ತಮಿಳುನಾಡು ಸಿಎಂ ಪುತ್ರ ಉದಯ್ನಿಧಿ ಸ್ಟಾಲಿನ್ (Udhayanidhi Stalin) ರಾಜಕಾರಣಿಯಾಗಿರುವ ಜೊತೆಗೆ ಸಿನಿಮಾ ನಟರೂ ಆಗಿದ್ದಾರೆ. ಉದಯ್ ನಿಧಿ ಸ್ಟಾಲಿನ್ ನಟನೆಯ ಮಾಮನ್ನನ್ (Maamannan) ಸಿನಿಮಾ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾ ತಮಿಳುನಾಡು ಸೇರಿದಂತೆ ಇತರೆ ಕೆಲವು ರಾಜ್ಯಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ವಿಮರ್ಶಕರಿಂದಲೂ ಮೆಚ್ಚಿಗೆಗೆ ಪಾತ್ರವಾಗಿದೆ. ಉದಯ್ನಿಧಿ ಸ್ಟಾಲಿನ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಉದಯ್ ನಿಧಿ ಸ್ಟಾಲಿನ್ ಮಾಮನ್ನನ್ ಸಿನಿಮಾದ ನಿರ್ದೇಶಕರಿಗೆ ದುಬಾರಿ ಕಾರೊಂದನ್ನು (luxury Car) ಉಡುಗೊರೆಯಾಗಿ ನೀಡಿದ್ದಾರೆ.
ಮಾಮನ್ನನ್ ಸಿನಿಮಾ ನಿರ್ದೇಶನ ಮಾಡಿರುವ ಮಾರಿ ಸೆಲ್ವರಾಜ್ಗೆ ಮಿನಿ ಕೂಪರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಉದಯ್ನಿಧಿ ಸ್ಟಾಲಿನ್. ಗಾತ್ರ, ಎತ್ತರ, ಲುಕ್ನಲ್ಲಿ ನೋಡಲು ತುಸು ಮಾರುತಿ ಸ್ವಿಫ್ಟ್ನಂತೆ ಕಾಣುವ ಈ ಕಾರಿನ ಬೆಲೆ ಬರೋಬ್ಬರಿ 40 ಲಕ್ಷ. ನಾಲ್ಕು ಸೀಟ್ನ ಈ ಕ್ಯೂಟ್ ಕಾರು ಹ್ಯಾಚ್ಬ್ಯಾಕ್ ಸೆಗ್ಮೆಂಟ್ ಕಾರುಗಳಲ್ಲಿ ಅತ್ಯಂತ ದುಬಾರಿ ಕಾರಿನಲ್ಲೊಂದು. ಇಂದು (ಜುಲೈ 02) ಮಾರಿ ಸೆಲ್ವರಾಜ್ ವಾಸವಿರುವ ಅಪಾರ್ಟ್ಮೆಂಟ್ಗೆ ಖುದ್ದಾಗಿ ತೆರಳಿ ಉದಯ್ನಿಧಿ ಸ್ಟಾಲಿನ್ ಮಿನಿ ಕೂಪರ್ ಕಾರನ್ನು ಹಸ್ತಾಂತರಿಸಿದ್ದಾರೆ.
ಕಾರು ಹಸ್ತಾಂತರಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಉದಯ್ ನಿಧಿ ಸ್ಟಾಲಿನ್, ”ಪ್ರತಿಯೊಬ್ಬರೂ ಸಿನಿಮಾ ಬಗ್ಗೆ ಭಿನ್ನವಾಗಿ ಚರ್ಚಿಸುತ್ತಿದ್ದಾರೆ. ತಮ್ಮ ಅನುಭವಗಳನ್ನು ನಮ್ಮ ಸಿನಿಮಾದೊಂದಿಗೆ ಹೋಲಿಸಿ ಹಂಚಿಕೊಳ್ಳುತ್ತಿದ್ದಾರೆ. ಇದು ಪ್ರಪಂಚದಾದ್ಯಂತದ ತಮಿಳರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಅಂಬೇಡ್ಕರ್, ಪೆರಿಯಾರ್, ಅಣ್ಣಾ, ಕಲೈನಾರ್ ಅವರಂತಹ ನಮ್ಮ ನಾಯಕರು ಯುವ ಪೀಳಿಗೆಯಲ್ಲಿ ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಮೂಡಿಸಿದ್ದಾರೆ. ಈ ಸಿನಿಮಾ ದೊಡ್ಡ ಬಾಕ್ಸ್ ಆಫೀಸ್ ಗೆಲುವನ್ನೂ ಕಂಡಿದೆ. ನಮ್ಮ ರೆಡ್ ಜಾಯಿಂಟ್ ಮೂವೀಸ್ ಸಂಸ್ಥೆಯ ವತಿಯಿಂದ ನಿರ್ದೇಶಕ ಮಾರಿ ಸೆಲ್ವರಾಜ್ ಸರ್ ಅವರಿಗೆ ಮಿನಿ ಕೂಪರ್ ಕಾರನ್ನು ಉಡುಗೊರೆಯಾಗಿ ನೀಡಲು ಸಂತೋಷವಾಗಿದೆ. ‘ಮಾಮಣ್ಣನಿಗೆ’ ವಿಶ್ವದಾದ್ಯಂತ ಹಾರಲು ರೆಕ್ಕೆಗಳನ್ನು ನೀಡಿದ ನನ್ನ ಮಾರಿ ಸೆಲ್ವರಾಜ್ ಸರ್ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Toyota Vellfire: ದುಬಾರಿ ಕಾರು ಖರೀದಿಸಿದ ಚಿರಂಜೀವಿ; 1111 ನಂಬರ್ ಪ್ಲೇಟ್ ಪಡೆಯಲು ನೀಡಿದ ಹಣ ಎಷ್ಟು?
ಉದಯ್ನಿಧಿ ಸ್ಟಾಲಿನ್ ನಟಿಸಿರುವ ಮಾಮನ್ನನ್ ಸಿನಿಮಾವನ್ನು ಮಾರಿ ಸೆಲ್ವರಾಜ್ ನಿರ್ದೇಶನ ಮಾಡಿದ್ದಾರೆ. ಜಾತಿ ರಾಜಕೀಯದ ಕತೆಯನ್ನು ಮಾಮನ್ನನ್ಗಾಗಿ ಮಾರಿ ಸೆಲ್ವರಾಜ್ ಹೆಣೆದಿದ್ದಾರೆ. ಹಿಂದುಳಿಗ ವರ್ಗದ ಶಾಸಕ ಸಹ ಮೇಲ್ವರ್ಗದ ಧಣಿಗೆ ಕಟ್ಟುಬಿದ್ದು ನಡೆದುಕೊಳ್ಳುವ ಕೊನೆಗೆ ಅದನ್ನು ಮೀರಿ ಆ ಮನಸ್ಥಿತಿಯಿಂದ ಹೊರಬರುವ ಕತೆಯನ್ನು ಮಾಮನ್ನನ್ ಒಳಗೊಂಡಿದೆ. ದಲಿತ ಶಾಸಕನ ಮಗನ ಪಾತ್ರದಲ್ಲಿ ಉದಯ್ನಿಧಿ ಸ್ಟಾಲಿನ್ ನಟಿಸಿದ್ದಾರೆ. ದಲಿತ ಶಾಸಕನ ಪಾತ್ರದಲ್ಲಿ ಹಿರಿಯ ಹಾಸ್ಯನಟ ವಡಿವೇಲು ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ಫಹಾದ್ ಫಾಸಿಲ್ ಇದ್ದಾರೆ.
ಸಿನಿಮಾ ಹಿಟ್ ಆದಾಗ ನಿರ್ದೇಶಕರಿಗೆ ಉಡುಗೊರೆ ನೀಡುವ ಸಂಪ್ರದಾಯ ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚಾಗಿದೆ. ವಿಕ್ರಂ ಸಿನಿಮಾ ಸೂಪರ್-ಡೂಪರ್ ಹಿಟ್ ಆದಾಗ ಅದರ ನಿರ್ದೇಶಕ ಲೋಕೇಶ್ ಕನಗರಾಜ್ಗೆ ನಿಸ್ಸಾನ್ ಸಂಸ್ಥೆಯ ದುಬಾರಿ ಕಾರನ್ನು ನಟ, ನಿರ್ಮಾಪಕ ಕಮಲ್ ಹಾಸನ್ ಉಡುಗೊರೆಯಾಗಿ ನೀಡಿದ್ದರು. ನಿರ್ದೇಶಕ ತಂಡದಲ್ಲಿದ್ದ ಇತರರಿಗೆ ಟಿವಿಎಸ್ ಅಪಾಚೆ ಬೈಕ್ ಉಡುಗೊರೆಯಾಗಿ ನೀಡಿದ್ದರು. ಅದಾದ ಬಳಿಕ ತಮ್ಮ ಇಂಡಿಯನ್ 2 ಸಿನಿಮಾ ನಿರ್ದೇಶಿಸುತ್ತಿರುವ ಶಂಕರ್ಗೆ ನಾಲ್ಕು ಲಕ್ಷ ಮೌಲ್ಯದ ದುಬಾರಿ ವಾಚ್ ಒಂದನ್ನು ಇತ್ತೀಚೆಗಷ್ಟೆ ಕಮಲ್ ಉಡುಗೊರೆಯಾಗಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ