ಯಶ್ ಮುಂದಿನ ಸಿನಿಮಾ ನಿರ್ದೇಶಕರಿಗೆ ಸಲಹೆ ಕೊಟ್ಟ ‘ಟಾಕ್ಸಿಕ್’ ನಿರ್ದೇಶಕಿ

Toxic movie director: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್​ ಅನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಸಿನಿಮಾ ಸಹ ಇದೇ ಗುಣಮಟ್ಟದಲ್ಲಿ ನಿರ್ಮಾಣ ಆಗಿರುವುದು ಟೀಸರ್​​ನಿಂದ ಖಾತ್ರಿ ಆಗಿದೆ. ಆದರೆ ಟೀಸರ್​​ನ ಕೆಲವು ದೃಶ್ಯಗಳ ಬಗ್ಗೆ ಪರ-ವಿರೋಧ ಚರ್ಚೆ ಜಾರಿಯಲ್ಲಿದೆ. ಇದೆಲ್ಲದರ ನಡುವೆ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್, ಯಶ್ ಅವರ ಮುಂದಿನ ಸಿನಿಮಾ ನಿರ್ದೇಶನ ಮಾಡಲಿರುವ ನಿರ್ದೇಶಕರಿಗೆ ಸಲಹೆ ಕೊಟ್ಟಿದ್ದಾರೆ.

ಯಶ್ ಮುಂದಿನ ಸಿನಿಮಾ ನಿರ್ದೇಶಕರಿಗೆ ಸಲಹೆ ಕೊಟ್ಟ ‘ಟಾಕ್ಸಿಕ್’ ನಿರ್ದೇಶಕಿ
Yash Geetu

Updated on: Jan 09, 2026 | 3:45 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಿನ್ನೆ (ಜನವರಿ 08) ಬಿಡುಗಡೆ ಆಗಿದೆ. ಟೀಸರ್ ಕೇವಲ ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆ ಪಡೆದಿದೆ. ಟೀಸರ್​ ಅನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಸಿನಿಮಾ ಸಹ ಇದೇ ಗುಣಮಟ್ಟದಲ್ಲಿ ನಿರ್ಮಾಣ ಆಗಿರುವುದು ಟೀಸರ್​​ನಿಂದ ಖಾತ್ರಿ ಆಗಿದೆ. ಆದರೆ ಟೀಸರ್​​ನ ಕೆಲವು ದೃಶ್ಯಗಳ ಬಗ್ಗೆ ಪರ-ವಿರೋಧ ಚರ್ಚೆ ಜಾರಿಯಲ್ಲಿದೆ. ಇದೆಲ್ಲದರ ನಡುವೆ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್, ಯಶ್ ಅವರ ಮುಂದಿನ ಸಿನಿಮಾ ನಿರ್ದೇಶನ ಮಾಡಲಿರುವ ನಿರ್ದೇಶಕರಿಗೆ ಸಲಹೆ ಕೊಟ್ಟಿದ್ದಾರೆ.

ನಿನ್ನೆ ಯಶ್ ಅವರ ಹುಟ್ಟುಹಬ್ಬವೂ ಆಗಿದ್ದು, ತಮ್ಮ ಸಿನಿಮಾದ ನಾಯಕನಿಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕಿ ಗೀತು ಮೋಹನ್​​ದಾಸ್, ‘ಪ್ರತಿಭೆ ಮತ್ತು ಸೂಪರ್‌ಸ್ಟಾರ್‌ಡಮ್‌ನ ಅಪರೂಪದ ಸಮ್ಮಿಲನವಾಗಿದ್ದಾರೆ ಯಶ್. ಅವರ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ, ಜಗತ್ತು ಇನ್ನೂ ನೋಡದ ‘ರಾಯ’ ಪಾತ್ರದಲ್ಲಿನ ಅವರ ಅಭಿನಯಕ್ಕಾಗಿ ಮಾತ್ರವೇ ಅಲ್ಲ, ಅವರು ನಮ್ಮ ಸಿನಿಮಾಕ್ಕೆ ಪ್ರತಿದಿನ ತಂದ ಶಿಸ್ತಿಗಾಗಿ. ‘ರಾಯ’ ಕೇವಲ ಅವರು ನಿರ್ವಹಿಸಿದ ಪಾತ್ರ ಮಾತ್ರ ಅಲ್ಲ, ತಮ್ಮ ಅಭಿನಯ ಚತುರತೆಯಿಂದ ಅವರೇ ಕೆತ್ತಿದ ಪಾತ್ರ’ ಎಂದಿದ್ದಾರೆ ಗೀತು ಮೋಹನ್​​ದಾಸ್.

ಮುಂದುವರೆದು, ‘‘ಟಾಕ್ಸಿಕ್’ ಚಿತ್ರೀಕರಣದ ವೇಳೆ ಅವರು ನನ್ನನ್ನು ಪ್ರಶ್ನಿಸಿದರು, ಸವಾಲು ಹಾಕಿದರು, ನನ್ನ ನಿರ್ಣಯಗಳನ್ನು ಪರಿಶೀಲಿಸಿಕೊಳ್ಳುವಂತೆ ಮಾಡಿದರು, ನನ್ನ ಕತೆಯನ್ನೇ ನಾನು ಅನ್ವೇಶಣೆ ಮಾಡುವಂತೆ ಮಾಡಿದರು ಮತ್ತು ನಿರ್ದೇಶಕಿಯ ಯೋಚನೆಗೆ ತಮ್ಮನ್ನು ತಾವು ಶರಣಾಗಿಸಿಕೊಂಡರು. ಸದಾ ಕತೆ ಮತ್ತು ಕಲೆಯ ಸೇವೆಯಲ್ಲಿಯೇ ಇದ್ದರು. ನಮ್ಮ ಈ ಪರಿಚಯದಲ್ಲಿ ನಾನು ಸಾಕಷ್ಟು ಕಲಿತೆ ವಿಶೇಷವಾಗಿ ನಾನು ಕಥೆ ಹೇಳುವಿಕೆಯ ಆಳವನ್ನು ಅರಿತುಕೊಂಡೆ. ಜೊತೆಗೆ ನಿರ್ದೇಶಕಿಯೊಬ್ಬರ ಸಾಹಸಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವ ನಿರ್ಮಾಪಕನನ್ನು ಕಂಡುಕೊಂಡೆ’ ಎಂದಿದ್ದಾರೆ.

ಇದನ್ನೂ ಓದಿ:ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ

‘ಅವರ ಖ್ಯಾತಿಯ ಬೆನ್ನು ಹತ್ತಿ ಅವರಲ್ಲಿರುವ ಪ್ರತಿಭೆಯನ್ನು ಕಡೆಗಣಿಸುವ ಸಾಧ್ಯತೆ ಇದೆ. ಹಾಗಾಗಿ ನಾನು ಯಶ್ ಅವರ ಮುಂದಿನ ಸಿನಿಮಾಗಳನ್ನು ನಿರ್ದೇಶಿಸಲಿರುವ ನಿರ್ದೇಶಕರುಗಳಿಗೆ ಕೆಲವು ಸಲಹೆ ನೀಡುವೆ, ಅವರು ಯಶ್ ಅವರ ಅದ್ಭುತ ನಟನಾ ಪ್ರತಿಭೆಯನ್ನು ಸಂಪೂರ್ಣವಾಗಿ ಹೊರಗೆತ್ತುವ ಕಾರ್ಯವನ್ನು ಮಾಡಬೇಕು’ ಎಂದಿದ್ದಾರೆ ಗೀತು ಮೋಹನ್​​ದಾಸ್.

‘ನಮ್ಮ ಈ ಜಂಟಿ ಪ್ರಯಾಣವು ನಂಬಿಕೆ, ಸುದೀರ್ಘ ಸಂಭಾಷಣೆಗಳು ಮತ್ತು ನಮ್ಮಿಬ್ಬರಿಗಿಂತ ದೊಡ್ಡದಾದ ಕಲೆಯ ಪಸರಿಕೆಗಾಗಿ ಆಗಿದೆ ಎಂದು ನಾನು ನಂಬಿದ್ದೇನೆ. ನಮ್ಮಿಬ್ಬರ ಸ್ನೇಹದಲ್ಲಿ ನಾನು ಅತಿ ಹೆಚ್ಚು ಗೌರವ ನೀಡುವುದು ಯಶ್ ನನ್ನ ಮೇಲಿಟ್ಟ ನಂಬಿಕೆ ಮತ್ತು ಅವರ ಕಲಾತ್ಮಕತೆ. ಈ ಸಿನಿಮಾ ಮುಗಿದ ಬಳಿಕವೂ ಹಲವು ಕಾಲ ಯಶ್ ನನ್ನೊಂದಿಗೆ ಇರಲಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಯಶ್’ ಎಂದಿದ್ದಾರೆ ನಿರ್ದೇಶಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ