ನಿರ್ಮಾಪಕ ಕೆ. ವೆಂಕಟ್ ನಾರಾಯಣ್​ಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಟ್ಟ ದಳಪತಿ ವಿಜಯ್

ಕೆ. ವೆಂಕಟ್ ನಾರಾಯಣ್, ದಳಪತಿ ವಿಜಯ್ ಅವರ ಸಿನಿಮಾ ನಿರ್ಮಾಪಕರು, ತಮಿಳುನಾಡು ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿಯಾಗಿ ಕ್ಯಾಬಿನೆಟ್ ದರ್ಜೆ ಸ್ಥಾನ ಪಡೆದಿದ್ದಾರೆ. ವಿಜಯ್ ಸಿನಿಮಾದಿಂದ ನಷ್ಟ ಅನುಭವಿಸಿದ್ದ ವೆಂಕಟ್​ಗೆ ಈ ಸ್ಥಾನಮಾನ ಪ್ರಭಾವದಿಂದ ಸಿಕ್ಕಿದೆಯೇ ಎಂಬ ಪ್ರಶ್ನೆ ಎದ್ದಿದೆ. ವಿರೋಧ ಪಕ್ಷಗಳು ಈ ನೇಮಕಾತಿಯನ್ನು ತೀವ್ರವಾಗಿ ಖಂಡಿಸಿ, ಹಿಂದಿನ ವಿವಾದಿತ ನೇಮಕಾತಿಯನ್ನು ನೆನಪಿಸಿವೆ.

ನಿರ್ಮಾಪಕ ಕೆ. ವೆಂಕಟ್ ನಾರಾಯಣ್​ಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಟ್ಟ ದಳಪತಿ ವಿಜಯ್
ಕೆವಿಎನ್​-ವಿಜಯ್

Updated on: Jun 27, 2026 | 7:43 AM

ಮುಖ್ಯಾಂಶಗಳು

  • ವಿಜಯ್ ಮತ್ತು ವೆಂಕಟ್ ನಾರಾಯಣ್ ಆಪ್ತತೆ ಬಗ್ಗೆ ಚರ್ಚೆ
  • ವೆಂಕಟ್​​ಗೆ ಸಿನಿಮಾ ನಷ್ಟದಿಂದ ರಾಜಕೀಯ ಸ್ಥಾನಮಾನ?
  • ಹಿಂದಿನ ವಿವಾದಿತ ನೇಮಕಾತಿಗಳ ಬಗ್ಗೆಯೂ ಮತ್ತೆ ಚರ್ಚೆ

ಸಿನಿಮಾ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಅವರು ದಳಪತಿ ವಿಜಯ್ ಅವರ (Vijay) ಕೊನೆಯ ಚಿತ್ರ ‘ಜನ ನಾಯಗನ್​’ಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಇದರಿಂದ ವೆಂಕಟ್ ನಾರಾಯಣ್ ಅವರಿಗೆ ನಷ್ಟ ಆಗುತ್ತಿದೆ. ಹೀಗಿರುವಾಗಲೇ ಅವರಿಗೆ ತಮಿಳುನಾಡು ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿದೆ. ತಮಿಳುನಾಡು ಸರ್ಕಾರ ಇವರನ್ನು ನವದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ. ಮೇ ತಿಂಗಳಲ್ಲಿ ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಹೋದಾಗಲೂ ವೆಂಕಟ ನಾರಾಯಣ್ ಜೊತೆಯಲ್ಲಿದ್ದರು.

ವಿಜಯ್ ಜೊತೆಗಿನ ಆಪ್ತತೆ

ವೆಂಕಟ ನಾರಾಯಣ್ ಹಾಗೂ ವಿಜಯ್ ಮಧ್ಯೆ ಸಾಕಷ್ಟು ಆಪ್ತತೆ ಇದೆ. ವೆಂಕಟ್ ಅವರು ಅನುಭವಿಸುತ್ತಿರುವ ತೊಂದರೆ ನೋಡಿ ವಿಜಯ್​​ಗೆ ಮರುಕ ಇದೆ. ಈ ಸಿನಿಮಾ ಬಿಡುಗಡೆಗೆ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಸೆನ್ಸಾರ್ ಮಂಡಳಿಯಿಂದಲೂ ಸಿನಿಮಾ ಬಿಡುಗಡೆ ತಡವಾಗಿದೆ. ಇದರಿಂದ ನಿರ್ಮಾಪಕರಿಗೆ ಭಾರಿ ನಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ವಿಜಯ್ ಸಂಪುಟ ದರ್ಜೆಯ ಸ್ಥಾನಮಾನ ನೀಡಿದರೇ ಎನ್ನುವ ಪ್ರಶ್ನೆ ಮೂಡಿದೆ.

ಈ ನೇಮಕಾತಿಯನ್ನು ತಮಿಳುನಾಡಿನ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ವಿಶೇಷ ಪ್ರತಿನಿಧಿ ಹುದ್ದೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಪ್ರಮುಖ ಕೊಂಡಿಯಾಗಿದೆ. ಕೇಂದ್ರ ಸಚಿವರೊಂದಿಗೆ ಸಮನ್ವಯ ಸಾಧಿಸಲು ಮತ್ತು ಸಂಸದರಿಗೆ ಸಹಾಯ ಮಾಡಲು ಈ ಹುದ್ದೆ ಮುಖ್ಯವಾಗಿದೆ. ಇಂತಹ ಜವಾಬ್ದಾರಿಯುತ ಸ್ಥಾನಕ್ಕೆ ಸಿನಿಮಾ ನಿರ್ಮಾಪಕರನ್ನು ತಂದಿರುವುದನ್ನು ಅನೇಕರು ವಿರೋಧಿಸಿದ್ದಾರೆ.

ಇದನ್ನೂ ಓದಿ: ‘ಪೆರಿಯಾರ್ ನಾಸ್ತಿಕತೆಯನ್ನು ಒಪ್ಪುವುದಿಲ್ಲ, ನಮಗೆ ದೇವರಲ್ಲಿ ನಂಬಿಕೆ ಇದೆ’; ಸಿಎಂ ವಿಜಯ್ 

ವಿಜಯ್ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ‘ಒಬ್ಬ ಸಿನಿಮಾ ನಿರ್ಮಾಪಕನನ್ನು ಇಂತಹ ಪ್ರಮುಖ ಹುದ್ದೆಗೆ ನೇಮಿಸುವುದು ಸರಿಯಲ್ಲ. ಈ ನಿರ್ಧಾರದಿಂದ ರಾಜ್ಯಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಅವಮಾನವಾಗುತ್ತದೆ’ ಎಂದು ಡಿಎಂಕೆ ಸಂಸದ ಪಿ. ವಿಲ್ಸನ್ ಹೇಳಿದ್ದಾರೆ.

ಮೊದಲೂ ಹೀಗೆ ಆಗಿತ್ತು

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿದ್ದರು. ಜ್ಯೋತಿಷಿಯೊಬ್ಬರಿಗೆ ಸರ್ಕಾರಿ ಅನುದಾನದ ಹುದ್ದೆ ನೀಡಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ಮಿತ್ರ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದವು. ಸಾರ್ವಜನಿಕ ವಲಯದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ತಕ್ಷಣವೇ ಎಚ್ಚೆತ್ತುಕೊಂಡು ನೇಮಕಾತಿ ಆದೇಶವನ್ನು ರದ್ದುಗೊಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us