ರೈತರ ಹಾರೈಕೆ ಪಡೆದ ‘ಮೆಹಬೂಬಾ’ ಸಿನಿಮಾ ಮಾ.15ಕ್ಕೆ ಬಿಡುಗಡೆ; ಇಲ್ಲಿದೆ ಟ್ರೇಲರ್..
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ಮೆಹಬೂಬಾ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಬೇರೆ ಬೇರೆ ಊರುಗಳಿಂದ ಬಂದ ರೈತರು ಈ ಚಿತ್ರದ ಟ್ರೇಲರ್ ಅನಾವರಣ ಮಾಡಿ ಶುಭ ಹಾರೈಸಿದ್ದಾರೆ. ಮಾಡರ್ನ್ ರೈತ ಶಶಿ ಅವರು ಈ ಸಿನಿಮಾ ಮೂಲಕ ಚಂದನವನಕ್ಕೆ ಹೀರೋ ಆಗಿ ಎಂಟ್ರಿ ನೀಡುತ್ತಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.
ಬಿಗ್ ಬಾಸ್ ವಿನ್ನರ್, ಮಾಡರ್ನ್ ರೈತ ಎಂದು ಫೇಮಸ್ ಆಗಿರುವ ಶಶಿ ಅವರು ‘ಮೆಹಬೂಬಾ’ (Mehabooba) ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾ ಈಗ ಜನರ ಎದುರು ಬರಲು ಸಜ್ಜಾಗಿದೆ. ಮಾರ್ಚ್ 15ರಂದು ‘ಮೆಹಬೂಬಾ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದ ರಿಲೀಸ್ಗೆ ದಿನಗಣನೆ ಆರಂಭ ಆಗಿರುವಾಗ ಟ್ರೇಲರ್ ಅನಾವರಣ ಮಾಡಲಾಗಿದೆ. ಶಶಿ (Bigg Boss Shashi) ಜೊತೆ ಪಾವನಾ ಗೌಡ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್ (Mehabooba Movie Trailer) ಬಿಡುಗಡೆ ಸಮಾರಂಭಕ್ಕೆ ರೈತರು ಬಂದು ಶುಭ ಕೋರಿದ್ದಾರೆ. ಆ ಮೂಲಕ ಮಾಡರ್ನ್ ರೈತ ಶಶಿಗೆ ರೈತರು ಸಾಥ್ ನೀಡಿದ್ದಾರೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕೀಯದ ಗಣ್ಯರನ್ನು ಆಹ್ವಾನಿಸುವ ಟ್ರೆಂಡ್ ಇದೆ. ಆದರೆ ‘ಮೆಹಬೂಬಾ’ ಸಿನಿಮಾದ ಟ್ರೇಲರ್ ಬಿಡುಗಡೆಗೆ ರೈತರೇ ಮುಖ್ಯ ಅತಿಥಿಗಳು! ಶಶಿ ಅವರ ಸಿನಿಮಾ ಪ್ರಯತ್ನಕ್ಕೆ ಅನ್ನದಾತರಾದ ರೈತರು ವಿಶ್ ಮಾಡಿದ್ದಾರೆ. ರೈತರಿಂದ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸಿ ಚಿತ್ರತಂಡದವರು ಖುಷಿಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಮೆಹಬೂಬಾ’ ಟ್ರೇಲರ್ ರಿಲೀಸ್ ಸಮಾರಂಭಕ್ಕೆ ರಾಜ್ಯದ ಹಲವು ಊರುಗಳಿಂದ ರೈತರು ಬಂದಿದ್ದರು.
‘ಮೆಹಬೂಬಾ’ ಸಿನಿಮಾಗೆ ಅನೂಪ್ ಆ್ಯಂಟೋನಿ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಬಳಿಕ ಶಶಿ ಮಾತನಾಡಿದರು. ‘ಬಿಗ್ ಬಾಸ್ ಶೋನಲ್ಲಿ ನನ್ನನ್ನು ನೋಡಿದವರು, ರೈತಾಪಿ ವರ್ಗದವರು ಹಾಗೂ ನಾನು ಯಾರಿಗೆ ಪರಿಚಯ ಇದ್ದೇನೋ ಅವರೇ ನನ್ನ ಫಸ್ಟ್ ಸರ್ಕಲ್ನಲ್ಲಿ ಇರುತ್ತಾರೆ. ಅವರು ಚಿತ್ರಮಂದಿರಕ್ಕೆ ಬಂದು ನನ್ನ ಚಿತ್ರವನ್ನು ನೋಡಬೇಕು ಅಂತ ಮನವಿ ಮಾಡಿಕೊಳ್ಳುತ್ತೇನೆ. ಸಿನಿಮಾ ಚೆನ್ನಾಗಿದೆ ಎಂದು ನೀವು ಬೇರೆಯವರಿಗೆ ಹೇಳಿದರೆ ಇನ್ನುಳಿದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ಪ್ರೇಕ್ಷಕರು ಇಲ್ಲದಿದ್ದರೆ ಒಳ್ಳೆಯ ಸಿನಿಮಾ ನಿಲ್ಲುವುದು ಕಷ್ಟ’ ಎಂದಿದ್ದಾರೆ ಶಶಿ. ಆ ಮೂಲಕ ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘ಮೆಹಬೂಬಾ’ ಸಿನಿಮಾದ ಟ್ರೇಲರ್:
ಚಿತ್ರರಂಗಕ್ಕೆ ಶಶಿ ಹೊಸ ಹೀರೋ. ಅವರ ಜೊತೆ ಅನುಭವಿ ಕಲಾವಿದರು ಕೆಲಸ ಮಾಡಿದ್ದಾರೆ. ಕಂಟೆಂಟ್ ಮೇಲೆ ಚಿತ್ರತಂಡಕ್ಕೆ ಭರವಸೆ ಇದೆ. ಸರ್ವಧರ್ಮ ಸಾಮರಸ್ಯ ಸಾರುವ ಈ ಚಿತ್ರದಲ್ಲಿ ಶಶಿ ಮತ್ತು ಪಾವನಾ ಗೌಡ ಅವರು ಜೋಡಿ ಆಗಿದ್ದಾರೆ. ಬೆಂಗಳೂರಿನ ವಿವಿಧ ಭಾಗಗಳಿಗೆ ತೆರಳಿ ಅವರು ಈಗಾಗಲೇ ಪ್ರಚಾರ ಮಾಡಿದ್ದಾರೆ. ಕೇರಳದ ಒಂದು ನೈಜ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ ಎಂಬುದು ವಿಶೇಷ.
ಇದನ್ನೂ ಓದಿ: ಮಾರ್ಚ್ 15ಕ್ಕೆ ‘ಮೆಹಬೂಬಾ’ ಬಿಡುಗಡೆ; ಗಲ್ಲಿ ಗಲ್ಲಿಯಲ್ಲಿ ಶಶಿ-ಪಾವನಾ ವಿಶೇಷ ಪ್ರಚಾರ
‘ಮೆಹಬೂಬಾ’ ಸಿನಿಮಾಗೆ ಮ್ಯಾಥ್ಯೂಸ್ ಮನು ಅವರ ಸಂಗೀತ ನಿರ್ದೇಶನವಿದೆ. ಕಿರಣ್ ಹಂಪಾಪುರ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಆ್ಯಕ್ಷನ್ ದೃಶ್ಯಗಳು ಮಾಸ್ ಮಾದ ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿವೆ. ಕಲೈ ಅವರು ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ‘ಮೆಹಬೂಬಾ’ ಚಿತ್ರವನ್ನು ‘ದಕ್ಷ್ ಎಂಟರ್ಟೇನ್ಮೆಂಟ್ಸ್’ ಸಹಯೋಗದಲ್ಲಿ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ಮೂಲಕ ಶಶಿ ಅವರೇ ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.