ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ‘ತಾಂಡೇಲ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ (ಫೆಬ್ರವರಿ 1) ಹೈದರಾಬಾದ್ನಲ್ಲಿ ನಡೆಯಬೇಕಿತ್ತು. ಈ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಅತಿಥಿಯಾಗಿ ಭಾಗವಹಿಸಲಿದ್ದರು. ಕಾರ್ಯಕ್ರಮ ನಡೆವ ಸ್ಥಳ, ಸಮಯ ಇನ್ನಿತರೆ ಎಲ್ಲ ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. ಆದರೆ ಕಾರ್ಯಕ್ರಮವನ್ನು ಕೊನೆಯ ಕ್ಷಣದಲ್ಲಿ ರದ್ದು ಮಾಡಲಾಯ್ತು. ಇದಕ್ಕೆ ಕಾರಣ ಸ್ಟಾರ್ ನಟ ಮತ್ತು ಶಾಸಕ ನಂದಮೂರಿ ಬಾಲಕೃಷ್ಣ.
ನಂದಮೂರಿ ಬಾಲಕೃಷ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ನೀಡಿದೆ. ನಂದಮೂರಿ ಬಾಲಕೃಷ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿರುವ ಖುಷಿಯನ್ನು ಸಂಭ್ರಮಿಸಲು ಅವರ ಕುಟುಂಬದವರು ದೊಡ್ಡ ಪಾರ್ಟಿ ಆಯೋಜನೆ ಮಾಡಿದ್ದರು. ಈ ಸಂಭ್ರಮದ ಕಾರ್ಯಕ್ರಮವನ್ನು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪತ್ನಿ, ಬಾಲಯ್ಯ ಸಹೋದರಿ ನಾರಾ ಭುವನೇಶ್ವರಿ ಆಯೋಜನೆ ಮಾಡಿದ್ದರು.
ಬಾಲಯ್ಯ ಅವರಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಎಲ್ಲ ಗಣ್ಯರನ್ನು ಆಪ್ತರನ್ನು ಆಹ್ವಾನಿಸಲಾಗಿತ್ತು. ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಸೇರಿದಂತೆ ಹಲವು ದೊಡ್ಡ ದೊಡ್ಡ ನಟರು, ನಟಿಯರಿಗೆ ಈ ಕಾರ್ಯಕ್ರಮಕ್ಕೆಆಹ್ವಾನ ಇತ್ತು. ಬಾಲಯ್ಯ ಅವರ ಸಂಭ್ರಮಾಚರಣೆ ಕಾರ್ಯಕ್ರಮ ಇರುವ ಕಾರಣದಿಂದಾಗಿ ‘ತಾಂಡೆಲ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಒಂದು ದಿನಗಳ ಕಾಲ ಮುಂದೂಡಲಾಗಿದೆ.
ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿರುವ ಸಾಯಿ ಪಲ್ಲವಿ, ಇಕ್ಕಟ್ಟಿನಲ್ಲಿ ‘ತಾಂಡೇಲ್’ ಸಿನಿಮಾ
ಇಂದು (ಫೆಬ್ರವರಿ 02) ‘ತಾಂಡೆಲ್’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಹೈದರಾಬಾದ್ನಲ್ಲಿ ನಡೆಯಲಿದೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಯಾವುದೇ ಅಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶ ಇರುವುದಿಲ್ಲ. ಸಂಧ್ಯಾ ಥಿಯೇಟರ್ ದುರ್ಘಟನೆ ಆದ ಬಳಿಕ ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
‘ತಾಂಡೆಲ್’ ಸಿನಿಮಾ ಮೀನುಗಾರನೊಬ್ಬನ ಕತೆಯನ್ನು ಒಳಗೊಂಡಿದೆ. ಮೀನುಗಾರಿಕೆಗೆ ವಿಶಾಖಪಟ್ಟಣಂನಿಂದ ಆಳ ಸಮುದ್ರಕ್ಕೆ ಹೋಗುವ ಯುವಕ ಹಾಗೂ ಅವನ ಗುಂಪನ್ನು ಪಾಕಿಸ್ತಾನ ಸೈನಿಕರು ಹಿಡಿದು ಚಿತ್ರಹಿಂಸೆ ಕೊಡುತ್ತಾರೆ ಆ ಯುವಕ ಮತ್ತು ಆತನ ಗುಂಪು ಅಲ್ಲಿಂದ ಹೇಗೆ ತಪ್ಪಿಸಿಕೊಳ್ಳುತ್ತದೆ ಎಂಬುದು ಕತೆ. ಸಿನಿಮಾದಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ