ಮಾರ್ಚ್ 15ಕ್ಕೆ ‘ಮೆಹಬೂಬಾ’ ಬಿಡುಗಡೆ; ಗಲ್ಲಿ ಗಲ್ಲಿಯಲ್ಲಿ ಶಶಿ-ಪಾವನಾ ವಿಶೇಷ ಪ್ರಚಾರ
‘ಬಿಗ್ ಬಾಸ್ ಕನ್ನಡ ಸೀಸನ್ 6’ ರಿಯಾಲಿಟಿ ಶೋನಲ್ಲಿ ಟ್ರೋಫಿ ಗೆದ್ದ ಶಶಿ ಅವರು ‘ಮೆಹಬೂಬಾ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಪಾವನಾ ಗೌಡ ಜೋಡಿ ಆಗಿದ್ದಾರೆ. ಈ ಸಿನಿಮಾ ಮಾರ್ಚ್ 15ರಂದು ಬಿಡುಗಡೆ ಆಗಲಿದೆ. ಜನರಿಗೆ ತಮ್ಮ ಸಿನಿಮಾದ ರಿಲೀಸ್ ಡೇಟ್ ತಿಳಿಸಲು ಶಶಿ ಮತ್ತು ಪಾವನಾ ಅವರು ಬೆಂಗಳೂರಿನ ಗಲ್ಲಿ ಗಲ್ಲಿ ಸುತ್ತಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.
ಕಷ್ಟಪಟ್ಟು ಹೇಗೋ ಸಿನಿಮಾ ಮಾಡಬಹುದು. ಆದರೆ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ನಿಜಕ್ಕೂ ಸವಾಲಿನ ಕೆಲಸ. ಅದಕ್ಕಾಗಿ ಚಿತ್ರತಂಡದವರು ಸಾಕಷ್ಟು ಶ್ರಮಪಡಬೇಕು. ಹತ್ತು ಹಲವು ರೀತಿಯಲ್ಲಿ ಪ್ರಮೋಷನ್ ಮಾಡಬೇಕು. ಈಗ ಕನ್ನಡದ ‘ಮೆಹಬೂಬಾ’ (Mehabooba) ಚಿತ್ರತಂಡದವರು ಅಕ್ಷರಶಃ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ಶಶಿ (Bigg Boss Shashi) ಮತ್ತು ಪಾವನಾ ಗೌಡ (Paavana Gowda) ಅವರು ಮುಂಚೂಣಿಯಲ್ಲಿ ನಿಂತು ತಮ್ಮ ಸಿನಿಮಾದ ಬಗ್ಗೆ ಜನರಿಗೆ ತಿಳಿಸಿಕೊಡುತ್ತಿದ್ದಾರೆ. ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ತೆರಳಿ ಅವರು ಪ್ರಮೋಷನ್ ಮಾಡಿರುವ ಫೋಟೋಗಳು ವೈರಲ್ ಆಗಿದೆ. ‘ಮೆಹಬೂಬಾ’ ಸಿನಿಮಾದ ರಿಲೀಸ್ ಡೇಟ್ ತಿಳಿಸಲು ಚಿತ್ರತಂಡ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದೆ.
‘ಮೆಹಬೂಬಾ’ ಸಿನಿಮಾ ಮಾರ್ಚ್ 15ರಂದು ಬಿಡುಗಡೆ ಆಗಲಿದೆ. ಒಂದಷ್ಟು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಬಿಡುಗಡೆ ಆಗಿರುವ 2 ಹಾಡುಗಳು ಗಮನ ಸೆಳೆದಿವೆ. ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಶಶಿ ಅವರು ‘ಕನ್ನಡ ಬಿಗ್ ಬಾಸ್ ಸೀಸನ್ 6’ ವಿನ್ನರ್ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಕೃಷಿ ಜೊತೆ ನಟನೆ ಬಗ್ಗೆಯೂ ಅವರಿಗೆ ಆಸಕ್ತಿ ಇದೆ. ಈ ಸಿನಿಮಾದ ಮೂಲಕ ಹೀರೋ ಆಗಿ ಅವರು ಚಂದನವನಕ್ಕೆ ಕಾಲಿಡುತ್ತಿದ್ದಾರೆ. ‘ದಕ್ಷ್ ಎಂಟರ್ಟೇನ್ಮೆಂಟ್ಸ್’ ಸಹಯೋಗದಲ್ಲಿ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಮೂಲಕ ‘ಮೆಹಬೂಬಾ’ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಅನೂಪ್ ಆಂಟೋನಿ ಅವರು ನಿರ್ದೇಶನ ಮಾಡಿದ್ದಾರೆ.
ಶಶಿ ಮತ್ತು ಪಾವನಾ ಗೌಡ ಪ್ರಚಾರ ಮಾಡಿದ ವಿಡಿಯೋ:
View this post on Instagram
ಮಾರ್ಡನ್ ರೈತ ಎಂದೇ ಫೇಮಸ್ ಆಗಿರುವ ಶಶಿ ಅವರು ‘ಮೆಹಬೂಬಾ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಪಾವನಾ ಗೌಡ ಅಭಿನಯಿಸಿದ್ದಾರೆ. ತಮ್ಮ ಪಾತ್ರಗಳಿಗೆ ತಕ್ಕಂತೆಯೇ ಶಶಿ ಅವರು ಹಿಂದೂ ಹುಡುಗನಂತೆ ಹಾಗೂ ಪಾವನಾ ಗೌಡ ಅವರು ಮುಸ್ಲಿಂ ಯುವತಿಯಂತೆ ವೇಷ ಧರಿಸಿ, ಕೈಯಲ್ಲಿ ರಿಲೀಸ್ ಡೇಟ್ ಬಗ್ಗೆ ಮಾಹಿತಿ ಇರುವ ಬೋರ್ಡ್ ಹಿಡಿದುಕೊಂಡು ಬೆಂಗಳೂರಿನ ಹಲವು ಕಡೆಗಳಲ್ಲಿ ಪ್ರಚಾರ ಮಾಡಿದ್ದಾರೆ. ವಿಧಾನಸೌಧ, ಹೈಕೋರ್ಟ್, ಮಸೀದಿ, ಪೊಲೀಸ್ ಠಾಣೆ, ಮಾರ್ಕೆಟ್, ಮಂದಿರ.. ಹೀಗೆ ಅನೇಕ ಕಡೆಗಳಲ್ಲಿ ಪ್ರಚಾರ ಮಾಡಿದ್ದಾರೆ. ಸರ್ವಧರ್ಮ ಸಾಮರಸ್ಯದ ಕುರಿತು ಸಿದ್ಧವಾಗಿರುವ ‘ಮೆಹಬೂಬಾ’ ಸಿನಿಮಾ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: KTM Movie Review: ದೀಕ್ಷಿತ್ ಶೆಟ್ಟಿ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಕೆಟಿಎಂ’
ಮ್ಯಾಥ್ಯೂಸ್ ಮನು ಅವರು ‘ಮೆಹಬೂಬಾ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ, ಕಲೈ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಕೇರಳದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ ಎಂಬ ಕಾರಣದಿಂದಲೂ ಕೌತುಕ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.