ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಎ ಪ್ರಮಾಣಪತ್ರ 10 ದೃಶ್ಯಗಳಿಗೆ ಕತ್ತರಿ, ಮಾಜಿ ಸಿಎಂ ಸಂದರ್ಶನ ಡಿಲೀಟ್

|

Updated on: May 02, 2023 | 9:54 PM

The Kerala Story: ತೀವ್ರ ಚರ್ಚೆ, ವಿವಾದ ಎಬ್ಬಿಸಿರುವ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಸಿಬಿಎಫ್​ಸಿಯು ಎ ಪ್ರಮಾಣ ಪತ್ರ ನೀಡಿದೆ. ಸಿನಿಮಾದಲ್ಲಿನ 10 ದೃಶ್ಯಗಳಿಗೆ ಕತ್ತರಿ ಹಾಕಿಸಿದೆ.

ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಎ ಪ್ರಮಾಣಪತ್ರ 10 ದೃಶ್ಯಗಳಿಗೆ ಕತ್ತರಿ, ಮಾಜಿ ಸಿಎಂ ಸಂದರ್ಶನ ಡಿಲೀಟ್
ದಿ ಕೇರಳ ಸ್ಟೋರಿ
Follow us on

ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರಕ್ಕೆ ಸಂಬಂಧಿಸಿದ ಕತೆಯುಳ್ಳ ‘ದಿ ಕೇರಳ ಸ್ಟೋರಿ‘ (The Kerala Story) ಸಿನಿಮಾವು ಚರ್ಚೆ ಎಬ್ಬಿಸಿದ್ದು, ಸಿನಿಮಾದ ಬಿಡುಗಡೆಯನ್ನು ತಡೆಯಲು ಕೇರಳ ಸರ್ಕಾರ ಯತ್ನಿಸುತ್ತಿದೆ. ಕೇರಳದ ಹಲವು ರಾಜಕೀಯ ಪಕ್ಷಗಳು ಸಿನಿಮಾದ ವಿರುದ್ಧ ನಿಂತಿದ್ದು ಸುಳ್ಳುಗಳನ್ನು ಪೋಣಿಸಿದ ಇದು ಎಂದು ಹರಿಹಾಯ್ದಿದ್ದಾರೆ. ಬಿಡುಗಡೆಗೆ ಮುಂಚೆ ಸಿನಿಮಾವು ಸಿಬಿಎಫ್​ಸಿಯಿಂದ (CBFC) ಪ್ರಮಾಣ ಪತ್ರ ಪಡೆದಿದ್ದು, ಸಿನಿಮಾದ 10 ದೃಶ್ಯಗಳಿಗೆ ಕತ್ತರಿ ಹಾಕಿದ್ದರ ಜೊತೆಗೆ ಸಿನಿಮಾದಲ್ಲಿದ್ದ ಮಾಜಿ ಸಿಎಂ ಸಂದರ್ಶನದ ದೃಶ್ಯಕ್ಕೂ ಕತ್ತರಿ ಬಿದ್ದಿದೆ.

ಸುದಿಪ್ತೊ ಸೇನ್ (Sudito Sen) ನಿರ್ದೇಶನದ ಈ ಸಿನಿಮಾ ಮೇ 5 ರಂದು ಬಿಡುಗಡೆ ಆಗಲಿದ್ದು ಅದಕ್ಕೆ ಸಿಬಿಎಫ್​ಸಿಯು ಈ ಸಿನಿಮಾಕ್ಕೆ ಎ ಪ್ರಮಾಣ ಪತ್ರ ನೀಡಿದ್ದು, ಕೇವಲ ವಯಸ್ಕರಷ್ಟೆ ಸಿನಿಮಾ ನೋಡಬಹುದಾಗಿದೆ. ಸಿನಿಮಾದಲ್ಲಿದ್ದ ಬರೋಬ್ಬರಿ 10 ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿಸಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನದ ದೃಶ್ಯಗಳು ಸಹ ಇದರಲ್ಲಿ ಸೇರಿವೆ ಹಾಗೂ ಸಚಿವರೊಬ್ಬರು ಕೇರಳವನ್ನು ಮುಸ್ಲಿಂ ಬಾಹುಳ್ಯದ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದ ಸಂಭಾಷಣೆಗಳನ್ನು ಸಹ ತೆಗೆದು ಹಾಕಲಾಗಿದೆ.

ಇವುಗಳ ಜೊತೆಗೆ ಹಿಂದು ದೇವರುಗಳ ಬಗ್ಗೆ ಮುಸ್ಲಿಂ ಪಾತ್ರಗಳ ಕೈಯಲ್ಲಿ ಹೇಳಿಸಿದ್ದ ಸಂಭಾಷಣೆಗಳು, ಕಮ್ಯುನಿಸ್ಟ್​ ಪಕ್ಷದವರ ಬಗ್ಗೆ ಇದ್ದ ಕೀಳು ಅಭಿರುಚಿಯ, ಆರೋಪದ ಮಾದರಿಯ ಸಂಭಾಷಣೆಗಳುಳ್ಳ ದೃಶ್ಯಗಳನ್ನು ಸಹ ಸೆನ್ಸಾರ್ ಮಂಡಳಿಯು ಡಿಲೀಟ್ ಮಾಡಿಸಿದೆ. ಈ ನಡುವೆ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದ ನಿರ್ದೇಶಕ ಸುದಿಪ್ತೊ ಸೇನ್, ”ನೀವು ಸಾಕ್ಷರತೆಯಲ್ಲಿ ನಂಬರ್ 1, ಶಿಕ್ಷಣವು ಸಹಿಷ್ಣುತೆಯನ್ನು ಕಲಿಸುತ್ತದೆ. ದಯವಿಟ್ಟು ದಿ ಕೇರಳ ಸ್ಟೋರಿ ಸಿನಿಮಾ ನೋಡಿ. ನಿಮಗೆ ಇಷ್ಟವಾಗದೇ ಇದ್ದರೆ ಆ ನಂತರ ನಾವು ಚರ್ಚಿಸೋಣ. ಈ ಸಿನಿಮಾಕ್ಕಾಗಿ ನಾವು ಏಳು ವರ್ಷಗಳ ಕಾಲ ಕೇರಳದಲ್ಲಿ ಕೆಲಸ ಮಾಡಿದ್ದೇವೆ. ನಾವೂ ಸಹ ನಿಮ್ಮವರೇ, ನಾವೂ ಸಹ ಭಾರತೀಯರೆ” ಎಂದಿದ್ದಾರೆ.

ಸಿನಿಮಾದ ಟ್ರೈಲರ್​ನಲ್ಲಿ ಕೇರಳದ 32,000 ಯುವತಿಯರನ್ನು ಮತಾಂತರ ಮಾಡಲಾಗಿದೆ ಎಂಬ ಸಂಭಾಷಣೆ ಹಾಗೂ ಟೆಕ್ಸ್ಟ್ ಇದೆ. ಇದರ ಬಗ್ಗೆ ತೀವ್ರ ತಕರಾರು ಎದ್ದಿದ್ದು ಮುಸ್ಲಿಂ ಯೂಥ್ ಲೀಗ್ ಸಂಘಟನೆಯು, ಕೇರಳದ 32,000 ಯುವತಿಯರು ಐಎಸ್ ಸೇರಿದ್ದಾರೆ ಎಂಬುದನ್ನು ಸಾಬೀತುಪಡಿಸಿದರೆ 1 ಕೋಟಿ ಬಹುಮಾನ ನೀಡುತ್ತೇವೆ ಎಂದು ನಿರ್ದೇಶಕ ಸುದಿಪ್ತೊ ಸೇನ್ ಗೆ ಸವಾಲು ಎಸೆದಿದೆ.

ಇದನ್ನೂ ಓದಿ: Sudipto Sen: ‘ದಿ ಕೇರಳ ಸ್ಟೋರಿ’ ನಿರ್ದೇಶಕನ ವೆಬ್​ಸೈಟ್​ ಹ್ಯಾಕ್​; ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿ ಇಂಥ ಕೃತ್ಯ ಯಾಕೆ?

‘ದಿ ಕೇರಳ ಸ್ಟೋರಿ’ ನೈಜ ಘಟನೆ ಆಧಾರಿತವಾಗಿದ್ದು ಎಂದು ನಿರ್ದೇಶಕರು ಹೇಳಿದ್ದಾರೆ. 2022ರಲ್ಲಿ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಹಿಟ್ ಆಯಿತು. ಕಾಶ್ಮೀರಿ ಪಂಡಿತರ ವಲಸೆ ಮತ್ತು ಅವರ ಹತ್ಯೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ಈಗ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ಬರುತ್ತಿದ್ದು ಇದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮೇ 5ರಂದು ‘ದಿ ಕೇರಳ ಸ್ಟೋರಿ’ ರಿಲೀಸ್ ಆಗುತ್ತಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಸಿನಿಮಾ ಏಕೆ ರಿಲೀಸ್ ಆಗುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ