ಇಳಯರಾಜಾ ಬಗ್ಗೆ ವ್ಯಂಗ್ಯ: ಕ್ಷಮೆಯಾಚಿಸಿದ ‘ಕರುಪ್ಪು’ ಚಿತ್ರತಂಡ
Karuppu movie: ‘ಕರುಪ್ಪು’ ಸಿನಿಮಾ ಆಕ್ಷನ್ ಜೊತೆಗೆ ಕಾಮಿಡಿಯನ್ನೂ ಒಳಗೊಂಡಿದ್ದು, ಸಿನಿಮಾದ ನಿರ್ದೇಶಕ ಬಾಲಾಜಿ, ಸೂರ್ಯ ಅವರ ಕೆಲವು ಹಳೆಯ ಸಿನಿಮಾದ ಸೀನ್ಗಳನ್ನು ತಮಾಷೆಯ ರೀತಿಯಲ್ಲಿ ರೀಕ್ರಿಯೇಟ್ ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾ ಟ್ರೆಂಡ್ಗಳನ್ನು ಆಧರಿಸಿ ಕೆಲ ಹಾಸ್ಯ ಸಂಭಾಷಣೆಗಳನ್ನು ಸಹ ಬಳಸಿಕೊಂಡಿದ್ದಾರೆ. ಆದರೆ ಈಗ ಅದೇ ‘ಕರುಪ್ಪು’ ತಂಡಕ್ಕೆ ಬಿಸಿ ತುಪ್ಪವಾಗಿದೆ.

ತಮಿಳು ಸ್ಟಾರ್ ನಟ ಸೂರ್ಯ (Suriya) ನಟಿಸಿ, ಬಾಲಾಜಿ ನಿರ್ದೇಶನ ಮಾಡಿರುವ ‘ಕರುಪ್ಪು’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ಈಗಾಗಲೇ 100 ಕೋಟಿ ಗಳಿಕೆಯ ಗಡಿ ದಾಟಿದೆ. ಸಿನಿಮಾ ಆಕ್ಷನ್ ಜೊತೆಗೆ ಕಾಮಿಡಿಯನ್ನೂ ಒಳಗೊಂಡಿದ್ದು, ಸಿನಿಮಾದ ನಿರ್ದೇಶಕ ಬಾಲಾಜಿ, ಸೂರ್ಯ ಅವರ ಕೆಲವು ಹಳೆಯ ಸಿನಿಮಾದ ಸೀನ್ಗಳನ್ನು ತಮಾಷೆಯ ರೀತಿಯಲ್ಲಿ ರೀಕ್ರಿಯೇಟ್ ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾ ಟ್ರೆಂಡ್ಗಳನ್ನು ಆಧರಿಸಿ ಕೆಲ ಹಾಸ್ಯ ಸಂಭಾಷಣೆಗಳನ್ನು ಸಹ ಬಳಸಿಕೊಂಡಿದ್ದಾರೆ. ಆದರೆ ಈಗ ಅದೇ ‘ಕರುಪ್ಪು’ ತಂಡಕ್ಕೆ ಬಿಸಿ ತುಪ್ಪವಾಗಿದೆ.
ಸಂಗೀತ ಮಾಂತ್ರಿಕ ಇಳಯರಾಜಾ ಅವರು ಹಲವು ಸಿನಿಮಾಗಳ ವಿರುದ್ಧ ಕೃತಿಸ್ವಾಮ್ಯ ಪ್ರಕರಣ ದಾಖಲಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಚರ್ಚೆ ಆಗಿತ್ತು. ಇದನ್ನೇ ಇರಿಸಿಕೊಂಡು ‘ಕರುಪ್ಪು’ ಸಿನಿಮಾನಲ್ಲಿ ವ್ಯಂಗ್ಯದ ಸಂಭಾಷಣೆ ಒಂದನ್ನು ಇರಿಸಲಾಗಿದ್ದು, ಇಳಯರಾಜ ಅಭಿಮಾನಿಗಳು ಈ ವ್ಯಂಗ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಆಕ್ರೋಶ ಹೊರಹಾಕಿದ್ದರು. ಅಭಿಮಾನಿಗಳ ಆಗ್ರಹಕ್ಕೆ ಮಣಿದಿರುವ ‘ಕರುಪ್ಪು’ ಚಿತ್ರತಂಡವು ಅಧಿಕೃತವಾಗಿ ಕ್ಷಮೆಯಾಚಿಸಿದೆ.
ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಿತ್ರತಂಡ ಸಾಮಾಜಿಕ ಮಾಧ್ಯಮಗಳ ಮೂಲಕ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡು, ‘ನಮ್ಮ ಸಿನಿಮಾದ ಸಂಭಾಷಣೆಯು ಹಿರಿಯ ಸಂಗೀತ ನಿರ್ದೇಶಕರನ್ನು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ, ಆದರೂ ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾವು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇವೆ’ ಎಂದು ಪ್ರಕಟಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಳಯರಾಜಾ ಅವರು ತಮ್ಮ ಹಳೆಯ ಹಾಡುಗಳನ್ನು ಅನುಮತಿಯಿಲ್ಲದೆ ಕನ್ಸರ್ಟ್‌ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಬಳಸಿಕೊಳ್ಳುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದನ್ನೇ ಉಲ್ಲೇಖಿಸಿ ‘ಕರುಪ್ಪು’ ಚಿತ್ರದ ದೃಶ್ಯವೊಂದರಲ್ಲಿ ಪಾತ್ರಧಾರಿಗಳು ವ್ಯಂಗ್ಯವಾಗಿ ಸಂಭಾಷಣೆ ನಡೆಸಿದ್ದರು. “ನಾವು ಇಳಯರಾಜಾ ಅವರ ಹಾಡನ್ನು ಸಾರ್ವಜನಿಕವಾಗಿ ಬಳಸಿದರೆ ಅದಕ್ಕೆ ರಾಯಲ್ಟಿ ಅಥವಾ ದಂಡ ಕಟ್ಟಬೇಕಾಗುತ್ತದೆ” ಎಂಬ ಧಾಟಿಯಲ್ಲಿ ಆ ದೃಶ್ಯ ಮೂಡಿಬಂದಿತ್ತು. ಇದು ಇಳಯರಾಜಾ ಅವರ ಕಾನೂನಾತ್ಮಕ ಹಕ್ಕುಗಳ ಹೋರಾಟವನ್ನು ಅಣಕಿಸಿದಂತೆ ಇದೆ ಎಂದು ಅವರ ಬೆಂಬಲಿಗರು ಚಿತ್ರತಂಡದ ವಿರುದ್ಧ ತಿರುಗಿಬಿದ್ದಿದ್ದರು.
ಇದನ್ನೂ ಓದಿ: ‘ಪೆದ್ದಿ’ಯ ಪ್ರೀ ರಿಲೀಸ್ ಇವೆಂಟ್ ಸಿನಿಮಾದಷ್ಟೆ ಅದ್ಧೂರಿ, 150 ಕೋಟಿ ಮೌಲ್ಯದ ಸೆಟಪ್
ತಮ್ಮ ಕ್ಷಮಾಪಣಾ ಪತ್ರದಲ್ಲಿ ‘ಕರುಪ್ಪು’ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಇಳಯರಾಜಾ ಅವರ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. ‘ಇಳಯರಾಜಾ ಅವರು ಭಾರತೀಯ ಚಿತ್ರರಂಗದ ದಂತಕಥೆ. ಅವರ ಸಂಗೀತವನ್ನು ಕೇಳುತ್ತಲೇ ನಾವು ಬೆಳೆದಿದ್ದೇವೆ. ಸಿನಿಮಾದಲ್ಲಿ ಆ ದೃಶ್ಯವನ್ನು ಕೇವಲ ಇಂದಿನ ಪ್ರಚಲಿತ ವಿದ್ಯಮಾನದ ಹಾಸ್ಯಕ್ಕಾಗಿ ಬಳಸಲಾಗಿತ್ತೇ ವಿನಃ, ಅವರ ಸಾಧನೆ ಅಥವಾ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯಾವುದೇ ಉದ್ದೇಶ ನಮಗಿರಲಿಲ್ಲ. ಅವರ ಮೇಲಿನ ಗೌರವ ನಮಗೆ ಎಂದಿಗೂ ಕಡಿಮೆ ಆಗುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲದೆ ಸಿನಿಮಾದಿಂದ ಆ ದೃಶ್ಯವನ್ನು ತೆಗೆಯುವುದಾಗಿಯೂ ಹೇಳಿದ್ದಾರೆ.
‘ಕರುಪ್ಪು’ ಸಿನಿಮಾನಲ್ಲಿ ಸೂರ್ಯ ಮತ್ತು ತ್ರಿಷಾ ನಟಿಸಿದ್ದು, ಸಿನಿಮಾದ ನಿರ್ದೇಶಕ ಬಾಲಾಜಿ ಸಹ ಪ್ರಮುಖವಾದ ಪಾತ್ರವೊಂದರಲ್ಲಿ ನಟಸಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯಗೆ ‘ಕರುಪ್ಪು’ ಸಿನಿಮಾ ಮರಳಿ ಜೀವದಾನ ನೀಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





