ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಅಬ್ಬರ: 300 ಕೋಟಿ ಕ್ಲಬ್‌ನತ್ತ ‘ಕರುಪ್ಪು’ ಸಿನಿಮಾ ಕಲೆಕ್ಷನ್

ದಶಕದ ಬಳಿಕ ನಟ ಸೂರ್ಯ ಅವರು ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಅವರು ನಟಿಸಿರುವ ‘ಕರುಪ್ಪು’ ಸಿನಿಮಾ ಸೂಪರ್ ಹಿಟ್ ಆಗಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಉತ್ತಮ ಗಳಿಕೆ ಮಾಡಿದೆ. ನಟಿ ತ್ರಿಶಾ ಕೃಷ್ಣನ್ ಅವರು ಈ ಚಿತ್ರದಲ್ಲಿ ಸೂರ್ಯ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಅಬ್ಬರ: 300 ಕೋಟಿ ಕ್ಲಬ್‌ನತ್ತ ‘ಕರುಪ್ಪು’ ಸಿನಿಮಾ ಕಲೆಕ್ಷನ್
Suriya, Trisha Krishnan

Updated on: May 25, 2026 | 5:25 PM

ಕಾಲಿವುಡ್ ನಟ ಸೂರ್ಯ (Suriya) ಅಭಿನಯದ ಆ್ಯಕ್ಷನ್ ಡ್ರಾಮಾ ಸಿನಿಮಾ ‘ಕರುಪ್ಪು’ (Karuppu) ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಎರಡನೇ ವಾರಾಂತ್ಯದಲ್ಲೂ ಚಿತ್ರದ ಕಲೆಕ್ಷನ್ ಭರ್ಜರಿಯಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಗಳನ್ನು ಬರೆಯುವತ್ತ ಮುನ್ನುಗ್ಗುತ್ತಿದೆ. ಚಿತ್ರದ ಮೊದಲ ದಿನದ ಗಳಿಕೆಗಿಂತಲೂ ಕಳೆದ ಭಾನುವಾರದ ಕಲೆಕ್ಷನ್ ಹೆಚ್ಚಾಗಿರುವುದು ಚಿತ್ರದ ಭರ್ಜರಿ ಯಶಸ್ಸಿಗೆ ಸಾಕ್ಷಿಯಾಗಿದೆ.

ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಕರುಪ್ಪು’ ಸಿನಿಮಾ ಈಗ 300 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲು ತಲುಪಲು ಸಜ್ಜಾಗಿದೆ. ಈ ವಾರದಲ್ಲೇ ಬಕ್ರೀದ್ ಹಬ್ಬದ ರಜೆ ಇರುವುದರಿಂದ ಚಿತ್ರದ ಬಿಸಿನೆಸ್‌ಗೆ ಮತ್ತಷ್ಟು ಬೂಸ್ಟ್ ಸಿಗಲಿದೆ. ಕಳೆದ ಸುಮಾರು ಒಂದು ದಶಕದಿಂದ ಸರಿಯಾದ ಹಿಟ್ ಸಿನಿಮಾ ಇಲ್ಲದೆ ಟ್ರೋಲ್‌ಗಳಿಗೆ ಒಳಗಾಗಿದ್ದ ನಟ ಸೂರ್ಯ, ಈಗ ದಾಖಲೆಗಳ ಮೇಲೆ ದಾಖಲೆ ಬರೆಯುವ ಮೂಲಕ ಚಿತ್ರರಂಗದ ಇತಿಹಾಸದಲ್ಲೇ ನೆನಪಿಡುವಂತಹ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

ಖ್ಯಾತ ನಟ ಮತ್ತು ನಿರ್ದೇಶಕ ಆರ್‌.ಜೆ. ಬಾಲಾಜಿ ಆ್ಯಕ್ಷನ್ ಕಟ್‌ ಹೇಳಿರುವ ಈ ಚಿತ್ರವನ್ನು ಪ್ರತಿಷ್ಠಿತ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ನಟಿಸಿದ್ದು, ಪ್ರಮುಖ ಪಾತ್ರಗಳಲ್ಲಿ ಆರ್‌.ಜೆ. ಬಾಲಾಜಿ, ಇಂದ್ರನ್ಸ್, ನಟ್ಟಿ ಸುಬ್ರಮಣಿಯನ್, ಸ್ವಾಸಿಕಾ ಹಾಗೂ ಅನಘಾ ಮಾಯಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಸಾಯಿ ಅಭ್ಯಂಕರ್ ಅವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿರುವ ‘ಕರುಪ್ಪು’ ಚಿತ್ರದ ಹಾದಿ ಆರಂಭದಲ್ಲಿ ಅಷ್ಟು ಸುಲಭವಾಗಿರಲಿಲ್ಲ. ಚಿತ್ರದ ನಿರ್ಮಾಣ ಸಂಸ್ಥೆಯಾದ ಡ್ರೀಮ್ ವಾರಿಯರ್ ಪಿಕ್ಚರ್ಸ್ ಚಿತ್ರೀಕರಣದ ಸಮಯದಿಂದಲೇ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಈ ಹಣಕಾಸಿನ ಸಮಸ್ಯೆಯಿಂದಾಗಿ ವಿತರಕರಿಗೆ ನೀಡಬೇಕಿದ್ದ ಬಾಕಿಯನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗದ ಕಾರಣ, ಮೇ 14ರಂದು ನಿಗದಿಯಾಗಿದ್ದ ಪ್ರೀಮಿಯರ್ ಹಾಗೂ ಮುಂಜಾನೆಯ ಶೋಗಳು ಕೊನೆ ಕ್ಷಣದಲ್ಲಿ ರದ್ದಾಗಿ ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮೂಡಿಸಿತ್ತು.

ಇದನ್ನೂ ಓದಿ: ವಿಜಯ್ ಸಿಎಂ ಆದ ಬಳಿಕ ಗೆದ್ದ ತ್ರಿಷಾ; ‘ಕರುಪ್ಪು’ ಚಿತ್ರ ಹೊಗಳಿದ ಫ್ಯಾನ್ಸ್

ಅಷ್ಟೇ ಅಲ್ಲದೆ, ಚಿತ್ರದ ಒಂದು ಪ್ರಮುಖ ದೃಶ್ಯದಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಅವರ ಹೆಸರನ್ನು ಬಳಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಯಾಗಿ, ನಂತರ ಚಿತ್ರತಂಡ ಬಹಿರಂಗವಾಗಿ ಕ್ಷಮೆಯಾಚಿಸಬೇಕಾಗಿ ಬಂದಿತ್ತು. ಇಷ್ಟೆಲ್ಲಾ ಆರಂಭಿಕ ಹಿನ್ನಡೆ ಹಾಗೂ ವಿವಾದಗಳ ನಡುವೆಯೂ ಧೃತಿಗೆಡದ ಚಿತ್ರತಂಡ, ಮೇ 15ರಂದು ಚಿತ್ರವನ್ನು ಯಶಸ್ವಿಯಾಗಿ ತೆರೆಗೆ ತಂದಿತು. ಈಗ ಆ ಎಲ್ಲಾ ಕಷ್ಟಗಳನ್ನು ಮರೆಸುವಂತೆ ಸಿನಿಮಾ ವಿಶ್ವಾದ್ಯಂತ ದಾಖಲೆಯ ಕಲೆಕ್ಷನ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us