ಖ್ಯಾತ ಕಿರುತೆರೆ ಕಲಾವಿದೆಗೆ ಹೃದಯಾಘಾತ; ನಟಿ, ನಿರ್ದೇಶಕಿ ಕವಿತಾ ಚೌಧರಿ ನಿಧನ

|

Updated on: Feb 17, 2024 | 7:04 AM

ಕೇವಲ ನಟಿಯಾಗಿ ಮಾತ್ರವಲ್ಲದೇ ನಿರ್ದೇಶಕಿ ಆಗಿಯೂ ಕವಿತಾ ಚೌಧರಿ ಪ್ರಸಿದ್ಧಿ ಪಡೆದಿದ್ದರು. ಕಿರುತೆರೆ ಕ್ಷೇತ್ರದಲ್ಲಿ ಅವರು ಗುರುತಿಸಿಕೊಂಡಿದ್ದರು. ‘ಉಡಾನ್​’ ಸೀರಿಯಲ್​ನಿಂದ ಅವರು ಮನೆಮಾತಾಗಿದ್ದರು. ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಕವಿತಾ ಚೌಧರಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಖ್ಯಾತ ಕಿರುತೆರೆ ಕಲಾವಿದೆಗೆ ಹೃದಯಾಘಾತ; ನಟಿ, ನಿರ್ದೇಶಕಿ ಕವಿತಾ ಚೌಧರಿ ನಿಧನ
ಕವಿತಾ ಚೌಧರಿ
Follow us on

‘ದೂರದರ್ಶನ’ ವಾಹಿನಿಯಲ್ಲಿ ಜನಪ್ರಿಯವಾಗಿದ್ದ ‘ಉಡಾನ್‌’ ಧಾರಾವಾಹಿಯಲ್ಲಿ (Udaan Serial) ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಎಂಬ ಪಾತ್ರ ಮಾಡಿ ಫೇಮಸ್​ ಆಗಿದ್ದ ನಟಿ ಕವಿತಾ ಚೌಧರಿ (Kavita Chaudhary) ಅವರು ಕೊನೆಯುಸಿರು ಎಳೆದಿದ್ದಾರೆ. ಬಣ್ಣದ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಗುರುವಾರ (ಫೆಬ್ರವರಿ 15) ರಾತ್ರಿ ಹೃದಯಾಘಾತದಿಂದ (Heart Attack) ಮೃತರಾದರು. ಆರೋಗ್ಯದಲ್ಲಿ ಏರುಪೇರು ಆದ ಬಳಿಕ ಅಮೃತಸರದ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಕೂಡಲೇ ಚಿಕಿತ್ಸೆ ನೀಡಲಾಯಿತಾದರೂ ಅವರು ಬದುಕಿ ಉಳಿಯಲಿಲ್ಲ. ಕವಿತಾ ಚೌಧರಿ ಅವರಿಗೆ 67 ವರ್ಷ ವಯಸ್ಸಾಗಿತ್ತು. ಸೀರಿಯಲ್​ ಮಾತ್ರವಲ್ಲದೇ ಜಾಹೀರಾತುಗಳ ಮೂಲಕವೂ ಅವರು ಪ್ರಸಿದ್ಧಿ ಪಡೆದಿದ್ದರು. 80ರ ದಶಕದಲ್ಲಿ ‘ಸರ್ಫ್ ಡಿಟರ್ಜೆಂಟ್’ ಜಾಹೀರಾತುಗಳಲ್ಲಿ ಲಲಿತಾಜಿ ಎಂಬ ಪಾತ್ರ ಮಾಡಿ ಅವರು ಮನೆಮಾತಾಗಿದ್ದರು.

ಕೆಲವೇ ದಿನಗಳ ಹಿಂದೆ ಕವಿತಾ ಚೌಧರಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರ ನಿಧನದ ಸುದ್ದಿಯನ್ನು ಸೋದರಳಿಯ ಅಜಯ್ ಸಾಯಲ್ ಖಚಿತಪಡಿಸಿದ್ದಾರೆ. ‘ಪಿಟಿಐ’ ಸುದ್ದಿ ಸಂಸ್ಥೆಗೆ ಅವರು ಮಾಹಿತಿ ನೀಡಿದ್ದಾರೆ. ‘ಗುರುವಾರ ರಾತ್ರಿ 8.30ರ ವೇಳೆಗೆ ಅಮೃತಸರದ ಆಸ್ಪತ್ರೆಯಲ್ಲಿ ಅವರು ಹೃದಯ ಸ್ತಂಭನದಿಂದ ಮೃತರಾದರು. ಕೆಲವೇ ದಿನಗಳ ಹಿಂದೆ ಅವರಿಗೆ ರಕ್ತದೊತ್ತಡ ಕಡಿಮೆಯಾಗಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರ ಸ್ಥಿತಿ ಗಂಭೀರವಾಗುತ್ತಾ ಹೋಯಿತು. ಶುಕ್ರವಾರ ಬೆಳಿಗ್ಗೆ ಕವಿತಾ ಚೌಧರಿ ಅವರ ಅಂತ್ಯಕ್ರಿಯೆ ನಡೆಸಲಾಯಿತು’ ಎಂದು ಅವರು ಅಜಯ್ ಸಾಯಲ್​ ಹೇಳಿದ್ದಾರೆ.

ಇದನ್ನೂ ಓದಿ: 8 ತಿಂಗಳ ಗರ್ಭಿಣಿ, ಕಿರುತೆರೆ ನಟಿ ಹೃದಯಾಘಾತದಿಂದ ನಿಧನ; ಮಗು ಪರಿಸ್ಥಿತಿ ಏನು?

ನಟಿಯಾಗಿ ಮಾತ್ರವಲ್ಲದೇ ನಿರ್ದೇಶಕಿಯಾಗಿಯೂ ಕವಿತಾ ಚೌಧರಿ ಅವರು ಗುರುತಿಸಿಕೊಂಡಿದ್ದರು. 1989ರಿಂದ 1991ರ ತನಕ ‘ದೂರದರ್ಶನ’ ವಾಹಿನಿಯಲ್ಲಿ ಪ್ರಸಾರವಾದ ‘ಉಡಾನ್​’ ಧಾರಾವಾಹಿಗೆ ಕವಿತಾ ಚೌಧರಿ ಅವರು ನಿರ್ದೇಶನ ಮಾಡಿದ್ದರು. ಮುಖ್ಯ ಪಾತ್ರದಲ್ಲೂ ಅವರೇ ನಟಿಸಿದ್ದರು. ಮಹಿಳೆಯರ ಸಬಲೀಕರಣದ ಕುರಿತಾದ ಕಥೆಯನ್ನು ಆ ಧಾರಾವಾಹಿ ಹೊಂದಿತ್ತು.

ಇದನ್ನೂ ಓದಿ: ಮೆದುಳಿನಲ್ಲಿ ರಕ್ತಸ್ರಾವದಿಂದ ರಂಗಭೂಮಿ ಕಲಾವಿದೆ, ಹಿರಿಯ ನಟಿ ಮಮತಾ ಗೂಡೂರ ನಿಧನ

ವೀಕ್ಷಕರ ಮೇಲೆ ‘ಉಡಾನ್​’ ಧಾರಾವಾಹಿ ಸಾಕಷ್ಟು ಪರಿಣಾಮ ಬೀರಿತ್ತು. ಆ ಕಾಲದಲ್ಲಿ ಅನೇಕ ಮಹಿಳೆಯರು ಪೊಲೀಸ್​ ಇಲಾಖೆಗೆ ಸೇರಲು ಸ್ಫೂರ್ತಿ ನೀಡಿದ ಸೀರಿಯಲ್​ ಅದಾಗಿತ್ತು. ಆ ಕಾರಣದಿಂದ ‘ಉಡಾನ್​’ ಮೆಚ್ಚುಗೆ ಗಳಿಸಿತ್ತು. ಕೊವಿಡ್​ ಸಂದರ್ಭದಲ್ಲಿ ಅನೇಕ ಸೀರಿಯಲ್​ಗಳನ್ನು ದೂರದರ್ಶನ ಮಾಹಿನಿಯಲ್ಲಿ ಮರುಪ್ರಸಾರ ಮಾಡಲಾಗಿತ್ತು. ‘ಉಡಾನ್’ ಕೂಡ ಮತ್ತೊಮ್ಮೆ ಪ್ರಸಾರವಾಗಿ ವೀಕ್ಷಕರನ್ನು ರಂಜಿಸಿತ್ತು. ಕವಿತಾ ಚೌಧರಿ ಅವರ ನಿಧನಕ್ಕೆ ಅಭಿಮಾನಿಗಳು, ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ