ನಿರ್ದೇಶಕ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸೂರ್ಯ ಕಿರಣ್​ ಜಾಂಡಿಸ್​ನಿಂದ ನಿಧನ

ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಸೂರ್ಯ ಕಿರಣ್​ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಜಾಂಡಿಸ್​ನಿಂದ ಬಳಲುತ್ತಿದ್ದ ಸೂರ್ಯ ಕಿರಣ್​ ಅವರನ್ನು ಚೆನ್ನೈನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು (ಮಾ.11) ಅವರು ನಿಧನರಾಗಿದ್ದಾರೆ.

ನಿರ್ದೇಶಕ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸೂರ್ಯ ಕಿರಣ್​ ಜಾಂಡಿಸ್​ನಿಂದ ನಿಧನ
ಸೂರ್ಯ ಕಿರಣ್​

Updated on: Mar 11, 2024 | 8:29 PM

ತೆಲುಗು ಚಿತ್ರರಂಗದಿಂದ ಕಹಿ ಸುದ್ದಿ ಕೇಳಿಬಂದಿದೆ. ಟಾಲಿವುಡ್​ (Tollywood) ಸಿನಿಮಾ ನಿರ್ದೇಶಕ ಸೂರ್ಯ ಕಿರಣ್​ ಅವರು ನಿಧನರಾಗಿದ್ದಾರೆ. ಜಾಂಡಿಸ್​ನಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಇಂದು (ಮಾರ್ಚ್​ 11) ಕೊನೆಯುಸಿರು ಎಳೆದಿದ್ದಾರೆ. ಅವರ ಸಾವಿನ ಸುದ್ದಿಯನ್ನು ಆಪ್ತರು ಖಚಿತಪಡಿಸಿದ್ದಾರೆ. ಸೂರ್ಯ ಕಿರಣ್ (Surya Kiran)​ ಅವರಿಗೆ 51 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ (Surya Kiran Death) ಟಾಲಿವುಡ್​ನ ಅನೇಕರು ಕಂಬನಿ ಮಿಡಿದಿದ್ದಾರೆ. ಸಿನಿಮಾ ಮಾತ್ರವಲ್ಲದೇ ‘ಬಿಗ್​ ಬಾಸ್​ ತೆಲುಗು’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಸೂರ್ಯ ಕಿರಣ್​ ಅವರು ಫೇಮಸ್​ ಆಗಿದ್ದರು.

ಸೂರ್ಯ ಕಿರಣ್​ ಅವರ ನಿಧನದ ಸುದ್ದಿಯನ್ನು ಪಿಆರ್​ಒ ಸುರೇಶ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ‘ಜಾಂಡಿಸ್​ನಿಂದ ಸೂರ್ಯ ಕಿರಣ್​ ನಿಧನರಾಗಿದ್ದಾರೆ. ತೆಲುಗಿನಲ್ಲಿ ‘ಸತ್ಯಂ’, ‘ರಾಜು ಭಾಯ್​’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಎಕ್ಸ್​ನಲ್ಲಿ (ಟ್ವಿಟರ್​) ಸುರೇಶ್​ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಖ್ಯಾತ ಕಿರುತೆರೆ ಕಲಾವಿದೆಗೆ ಹೃದಯಾಘಾತ; ನಟಿ, ನಿರ್ದೇಶಕಿ ಕವಿತಾ ಚೌಧರಿ ನಿಧನ

ಸೂರ್ಯ ಕಿರಣ್​ ಅವರ ಕುಟುಂಬದವರು ಮೂಲತಃ ಕೇರಳದ ತಿರುವನಂತಪುರದವರು. ಸೂರ್ಯ ಕಿರಣ್​ ಜನಿಸಿದ್ದು ಚೈನ್ನೈನಲ್ಲಿ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅವರು ಬಾಲನಟನಾಗಿ ಅಭಿನಯಿಸಿದ್ದರು. ಆ ಮೂಲಕ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದರು. ಆಗ ಅವರನ್ನು ಮಾಸ್ಟರ್​ ಸುರೇಶ್​ ಎಂದು ಕರೆಯಲಾಗುತ್ತಿತ್ತು. ಸೂರ್ಯ ಕಿರಣ್​ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಸತ್ಯಂ’ 2003ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ಮತ್ತು ಸುಮಂತ್​ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು.

ಮೊದಲ ಸಿನಿಮಾದಲ್ಲೇ ಸೂರ್ಯ ಕಿರಣ್​ ಅವರು ಯಶಸ್ಸು ಕಂಡಿದ್ದರು. ‘ಸತ್ಯಂ’ ಸಿನಿಮಾ 150 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಬಳಿಕ 2006ರಲ್ಲಿ ‘ಬ್ರಹ್ಮಾಸ್ತ್ರ’, 2007ರಲ್ಲಿ ‘ರಾಜು ಭಾಯ್​’, 2020ರಲ್ಲಿ ‘ಚಾಪ್ಟರ್​ 6’ ಸಿನಿಮಾಗಳನ್ನು ಅವರು ನಿರ್ಧರಿಸಿದ್ದರು. ‘ಬಿಗ್​ ಬಾಸ್​ ತೆಲುಗು ಸೀಸನ್​ 4’ ಶೋನಲ್ಲಿ ಅವರು ಸ್ಪರ್ಧಿಸಿದ್ದರು. ಕೆಲವು ವರ್ಷಗಳಿಂದ ಈಚೆಗೆ ಸೂರ್ಯ ಕಿರಣ್​ ಅವರು ನಟನೆ ಮತ್ತು ನಿರ್ದೇಶನದಿಂದ ದೂರ ಉಳಿದುಕೊಂಡಿದ್ದರು. ಕಮ್​ಬ್ಯಾಕ್​ ಮಾಡಬೇಕು ಎಂಬ ಆಲೋಚನೆ ಅವರಿಗೆ ಇತ್ತು. ಅಷ್ಟರಲ್ಲಾಗಲೇ ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.