
ದೇಶದ ಅತ್ಯಂತ ಲಾಭದಾಯಕ ಚಿತ್ರರಂಗ ಎಂದರೆ ಅದು ತೆಲುಗು ಚಿತ್ರರಂಗ. ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಕಾರಣವಾದ ಚಿತ್ರರಂಗ ಎಂದರೂ ತಪ್ಪಾಗಲಾರದು. ಜೊತೆಗೆ ಅತಿ ಹೆಚ್ಚು ಸ್ಟಾರ್ ನಟರುಗಳನ್ನು ಹೊಂದಿರುವ ಚಿತ್ರರಂಗವೂ ಸಹ. ಆದರೆ ಕೆಲ ದಿನಗಳ ಹಿಂದೆ ಅಚಾನಕ್ಕಾಗಿ ತೆಲುಗು ಚಿತ್ರರಂಗದ ಎಲ್ಲ ಸಿನಿಮಾಗಳ ಶೂಟಿಂಗ್ ನಿಂತು ಹೋಗಿತ್ತು. ಅದಕ್ಕೆ ಕಾರಣ ಕಾರ್ಮಿಕರ ಪ್ರತಿಭಟನೆ ಇದೀಗ, ಪ್ರತಿಭಟನೆ ಅಂತ್ಯವಾಗಿದ್ದು ಮತ್ತೆ ಶೂಟಿಂಗ್ ಶುರು ಆಗುತ್ತಿದೆ.
ತೆಲುಗು ಚಿತ್ರರಂಗದ ವರ್ಕರ್ಸ್ ಫೆಡರೇಷನ್ (ಕಾರ್ಮಿಕರ ಒಕ್ಕೂಟ) ಸಂಭಾವನೆ ಏರಿಕೆಗೆ ಹಾಗೂ ಇನ್ನಿತರೆ ಕೆಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿತ್ತು. ಹೀಗಾಗಿ ಎಲ್ಲ ಸಿನಿಮಾಗಳ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು. ಹಲವು ದೊಡ್ಡ ಬಜೆಟ್ ಸಿನಿಮಾಗಳ ಚಿತ್ರೀಕರಣಗಳು ಸಹ ಇದರಿಂದಾಗಿ ನಿಂತು ಹೋಗಿದ್ದವು. ತೆಲುಗು ಫಿಲಂ ಚೇಂಬರ್ ಸೇರಿದಂತೆ, ನಿರ್ಮಾಪಕರ ಸಂಘ ಇನ್ನಿತರೆ ಕೆಲ ಸಿನಿ ಒಕ್ಕೂಟಗಳು ಈ ಬಗ್ಗೆ ಕಾರ್ಮಿಕರ ಒಕ್ಕೂಟದೊಂದಿಗೆ ಸತತ ಸಭೆ ನಡೆಸುತ್ತಲೇ ಬಂದವು. ಇದೀಗ ಕಾರ್ಮಿಕರ ಒಕ್ಕೂಟ ಪ್ರತಿಭಟನೆಯನ್ನು ಹಿಂಪಡೆದದೆ.
ಇದನ್ನೂ ಓದಿ:ವರ್ಷಗಳ ಬಳಿಕ ಮತ್ತೆ ತೆಲುಗು ಚಿತ್ರರಂಗದತ್ತ ಪೂಜಾ ಹೆಗ್ಡೆ?
ಕಾರ್ಮಿಕರು ಬರೋಬ್ಬರಿ 30% ಸಂಭಾವನೆ ಏರಿಕೆಗೆ ಒತ್ತಾಯ ಮಾಡಿದ್ದರು. ನಿರ್ಮಾಪಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರಾದರೂ ಒಮ್ಮೆಲೆ 30% ಸಂಭಾವನೆ ಏರಿಕೆ ಸಾಧ್ಯವಿಲ್ಲ ಎಂದಿದ್ದಾರೆ. ವರ್ಷಕ್ಕೆ 5% ರೀತಿಯಲ್ಲಿ ಸಂಭಾವನೆ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದರಲ್ಲೂ ದೊಡ್ಡ ಸಿನಿಮಾಗಳಗೆ ಕೆಲಸ ಮಾಡುವ ನುರಿತ ಕಾರ್ಮಿಕರಿಗೆ ಹೆಚ್ಚಿನ ಸಂಭಾವನೆ, ಚಿಕ್ಕ ಸಿನಿಮಾಗಳಗೆ ಕೆಲಸ ಮಾಡುವ ಅನನುಭವಿ ಕಾರ್ಮಿಕರಿಗೆ ಕಡಿಮೆ ಸಂಭಾವನೆ ನೀಡುವುದಾಗಿಯೂ ಷರತ್ತನ್ನು ವಿಧಿಸಲಾಗಿದೆ.
ಇದೀಗ ಕಾರ್ಮಿಕರು ಹಾಗೂ ನಿರ್ಮಾಪಕರ ಸಂಘದ ನಡುವೆ ಚರ್ಚೆ ಫಲಪ್ರಧವಾಗಿದ್ದು ಕಾರ್ಮಿಕರ ಒಕ್ಕೂಟ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದೆ. ನಾಳೆ (ಆಗಸ್ಟ್ 23) ರಿಂದ ಸಿನಿಮಾಗಳ ಚಿತ್ರೀಕರಣಕ್ಕೆ ಮರಳುವುದಾಗಿ ಘೋಷಣೆ ಮಾಡಿವೆ. ಒಕ್ಕೂಟದ ಪ್ರತಿಭಟನೆಯಿಂದಾಗಿ ಹಲವಾರು ಸಿನಿಮಾಗಳ ಚಿತ್ರೀಕರಣ ನಿಂತು ಹೋಗಿದ್ದವು. ಇದೀಗ ಸಿನಿಮಾಗಳ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಪ್ರಾರಂಭವಾಗಿವೆ. ಈ ಪ್ರತಿಭಟನೆಯಿಂದಾಗಿ ಸಿನಿಮಾಕ್ಕೆ ಸಂಬಂಧಿಸಿದ ಸುಮಾರು 24 ವಿಭಾಗಗಳ ಕಾರ್ಮಿಕರ ಸಂಬಳಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ