ಮೆದುಳಿನಲ್ಲಿ ರಕ್ತಸ್ರಾವದಿಂದ ರಂಗಭೂಮಿ ಕಲಾವಿದೆ, ಹಿರಿಯ ನಟಿ ಮಮತಾ ಗೂಡೂರ ನಿಧನ
ಮಮತಾ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಇದಕ್ಕಾಗಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ.
ರಂಗಭೂಮಿ ಕಲಾವಿದೆ ಹಾಗೂ ನಟಿ ಮಮತಾ ಗೂಡೂರ (Mamatha Gudura) ಅವರು ಇಂದು (ಆಗಸ್ಟ್ 3) ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರ ನಿಧನ ವಾರ್ತೆಯಿಂದ ಆಪ್ತರು ಹಾಗೂ ಕುಟುಂಬದವರಿಗೆ ದುಃಖ ಉಂಟಾಗಿದೆ. ಮಮತಾ ಅವರ ಅದ್ಭುತ ನಟನೆಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ಒಲಿದಿತ್ತು. ಬಾಗಲಕೋಟೆಯ ಇಳಕಲ್ ತಾಲ್ಲೂಕಿನ ಗುಡೂರ ಗ್ರಾಮದಲ್ಲಿ ಅವರು ವಾಸವಿದ್ದರು.
ಮಮತಾ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಇದಕ್ಕಾಗಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಮತಾ ಇಹಲೋಕ ತ್ಯಜಿಸಿದರು. ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.
ಮಮತಾ ಅವರು 5 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದರು. 25 ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗದ ಮೇರು ನಟರುಗಳಾದ ಅಂಬರೀಷ್, ವಜ್ರಮುನಿ ಸೇರಿ ಅನೇಕರ ಜೊತೆ ಮಮತಾ ತೆರೆಹಂಚಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ದೂರವೇ ಇದ್ದ ಅವರು ನಾಟಕದಲ್ಲಿ ಮಾತ್ರ ಅಭಿನಯಿಸುತ್ತಿದ್ದರು.
ಇದನ್ನೂ ಓದಿ: ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸೋ ಚಾನ್ಸ್
ಬಿ.ಎಸ್.ಆರ್. ನಾಟಕ ಕಂಪನಿಯ ‘ಸೆರೆ ಅಂಗಡಿ ಸಂಗವ್ವ’ ನಾಟಕದಲ್ಲಿ ಮಮತಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಂಗವ್ವನ ಪಾತ್ರದಲ್ಲಿ ಖಡಕ್ ಡೈಲಾಗ್ ಹೊಡೆದು ಸೆರೆ ಅಂಗಡಿ ಸಂಗವ್ವ ಎಂದೇ ಅವರು ಗುರುತಿಸಿಕೊಂಡಿದ್ದರು. ಅವರ ಕಲಾಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇಂದು ಮದ್ಯಾಹ್ನ 3 ಗಂಟೆಗೆ ಗೂಡೂರು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಮುಸ್ಲಿಂ ಧರ್ಮದ ಪ್ರಕಾರ ವಿಧಿ ವಿಧಾನಗಳು ನಡೆಯಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:53 am, Thu, 3 August 23