
ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ಯಾವುದೆಂದರೆ ‘ಕೆಜಿಎಫ್ 2‘ (KGF 2), ‘ಆರ್ಆರ್ಆರ್‘ (RRR), ‘ಪಠಾಣ್’ (Pathaan) ಸಿನಿಮಾಗಳನ್ನು ಹೆಸರಿಸುತ್ತಾರೆ. ಇದು ನಿಜವೂ ಹೌದು, ಆದರೆ ಈ ಎಲ್ಲ ಸಿನಿಮಾಗಳಿಗಿಂತಲೂ ಹೆಚ್ಚಿನ ‘ಲಾಭ’ ಗಳಿಸಿರುವುದು ಮಲಯಾಳಂ ಚಿತ್ರರಂಗದ ಒಂದು ಸಣ್ಣ ಬಜೆಟ್ನ ಸಿನಿಮಾ ಎಂದರೆ ನಂಬಲೇ ಬೇಕು. ಕೇವಲ ಮೂರು ಕೋಟಿ ಬಜೆಟ್ನಲ್ಲಿ ಮಾಡಲಾದ ಸಿನಿಮಾ ಒಂದು ಸೂಪರ್ ಡೂಪರ್ ಹಿಟ್ ಸಿನಿಮಾಗಳಿಗಿಂತಲೂ ಹೆಚ್ಚು ಲಾಭ ಮಾಡಿದೆ! ಹೇಗೆ? ವಿಶ್ಲೇಷಣೆ ಇಲ್ಲಿದೆ.
ಸಿನಿಮಾಗಳ ಒಟ್ಟು ಕಲೆಕ್ಷನ್ಗೂ ಲಾಭಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಸಿನಿಮಾಕ್ಕೆ ಹೂಡಲಾದ ಬಂಡವಾಳವನ್ನು ಗಣೆನೆಗೆ ತೆಗೆದುಕೊಂಡು ಲಾಭವನ್ನು ಪರಿಶೀಲಿಸಬೇಕಾಗುತ್ತದೆ. ಹೂಡಿದ್ದ ಬಂಡವಾಳಕ್ಕೆ ಎಷ್ಟು ಪಟ್ಟು ಹಣ ವಾಪಸ್ಸಾಯಿತು ಎಂಬುದು ವ್ಯವಹಾರದಲ್ಲಿ ಬಹಳ ಮುಖ್ಯ. 200 ಕೋಟಿ ಬಜೆಟ್ನ ಸಿನಿಮಾ ಒಂದು 400 ಕೋಟಿ ಕಲೆಕ್ಷನ್ ಮಾಡಿದರೆ 200 ಕೋಟಿ ಲಾಭ ಎಂದುಕೊಳ್ಳಬಹುದು. ಅದರಲ್ಲಿ ನಿರ್ಮಾಪಕ ಕಿಸೆ ಸೇರುವುದು 100 ಕೋಟಿಗೂ ಕಡಿಮೆ ಹಣ.
ಉದಾಹರಣೆಗೆ ಇತ್ತೀಚೆಗಿನ ಬ್ಲಾಕ್ ಬಸ್ಟರ್ ಆರ್ಆರ್ಆರ್ ಸಿನಿಮಾದ ಒಟ್ಟು ಬಂಡವಾಳ 550 ಕೋಟಿ ಆ ಸಿನಿಮಾ ಮಾಡಿರುವ ಲಾಭ ಸುಮಾರು 1300 ಕೋಟಿ. ಬಂಡವಾಳದ ಆಧಾರದಲ್ಲಿ 250% ಲಾಭವನ್ನು ಈ ಸಿನಿಮಾ ಮಾಡಿದೆ. ಇದೇ ಸೂತ್ರವನ್ನು ಕೆಜಿಎಫ್ 2 ಸಿನಿಮಾಕ್ಕೆ ಅಳವಡಿಸಿದರೆ. ಕೆಜಿಎಫ್ 2 ಸಿನಿಮಾದ ಬಜೆಟ್ 100 ಕೋಟಿ (ವಿಕಿಪೀಡಿಯಾ ಮಾಹಿತಿ) ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಆಸು-ಪಾಸು 1300 ಕೋಟಿ. ಕೆಜಿಎಫ್ 2 ಸಿನಿಮಾ ತಂದುಕೊಟ್ಟಿರುವ ಲಾಭ 1300%. ಅಂದರೆ ಆರ್ಆರ್ಆರ್ ನಿರ್ಮಾಪಕರು ಗಳಿಸಿದ ಲಾಭಕ್ಕಿಂತಲೂ ಸುಮಾರು ಐದು ಪಟ್ಟು ಹೆಚ್ಚು ಲಾಭವನ್ನು ‘ಕೆಜಿಎಫ್ 2’ ನಿರ್ಮಾಪಕರು ಮಾಡಿದ್ದಾರೆ.
ಆದರೆ ಇತ್ತೀಚೆಗೆ ಬಿಡುಗಡೆ ಆದ ತೀರ ಸಣ್ಣ ಬಜೆಟ್ನ ಸಿನಿಮಾ ಒಂದು ಕೆಜಿಎಫ್ 2, ಆರ್ಆರ್ಆರ್, ಪಠಾಣ್ ಸಿನಿಮಾಗಳಿಗಿಂತಲೂ ಹೆಚ್ಚು ಲಾಭ ಮಾಡಿದೆ. ‘ರೋಮಾಂಚಮ್’ ಹೆಸರಿನ ಈ ಮಲಯಾಳಂ ಸಿನಿಮಾಕ್ಕೆ ಹೂಡಿದ್ದ ಬಂಡವಾಳ ಕೇವಲ ಮೂರು ಕೋಟಿ ಆದರೆ ಸಿನಿಮಾ ಗಳಿಸಿರುವುದು ಬರೋಬ್ಬರಿ 54 ಕೋಟಿ. ಹಾಕಿದ್ದ ಬಂಡವಾಳಕ್ಕೆ 1800% ಗೂ ಹೆಚ್ಚಿನ ಲಾಭವನ್ನು ಈ ಸಿನಿಮಾ ಮಾಡಿದೆ. ಜನಪ್ರಿಯ ಮಲಯಾಳಂ ನಟ ಸುಬಿನ್, ಚೆಂಬನ್ ವಿನೋದ್ ಹೊರತಾಗಿ ಬಹುತೇಕ ಹೊಸಬರೇ ತುಂಬಿರುವ ಈ ಸಿನಿಮಾ ಕೇರಳದಲ್ಲಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ.
ಅಂದಹಾಗೆ ಭಾರತದಲ್ಲಿ ಇತ್ತೀಚೆಗಿನ ದಿನದಲ್ಲಿ ಅತಿ ಹೆಚ್ಚು ಪ್ರತಿಶತ ಲಾಭ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಕನ್ನಡ ಸಿನಿಮಾ ‘ಕಾಂತಾರ’ದ್ದು. 16 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ 450 ಕೋಟಿ ಕಲೆಕ್ಷನ್ ಮಾಡಿದೆ. ಹಾಕಿದ ಬಂಡವಾಳಕ್ಕೆ ಶೇ 3000 ಪಟ್ಟು ಲಾಭವನ್ನು ಈ ಸಿನಿಮಾ ಮಾಡಿಕೊಟ್ಟಿದೆ.