‘ಇಂಡಿಯನ್ 2’ ಚಿತ್ರಕ್ಕೆ ಹಣ ಹಾಕಿ ಹಿಂತೆಗೆದಿದ್ದ ಖ್ಯಾತ ನಿರ್ಮಾಪಕ; ಹೊರ ಬಂದಿದ್ದೇಕೆ?
ಶಂಕರ್ ನಿರ್ದೇಶನದ ಸಿನಿಮಾಗಳು ಯಶಸ್ಸು ಕಾಣುತ್ತವೆ. ಆದರೆ, ‘ಇಂಡಿಯನ್ 2’ ಸಿನಿಮಾ ಕೆಟ್ಟ ವಿಮರ್ಶೆ ಪಡೆದಿದೆ. ಈ ಚಿತ್ರದಿಂದ ಲೈಕಾ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ಸೋಲು ಕಂಡಿದೆ. ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡಬೇಕಿತ್ತು. ಅವರು ಆ ಬಳಿಕ ಸಿನಿಮಾದಿಂದ ಹಿಂದೆ ಸರಿದರು.
ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾ ಬಗ್ಗೆ ಕೆಟ್ಟ ವಿಮರ್ಶೆ ಕೇಳಿ ಬಂದಿದೆ. ಈ ಕಾರಣದಿಂದಲೇ ಸಿನಿಮಾ ಮೂರು ದಿನಗಳಲ್ಲಿ ಕೇವಲ 58 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶನಿವಾರಕ್ಕಿಂತ ಭಾನುವಾರದ ಕಲೆಕ್ಷನ್ ಕುಗ್ಗಿದೆ. ಹಳೆಯ ಕಥೆ, ನಿರೂಪಣೆ ಹೇಳಿದ್ದು ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ. ಈ ಸಿನಿಮಾನ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿ ಕೈ ಸುಟ್ಟುಕೊಂಡಿದೆ. ಅಂದಹಾಗೆ ಈ ಚಿತ್ರವನ್ನು ಮೊದಲು ಆಫರ್ ಮಾಡಿದ್ದು ದಿಲ್ ರಾಜು ಅವರಿಗಾಗಿತ್ತು. ಅವರು ಸೋಲಿನಿಂದ ಬಚಾವ್ ಆಗಿದ್ದಾರೆ.
ದಿಲ್ ರಾಜು ಅವರು ಟಾಲಿವುಡ್ನ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ನಷ್ಟ ಅನುಭವಿಸುವುದನ್ನು ತಪ್ಪಿಸಿಕೊಳ್ಳಲು ನೋಡುತ್ತಾರೆ. ಅವರಿಗೆ ಮೊದಲು ‘ಇಂಡಿಯನ್ 2’ ಸಿನಿಮಾ ಆಫರ್ ಹೋಗಿತ್ತು. ಅವರು ಒಪ್ಪಂದಕ್ಕೆ ಸಹಿ ಕೂಡ ಹಾಕಿದ್ದರು. ಶಂಕರ್ ಅವರು ತೋರಿದ ವಿಳಂಬ ಹಾಗೂ ದೊಡ್ಡ ಬಜೆಟ್ನಿಂದ ದಿಲ್ ರಾಜು ಅವರು ಸಿನಿಮಾದಿಂದ ಹಿಂದೆ ಸರಿದರು.
ಆ ಬಳಿಕ ದಿಲ್ ರಾಜು ಅವರಿಗೆ ಶಂಕರ್ ಮತ್ತೊಂದು ಸಿನಿಮಾದ ಕಥೆ ಹೇಳಿದರು. ಇದು ದಿಲ್ ರಾಜುಗೆ ಇಷ್ಟ ಆಗಿ ಒಪ್ಪಿಕೊಂಡರು. ಅದುವೇ ‘ಗೇಮ್ ಚೇಂಜರ್’. ರಾಮ್ ಚರಣ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ದಿಲ್ ರಾಜು ವೃತ್ತಿ ಜೀವನದಲ್ಲಿ ನಿಜಕ್ಕೂ ಗೇಮ್ ಚೇಂಜರ್ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ದಿಲ್ ರಾಜು ಅವರು ಸಿನಿಮಾದ ಉದ್ದ-ಅಗಲವನ್ನು ಅರಿತಿದ್ದಾರೆ. ಬಜೆಟ್ ವಿಚಾರದಲ್ಲಿ ಅವರು ತುಂಬಾನೇ ಅಚ್ಚುಕಟ್ಟು. ‘ಇಂಡಿಯನ್ 2’ ಸಿನಿಮಾದ ಬಜೆಟ್ ಮಿತಿ ಮೀರಿದ್ದರಿಂದಲೇ ಅವರು ಸಿನಿಮಾದಿಂದ ಹಿಂದೆ ಸರಿದರು ಎನ್ನಲಾಗಿದೆ. ಏನೇ ಆದರೂ ಅವರು ತೆಗೆದುಕೊಂಡಿದ್ದು ಉತ್ತಮ ನಿರ್ಧಾರವೇ ಆಗಿತ್ತು.
ಇದನ್ನೂ ಓದಿ: ‘ಇಂಡಿಯನ್ 2’ ಕಳಪೆ ಓಪನಿಂಗ್, 20 ನಿಮಿಷ ಕತ್ತರಿ ಹಾಕಿದ ನಿರ್ದೇಶಕ
‘ಗೇಮ್ ಚೇಂಜರ್’ ಸಿನಿಮಾದ ಬಗ್ಗೆ ರಾಮ್ ಚರಣ್ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಈ ವರ್ಷಾಂತ್ಯಕ್ಕೆ ಅಥವಾ ಜನವರಿಯಲ್ಲಿ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.