AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗದ ಕಷ್ಟಕ್ಕೆ ಸ್ಪಂದಿಸಿದ ದಳಪತಿ ವಿಜಯ್; ದೊಡ್ಡ ನಿರ್ಧಾರ ತೆಗೆದುಕೊಂಡ ಸಿಎಂ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಚಿತ್ರರಂಗಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ಸಿನಿಮಾ ಹಿನ್ನೆಲೆಯುಳ್ಳ ವಿಜಯ್, ಚಿತ್ರಮಂದಿರಗಳ ಆರ್ಥಿಕ ಸಂಕಷ್ಟ ಅರಿತು ಹೊಸ ನಿಯಮ ಜಾರಿಗೆ ತಂದಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ಬಿಡುಗಡೆಯಾಗುವ ಯಾವುದೇ ಹೊಸ ತಮಿಳು ಸಿನಿಮಾಗಳಿಗೆ ಮೊದಲ 7 ದಿನಗಳವರೆಗೆ ಪ್ರತಿದಿನ 5 ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಇದು ಚಿತ್ರೋದ್ಯಮದ ಆದಾಯ ಹೆಚ್ಚಿಸಲು ಮತ್ತು ಪ್ರೇಕ್ಷಕರಿಗೆ ಅನುಕೂಲ ಕಲ್ಪಿಸಲಿದೆ.

ಚಿತ್ರರಂಗದ ಕಷ್ಟಕ್ಕೆ ಸ್ಪಂದಿಸಿದ ದಳಪತಿ ವಿಜಯ್; ದೊಡ್ಡ ನಿರ್ಧಾರ ತೆಗೆದುಕೊಂಡ ಸಿಎಂ
ವಿಜಯ್ Image Credit source: news lankasri
ರಾಜೇಶ್ ದುಗ್ಗುಮನೆ
|

Updated on:May 26, 2026 | 11:57 AM

Share

ಸಿನಿಮಾ ಹಿನ್ನೆಲೆಯಿಂದ ಬಂದು ಮುಖ್ಯಮಂತ್ರಿಯಾದವರು ಚಿತ್ರರಂಗದ ಕಷ್ಟ-ನಷ್ಟಗಳನ್ನು ಬೇಗ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಅನೇಕರ ನಂಬಿಕೆ. ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ನಿರ್ಧಾರ ಈ ನಂಬಿಕೆಯನ್ನು ನಿಜ ಮಾಡಿದೆ. ಚಿತ್ರರಂಗ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಅರಿತಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಮಾಜಿ ನಟ ವಿಜಯ್ ಅವರು, ಚಿತ್ರಮಂದಿರಗಳ ಮಾಲೀಕರು ಮತ್ತು ಪ್ರೇಕ್ಷಕರಿಗೆ ಭರ್ಜರಿ ಕೊಡುಗೆಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಬಿಡುಗಡೆಯಾಗುವ ಯಾವುದೇ ಹೊಸ ತಮಿಳು ಸಿನಿಮಾಗಳಿಗೆ ಮೊದಲ 7 ದಿನಗಳವರೆಗೆ ದಿನಕ್ಕೆ 5 ಶೋಗಳನ್ನು ನಡೆಸಲು ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ತಮಿಳುನಾಡು ಸರ್ಕಾರ ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಮೇ 16ರಂದು ತಮಿಳು ಚಿತ್ರರಂಗದ ವಿವಿಧ ಒಕ್ಕೂಟಗಳ ಪದಾಧಿಕಾರಿಗಳು ಮತ್ತು ಚಿತ್ರಮಂದಿರಗಳ ಮಾಲೀಕರ ಸಂಘದ ಪ್ರತಿನಿಧಿಗಳು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದರು. ಚಿತ್ರಮಂದಿರಗಳ ಆದಾಯ ಹೆಚ್ಚಿಸಲು ಮತ್ತು ಚಿತ್ರರಂಗವನ್ನು ನಷ್ಟದಿಂದ ರಕ್ಷಿಸಲು ದಿನಕ್ಕೆ 5 ಪ್ರದರ್ಶನಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ವಿಜಯ್ ಕೂಡ ಸಿನಿಮಾ ಹಿನ್ನೆಲೆಯವರೇ ಆಗಿರುವುದರಿಂದ, ಸಿನಿಮಾ ನಿರ್ಮಾಪಕರು ಹಾಗೂ ಥಿಯೇಟರ್ ಮಾಲೀಕರ ಪ್ರಾಯೋಗಿಕ ಕಷ್ಟಗಳನ್ನು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ, ಸಿಎಂ ವಿಜಯ್, ಈ ಬೇಡಿಕೆ ನ್ಯಾಯಯುತವಾಗಿದೆ ಎಂದು ಪರಿಗಣಿಸಿ ತಕ್ಷಣವೇ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಹಳೆಯ ನಿಯಮ ಏನಾಗಿತ್ತು?

1957ರ ತಮಿಳುನಾಡು ಸಿನಿಮಾಸ್ (ರೆಗ್ಯುಲೇಶನ್) ನಿಯಮಾವಳಿಗಳ ಪ್ರಕಾರ, ರಾಜ್ಯದ ಚಿತ್ರಮಂದಿರಗಳಲ್ಲಿ ದಿನಕ್ಕೆ ಕೇವಲ 4 ಪ್ರದರ್ಶನಗಳನ್ನು ನೀಡಲು ಮಾತ್ರ ಅವಕಾಶವಿತ್ತು. ಹಬ್ಬದ ದಿನಗಳಲ್ಲಿ ಅಥವಾ ಸಾರ್ವಜನಿಕ ರಜಾದಿನಗಳಲ್ಲಿ 5ನೇ ವಿಶೇಷ ಪ್ರದರ್ಶನವನ್ನು ಪ್ರದರ್ಶಿಸಲು ಅವಕಾಶವಿತ್ತಾದರೂ, ಅದಕ್ಕಾಗಿ ಚಿತ್ರಮಂದಿರಗಳ ಮಾಲೀಕರು ಅಥವಾ ಚಿತ್ರದ ನಿರ್ಮಾಪಕರು ಆಯಾ ಜಿಲ್ಲಾಧಿಕಾರಿಗಳಿಂದ ಅಥವಾ ಚೆನ್ನೈನಲ್ಲಿ ಸಿಟಿ ಪೊಲೀಸ್ ಕಮಿಷನರ್ ಅವರಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಾಗಿತ್ತು. ಸರ್ಕಾರ ಕೂಡ ಪ್ರತಿ ಬಾರಿಯೂ ವಿಶೇಷ ಆದೇಶವನ್ನು ಹೊರಡಿಸಬೇಕಾಗಿತ್ತು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತಲ್ಲದೆ, ಸಿನಿಮಾಗಳ ಮುಂಗಡ ಬುಕಿಂಗ್ ಪ್ರಕ್ರಿಯೆಗೂ ತಡವಾಗುವಂತೆ ಮಾಡುತ್ತಿತ್ತು.

ಇದನ್ನೂ ಓದಿ: ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂ ವಿಜಯ್‌ಗೆ ವಿಜಯ್ ಸೇತುಪತಿ ಮನವಿ

ಮುಖ್ಯಮಂತ್ರಿ ವಿಜಯ್ ಅವರ ಹೊಸ ಆದೇಶದ ಪ್ರಕಾರ, ಇನ್ಮುಂದೆ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ವಾರ (7 ದಿನಗಳು) ಐದು ಪ್ರದರ್ಶನಗಳನ್ನು ಯಾವುದೇ ಅನುಮಪತಿ ಪಡೆಯದೆ ನಡೆಸಬಹುದು. ಬೇರೆ ಭಾಷೆಯಿಂದ ಡಬ್ ಆದ ಚಿತ್ರಗಳು, ಮರು-ಬಿಡುಗಡೆಯಾಗುವ ಸಿನಿಮಾಗಳಿಗೂ ಈ ವಿನಾಯಿತಿ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:44 am, Tue, 26 May 26

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More