ಒಂದು ಸುಂದರವಾದ ಪ್ರೇಮಕಥೆ ಹುಟ್ಟಿಕೊಳ್ಳುವುದೇ ಜಗಳ, ಕೋಪ, ಮುನಿಸಿನಿಂದ. ಇದಕ್ಕೆ ‘ಸೀತಾ ರಾಮ’ (Seetha Raama Serial) ಏನು ಹೊರತಾಗಿಲ್ಲ. ಆರಂಭವಾಗಿ ಕೆಲವೇ ದಿನಗಳಲ್ಲಿ ಕಥೆ, ಅಭಿನಯಗಳಲ್ಲಿ ಮೆಚ್ಚುಗೆ ಪಡೆದಿರುವ ಈ ಧಾರಾವಾಹಿ, ಸಿಹಿಯ ಸವಿಯಾದ ಮಾತಿಗಾಗಿ ಪ್ರತಿದಿನ ಪ್ರೇಕ್ಷಕರು ಕಾದಿರುವಂತೆ ಮಾಡಿದೆ. ಇನ್ನು ಮುಂದೆ ಬರುವ ಸಂಚಿಕೆಗಳನ್ನು ವೀಕ್ಷಕರು ತಮ್ಮದೇ ಆದ ಕಥೆಗಳ ಮೂಲಕ ಹಣೆದುಕೊಂಡಿದ್ದಾರೆ. ಜೊತೆಗೆ ಧಾರಾವಾಹಿಯ ಸಂಗೀತ ಸಂಯೋಜನೆ, ಕಥೆಯ ನಿರೂಪಣೆ ಎಲ್ಲವೂ ಸಕ್ಕತ್ ಆಗಿರುವುದರಿಂದ ಮುಂದೆಯೂ ಮನರಂಜನೆ ನೀಡುವುದರಲ್ಲಿ ಸಂಶಯವಿಲ್ಲ.
ಇನ್ನು ಹಿಂದಿನ ಸಂಚಿಕೆಯಲ್ಲಿ ಮನೆಯಲ್ಲಿ ಮದುವೆ ಮಾತು ಕೇಳಿ ಕೋಪಗೊಂಡ ರಾಮ್, ಆಫೀಸ್ ನಲ್ಲಿ ಸೀತಾ ಮೇಲೆ ಗದರುತ್ತಾನೆ. ಬಳಿಕ ಸಿಹಿ, ರಾಮನ ಗೆಳೆತನಕ್ಕೆ ಆರಂಭವೆಂಬಂತೆ ಮೊಬೈಲ್ ನಂಬರ್ ಬದಲಾವಣೆಯೂ ಆಗುತ್ತದೆ. ಜೊತೆಗೆ ಸಿಹಿಯ ಹಾರೈಕೆ ಯಿಂದ ಮದುವೆ ಸಂಬಂಧ ಮುರಿಯುವಲ್ಲಿ ರಾಮ್ ಯಶಸ್ವಿಯೂ ಆಗಿರುತ್ತಾನೆ.
ಇನ್ನು ಈ ಸಂಚಿಕೆಯಲ್ಲಿ, ವರ್ಷದಲ್ಲಿ ಒಂದೇ ಬಾರಿ ಕೇಕ್ ತಿನ್ನೋ ಸಿಹಿಗೆ, ಮನೆಗೆ ರೌಡಿಗಳು ಬಂದಿದ್ದಕ್ಕೆ ಐಸ್ಕ್ರೀಮ್ ತಿನ್ನೋ ಅವಕಾಶ ಸಿಕ್ಕಿರುತ್ತೆ. ಮನೆಗೆ ಹೋದರೇ ಮಗಳು ರೌಡಿಗಳನ್ನು ನೋಡಿ ಹೆದರಬಹುದು ಎಂಬ ಯೋಚನೆ ಸೀತಾಳದ್ದು. ಹಾಗಾಗಿ ಸಮಯ ಕಳೆಯಲು ಪಾರ್ಕ್ಗೆ ಮಗಳನ್ನು ಕರೆದುಕೊಂಡು ಹೋಗಿರುತ್ತಾಳೆ. ಇದೆಲ್ಲದರ ಮಧ್ಯೆ ಸಿಹಿಗೆ ಮಾತ್ರ ಐಸ್ಕ್ರೀಂ ಸಿಕ್ಕಿರೋ ಖುಷಿ. ಇನ್ನು ರಾಮನಿಗೆ ಸಿಟ್ಟಾಗಿರೋ ಚಿಕ್ಕಮ್ಮನ ಸಮಾಧಾನ ಮಾಡೋ ಕೆಲಸ. ಆದರೆ ಚಿಕ್ಕಮ್ಮನ ನಾಟಕ ಅವನಿಗೆಬೇಗ ಅರ್ಥವಾಗಲಿ ಅನ್ನೋ ಆಸೆ ಪ್ರೇಕ್ಷಕರದ್ದು. ಚಿಕ್ಕಮ್ಮನ ಜೊತೆಯಲ್ಲಿ ಮಾತನಾಡಿ ಮುಗಿಯುತ್ತಿದ್ದಂತೆ ಕಾರಲ್ಲಿ ಹೊರಟ ರಾಮನಿಗೆ ದಾರಿಯಲ್ಲಿ ಕಂಡಿದ್ದು ಪಾರ್ಕ್ ಅಲ್ಲಿ ಕುಳಿತಿರುವ ಸೀತಾ ಮತ್ತು ಚಿನಕುರುಳಿ ಸಿಹಿ. ಇಬ್ಬರನ್ನು ಕಾರಿನಲ್ಲಿ ಡ್ರಾಪ್ ಮಾಡುತ್ತೀನಿ ಬನ್ನಿ ಎಂದು ಕರೆದರೂ, ರಾಮ್ ಆಫೀಸ್ ನಲ್ಲಿ ಬೈದಿದ್ದ ಎಂಬ ಅಸಮಾಧಾನ ಸೀತಾ ಮರೆತಿಲ್ಲ. ಅದಕ್ಕಾಗಿಯೇ ನಾವು ಬರೋದಿಲ್ಲ ಅಂತ ಖಡಕ್ ಆಗಿಯೇ ಹೇಳತ್ತಾಳೆ. ಇದು ರಾಮನಿಗೆ ಬೇಸರ ವಾಗಿದ್ದರೂ ಸಿಹಿ ಮುಖ ನೋಡಿ ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಾಸ್ ಆಗತ್ತಾನೆ. ಆದರೆ ಅಮ್ಮನ ಆ ವರ್ತನೆ ಸಿಹಿಗೂ ಇಷ್ಟ ಆಗದೇ ಆಕೆ ಅಮ್ಮನ್ನು ಪ್ರಶ್ನಿಸುತ್ತಾಳೆ. ಆಗ ಅಮ್ಮನ ಉತ್ತರ ನಾವು ಯಾರಿಗೂ ತೊಂದರೆ ಕೊಡಬಾರದು ಎನ್ನುತ್ತಾಳೆ.
ಇನ್ನು ಕತ್ತಲಾದರೂ ರೌಡಿಗಳು ಹೋದರೋ, ಇಲ್ಲವೋ ಎಂದು ತಿಳಿಯದೆಯೇ ಚಡಪಡಿಸುತ್ತಿರುವ ಸೀತಾಗೆ, ಆಕೆಯ ಅಮ್ಮ ಆ ರೌಡಿಗಳು ಹೋದರೆಂದು ಕಾಣಿಸುತ್ತದೆ ನೀನು ಮನೆಗೆ ಬಾ ಎಂದು ಕರೆ ಮಾಡುತ್ತಾರೆ. ಅದನ್ನು ನಂಬಿ ಮನೆಗೆ ಬಂದ ಸೀತಾಳಿಗೆ ಗುಂಡಾಗಳು ಮನೆಯನ್ನು ಚೆಲ್ಲಾಪಿಲ್ಲಿ ಮಾಡಿರುವುದನ್ನು ನೋಡಿ ಅವರೆಲ್ಲರೂ ಅಲ್ಲೇ ಇದ್ದಾರೆ ಎಂಬ ಭಯದ ಜೊತೆಗೆ ತನ್ನ ಮಗಳು ಹೆದರುತ್ತಾಳಲ್ಲ ಎಂಬ ಆತಂಕವೇ ಹೆಚ್ಚಾಗುತ್ತದೆ. ಇನ್ನು ಮಗಳನ್ನು ಒಳಗಡೆ ಕಡೆದುಕೊಂಡು ಹೋಗಿ ಅವಳನ್ನು ಸಮಾಧಾನ ಮಾಡಿ ನಾನು ಅವರೊಂದಿಗೆ ಮಾತನಾಡಿ ಕಳುಹಿಸುತ್ತೇನೆ ಎಂಬ ಭರವಸೆ ನೀಡಿ ಕೋಣೆಯಿಂದ ಹೊರಬಂದ ಸೀತಾಗೆ ಅವರನ್ನು ಸಾಗಿ ಹಾಕುವುದೇ ದೊಡ್ಡ ಕೆಲಸವಾಯಿತು.
ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿ ಆರಂಭಕ್ಕೂ ಮೊದಲು ಸಖತ್ ಕ್ಯೂಟ್ ಲುಕ್ನಲ್ಲಿ ಮಿಂಚಿದ ವೈಷ್ಣವಿ ಗೌಡ
ಇನ್ನು ರಾಮನಿಗೆ, ಸಿಹಿ ಆಗ ಸಿಕ್ಕಾಗಲೂ ಧನ್ಯವಾದ ಹೇಳಲಿಲ್ಲ ಎಂಬ ಕೊರಗಿನಿಂದ ಕರೆ ಮಾಡುತ್ತಾನೆ. ಅತ್ತ ಮಾತನಾಡಿದ ಸಿಹಿ ರಾಮನ ಎಲ್ಲ ಮಾತುಗಳಿಗೂ ಬೇಸರದಿಂದ ಉತ್ತರ ಕೊಡುವಾಗ ಏನಾಯಿತು ಎಂದು ರಾಮ ಕೇಳುತ್ತಾನೆ. ಇರುವ ವಿಷಯವನ್ನು ಸಿಹಿ ತನಗೆ ತಿಳಿದ ಹಾಗೆ ಹೇಳುತ್ತಿರುವಾಗ, ದೊರದಿಂದ ಕೇಳುತ್ತಿರುವ ಸೀತಾ ಮತ್ತು ರೌಡಿಯ ಮಾತುಗಳನ್ನು ಆಲಿಸಿ ಎಲ್ಲವನ್ನೂ ತಿಳಿದುಕೊಂಡ ರಾಮ, ಸಿಹಿಗೆ ೧೦ ಎಣಿಸುವಂತೆ ಹೇಳಿ, ತನ್ನ ಗೆಳೆಯ ಅಶೋಕ್ ಬಳಿಯಲ್ಲಿ ತನ್ನ ಆಂಕಲ್ ಗೆ ಈ ಬಗ್ಗೆ ಹೇಳುವಂತೆ ಸೂಚಿಸುತ್ತಾನೆ. ಬಳಿಕ ಆ ರೌಡಿಗಳಿಗೆ ಬಂದ ಫೋನ್ ಕರೆ ಕೇಳಿ ಹೆದರಿಕೊಂಡು ಸೀತಾ ಬಳಿ ಕ್ಷಮೆ ಕೇಳಿ ಓಡುತ್ತಾರೆ. ಸಿಹಿಯ ಕೊನೆಯ ಸಂಖ್ಯೆ ಎಣಿಸುವಾಗ ಎಲ್ಲವೂ ಮುಗಿದು ಮನೆ ಮೊದಲಿನಂತಾಗುತ್ತದೆ. ಆದರೆ ಸೀತಾಳಿಗೆ ಇವೆಲ್ಲಾ ವಿಚಿತ್ರವೇನಿಸುತ್ತದೆ. ಹಾಗಾದರೆ ಸೀತಾಗೆ ರಾಮನ ಸಹಾಯ ತಿಳಿಯಬಹುದಾ? ಸಂತೋಷ ನೀಡಿದ ಗೆಳೆಯನಿಗೆ ಸಿಹಿ ಯಾವ ರೀತಿ ಧನ್ಯವಾದ ಹೇಳುತ್ತಾಳೆ ಮುಂದಿನ ಸಂಚಿಕೆಗೆ ಕಾದು ನೋಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:58 am, Wed, 26 July 23