ಳಿ ಪವರ್’ನಲ್ಲಿ ಆ ರೀತಿಯ ಆಯ್ಕೆ ಇಲ್ಲ. ಆಟ ಆಡಿ ಉತ್ತಮ ಅಂಕ ಗಳಿಸಬೇಕು, ಜೊತೆಗೆ ಸ್ಪರ್ಧಿಗಳೇ ವೋಟ್ ಮಾಡಬೇಕು. ಇವೆರಡನ್ನು ಆಧರಿಸಿ ಎಲಿಮಿನೇಷನ್ ನಡೆಸಲಾಗುತ್ತದೆ. ಈ ವೇಳೆ ಯುಕ್ತಾ ಎಲಿಮಿನೇಟ್ ಆಗಿದ್ದಾರೆ.
ಈ ವಾರ ಡೇಂಜರ್ ಜೋನ್ನಲ್ಲಿ ಯುಕ್ತಾ, ಚಿನ್ಮಯಿ ಹಾಗೂ ಆ್ಯಶ್ ಮೆಲೋಸ್ ಸ್ಕೈಲರ್ ಇದ್ದರು. ಈ ಪೈಕಿ ಆ್ಯಶ್ ಮೊದಲು ಸೇವ್ ಆದರು. ಆ ಬಳಿಕ ಬಹುತೇಕ ಸ್ಪರ್ಧಿಗಳು ಯುಕ್ತಾ ಅವರ ಹೆಸರನ್ನು ತೆಗೆದುಕೊಂಡು ಹೊರ ಹೋಗಬೇಕು ಎಂದರು. ‘ಅವರು ಡಲ್ ಆಗಿದ್ದಾರೆ. ತಮ್ಮ ಸಾಮರ್ಥ್ಯವನ್ನು ಸರಿಯಾಗಿ ತೋರಿಸುತ್ತಿಲ್ಲ’ ಎಂದು ಅನೇಕ ಸ್ಪರ್ಧಿಗಳು ಹೇಳಿದರು. ಇದರ ಆಧಾರದ ಮೇಲೆ ಯುಕ್ತಾ ಎಲಿಮಿನೇಟ್ ಆದರು.
ಇದನ್ನೂ ಓದಿ: ‘ವಿಜಯಣ್ಣನ ಹೆಸರು ಉಳಿಸಿದೆ’; ‘ಹಳ್ಳಿ ಪವರ್’ನಲ್ಲಿ ಮಿಂಚುತ್ತಿರುವ ‘ಭೀಮ’ ಕಲಾವಿದೆ ಆ್ಯಶ್
ಇನ್ನು, ಕುಸ್ತಿ ಸ್ಪರ್ಧೆ ವೇಳೆ ಪ್ರ್ಯಾಕ್ಟಿಸ್ ಮಾಡುವಾಗ ಕಾವ್ಯಾ ಅವರ ಕಾಲಿಗೆ ಪೆಟ್ಟಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೊಗಲಾಯಿತು. ಅವರು ಒಂದು ದಿನ ಬಿಟ್ಟು ಮರಳಿ ಬಂದರು. ಈ ವೇಳೆ ಅವರ ಕಾಲಿಗೆ ದೊಡ್ಡದಾದ ಪ್ಲಾಸ್ಟರ್ ಇತ್ತು. ವೈದ್ಯರು ಈಗಾಗಲೇ ಅವರಿಗೆ ಐದು ವಾರ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹೀಗಾಗಿ, ಅವರು ಕೂಡ ಔಟ್ ಆಗಿದ್ದಾರೆ. ಕಾವ್ಯಾ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಅವರನ್ನು ಮತ್ತೆ ಕರೆಸಿಕೊಳ್ಳೋದಾಗಿ ನಿರೂಪಕ ಅಕುಲ್ ಬಾಲಾಜಿ ಭರವಸೆ ನೀಡಿದರು. ಆದರೆ, ಅದು ಎಷ್ಟರ ಮಟ್ಟಿಗೆ ನಿಜ ಆಗುತ್ತದೆ ಅನ್ನೋದು ಗೊತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.