Weekend With Ramesh: ಸಾಧಕರ ಕುರ್ಚಿಗೆ ಸಾರ್ಥಕತೆ ಮೂಡಿಸಿದ ವೈದ್ಯ ಮಂಜುನಾಥ್, ಎಪಿಸೋಡ್ ಮುಖ್ಯಾಂಶಗಳು ಇಲ್ಲಿವೆ

|

Updated on: Apr 09, 2023 | 8:00 AM

Weekend With Ramesh: ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ತಮ್ಮ ಜೀವನ ಪಯಣವನ್ನು ಮೆಲುಕು ಹಾಕಿದರು. ಎಪಿಸೋಡ್​ನ ಮುಖ್ಯಾಂಶಗಳು ಇಲ್ಲಿವೆ...

Weekend With Ramesh: ಸಾಧಕರ ಕುರ್ಚಿಗೆ ಸಾರ್ಥಕತೆ ಮೂಡಿಸಿದ ವೈದ್ಯ ಮಂಜುನಾಥ್, ಎಪಿಸೋಡ್ ಮುಖ್ಯಾಂಶಗಳು ಇಲ್ಲಿವೆ
ಡಾ ಸಿಎನ್ ಮಂಜುನಾಥ್
Follow us on

ವೀಕೆಂಡ್ ವಿತ್ ರಮೇಶ್ ಗೆ (Weekend With Ramesh) ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಸಿಎನ್ ಮಂಜುನಾಥ್ (Dr CN Manjunath) ಅವರು ಅತಿಥಿಯಾಗಿ ಆಗಮಿಸಿ ತಮ್ಮ ಜೀವನವನ್ನು ಮೆಲುಕು ಹಾಕಿದ್ದು ಮಾತ್ರವಲ್ಲದೆ ಆರೋಗ್ಯ, ಜೀವನ, ಸಂಬಂಧ, ಶಿಕ್ಷಣ, ವೈವಾಹಿಕ ಜೀವನ, ಗೆಳೆತನಗಳ ಬಗ್ಗೆ ಹಲವು ಸಂದೇಶಗಳನ್ನು ನೀಡಿದರು. ಮಂಜುನಾಥ್ ಅವರು ಸಾಧಕರ ಕುರ್ಚಿಯಲ್ಲಿ ಕೂತಿದ್ದು, ಆ ಕುರ್ಚಿಗೇ ಸಾರ್ಥಕತೆ ತಂದಂತಿತ್ತು.

ವೃತ್ತಿ ಜೀವನದಲ್ಲಿ 54 ಸಾವಿರ ಆಪರೇಷನ್​ಗಳನ್ನು ಮಾಡಿ ಸಾವಿರಾರು ಜನರ ಜೀವ ಉಳಿಸಿರುವ ಮಂಜುನಾಥ್ ಅವರದ್ದು ಚೆನ್ನರಾಯಪಟ್ಟಣದ ಬಳಿ ಅಡುಗೂರು ಚೋಳೇನಳ್ಳಿ ಎಂಬ ಸಣ್ಣ ಊರು. ಧರ್ಮಸ್ಥಳ ಮಂಜುನಾಥನ ಆಶೀರ್ವಾದದಿಂದ ಜನಿಸಿದ ಮಂಜುನಾಥ್ ಅವರು ಎಳವೆಯಿಂದಲೂ ಓದಿನಲ್ಲಿ ಚುರುಕು. ಬುಗುರಿ, ಗೋಳಿ ಮೆಚ್ಚಿನ ಆಟ. ಎಳವೆಯಲ್ಲಿ ‘ನಾಳೆ ನಾನು ವೈದ್ಯನಾದರೆ’ ಎಂಬ ಪಾಠವನ್ನು ಓದಿ ನಾನೂ ವೈದ್ಯನಾಗಬೇಕು ಎಂಬ ಆಸೆ ಮೊಳೆತು ಅದರತ್ತ ಪರಿಶ್ರಮ ಹಾಕಲು ಶುರುವಚ್ಚಿಕೊಂಡ ಮಂಜುನಾಥ್,  ಕುಡುಮಿ ವಿದ್ಯಾರ್ಥಿಯೇನಲ್ಲ ಸಿನಿಮಾಗಳು, ಗೆಳೆಯರು, ಕ್ರಿಕೆಟ್ ಮೇಲಿನ ಅಪಾರ ಪ್ರೀತಿ ಎಲ್ಲವೂ ಇದ್ದರೂ ಓದನ್ನು ನಿರ್ಲಕ್ಷಿಸಿದವರಲ್ಲ. ಕಾಲೇಜು ದಿನಗಳ ಸಮಯದಲ್ಲಿ ಬಿಡುಗಡೆ ಆದ ಎಲ್ಲ ಕನ್ನಡ ಸಿನಿಮಾಗಳನ್ನು ಮೊದಲ ದಿನವೇ ನೋಡುತ್ತಿದ್ದರಂತೆ. ಸನಾದಿ ಅಪ್ಪಣ್ಣ ಸಿನಿಮಾವನ್ನು ಬಿಡುಗಡೆ ದಿನವೇ ಮೂರು ಬಾರಿ ನೋಡಿದ್ದರಂತೆ!

ಶೋನಲ್ಲಿ ತಮ್ಮ ಮೆಚ್ಚಿನ ಬುಗುರಿ ಆಡಿದ ವೈದ್ಯ ಮಂಜುನಾಥ್, ತಮ್ಮ ಬಾಲ್ಯದ ಗೆಳೆಯರು, ಅವರೊಟ್ಟಿಗೆ ಮಾಡಿದ ತರಲೆಗಳನ್ನು ನೆನಪು ಮಾಡಿಕೊಂಡರು. ಅವರ ಹಲವು ಕಾಲೇಜು ಸಹಪಾಠಿಗಳನ್ನು ನೆನಪು ಮಾಡಿಕೊಂಡರು. ಫ್ರೊಫೆಸರ್ ಕೃಷ್ಣೇಗೌಡ ಅವರು ಮಂಜುನಾಥ್ ಅವರ ಕಾಲೇಜು ಸಹಪಾಠಿಯಾಗಿದ್ದು, ಅವರು ಸಹ ವಿಡಿಯೋ ಮೂಲಕ ಮಂಜುನಾಥ್ ಅವರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು. ನಗೆ ಭಾಷಣಕಾರ್ತಿ ಸುಧಾ ಅವರು ಶೋಗೆ ಆಗಮಿಸಿ, ತಮ್ಮ ಪತಿಗೆ ಮಂಜುನಾಥ್ ಅವರು ಜೀವದಾನ ಮಾಡಿದ ಘಟನೆಯನ್ನು ಸ್ವಾರಸ್ಯಕರವಾಗಿ ವಿವರಿಸಿದರು. ಮಾತ್ರವೇ ಅಲ್ಲದೆ ಮಂಜುನಾಥ್ ಅವರಿಂದ ಸಹಾಯ ಪಡೆದ ಹಲವು ಮಾಜಿ ಹೃದ್ರೋಗಿಗಳು ಶೋಗೆ ಬಂದು ಮಂಜುನಾಥ್ ಅವರ ಸಹಾಯ ನೆನೆದರಲ್ಲದೆ ಮಂಜುನಾಥ್ ಅವರನ್ನು ದೇವರಿಗೆ ಹೋಲಿಸಿ ಕೈಮುಗಿದಿದ್ದು ರಮೇಶ್ ಅರವಿಂದ್ ಅನ್ನೂ ಭಾವುಕಗೊಳಿಸಿತು.

ಇದನ್ನೂ ಓದಿ: ಹೃದ್ರೋಗ ತಜ್ಞ ಮಂಜುನಾಥ್ ದೇವೇಗೌಡರ ಅಳಿಯ ಆಗಿದ್ದು ಹೇಗೆ? ದೇವೇಗೌಡರು ಅಳಿಯನಿಗೆ ಕೊಟ್ಟ ಉಡುಗೊರೆ ಏನು?

ದೇವೇಗೌಡರನ್ನು ಒಪ್ಪಿಸಿ ಅವರ ಪುತ್ರಿಯನ್ನು ಮದುವೆಯಾದ ಸಂದರ್ಭವನ್ನು ವೀಕೆಂಡ್ ಶೋನಲ್ಲಿ ವಿವರಿಸಿದರು. ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಬಳಿಕ ಆಸ್ಪತ್ರೆಯ ಆಡಳಿತ, ಯಂತ್ರೋಪಕರಣಗಳು ಇನ್ನಿತರೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿ ಇಂದು ಜಯದೇವ ವಿಶ್ವದಲ್ಲಿಯೇ ಅತ್ಯುನ್ನತ ಹೃದ್ರೋಗ ಆಸ್ಪತ್ರೆಗಳಲ್ಲಿ ಒಂದನ್ನಾಗಿಸಿದ್ದಾರೆ. ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಬಹುಸಮಯ ಉಚಿತವಾಗಿಯೇ ಚಿಕಿತ್ಸೆ ನೀಡುವ ಮಂಜುನಾಥ್ ಅವರು ಜಯದೇವದಲ್ಲಿದ್ದ 25 ಲಕ್ಷ ರುಪಾಯಿಗಳ ಬಡರೋಗಿಗಳ ಸಹಾಯಧನ ಇಂದು 110 ಕೋಟಿಗೆ ಹೆಚ್ಚಾಗುವಂತೆ ಮಾಡಿದ್ದಾರೆ. ತಮ್ಮದೇ ಆದ ಸರಳ ಹೃದಯ ಶಸ್ತ್ರಚಿಕಿತ್ಸೆ ವಿಧಾನವನ್ನು ಅಭಿವೃದ್ಧಿಪಡಿಸಿ ಅದರ ಮೂಲಕ ಅತ್ಯಂತ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ. ತಮ್ಮ ಕಿರಿಯ ಸಹೋದ್ಯೋಗಿಗಳನ್ನು ಗೈಡ್ ಸಹ ಮಾಡುತ್ತಿದ್ದಾರೆ. ಒಟ್ಟಾರೆ ಮಂಜುನಾಥ್ ಅವರ ಜೀವನವೇ ಒಂದು ಸಂದೇಶ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ