ಕನ್ನಡ ಸೇರಿ ಹಲವು ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ನಟಿ ವಾಣಿ ಜಯರಾಮ್ (Vani Jayaram) ಅವರು ಇಂದು (ಫೆಬ್ರವರಿ 4) ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಹಣೆಗೆ ಪೆಟ್ಟಾಗಿದ್ದು ಅವರ ಸಾವಿಗೆ ಕಾರಣ ಆಗಿದೆ. ಸದ್ಯ ಅವರ ಸಾವು ಸಾಕಷ್ಟು ಅನುಮಾನ ಮೂಡಿಸಿದೆ. ಇದು ಆಕಸ್ಮಿಕ ಸಾವಲ್ಲ ಕೊಲೆ ಎನ್ನುವ ಅನುಮಾನ ಮೂಡಿದೆ.
ಚೆನ್ನೈನಲ್ಲಿರುವ ನುಂಗಬಾಕಂ ಮನೆಯಲ್ಲಿ ವಾಣಿ ಅವರು ವಾಸವಾಗಿದ್ದರು. ಅವರ ಹಣೆಗೆ ಪೆಟ್ಟು ಬಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಇಂದು ಎಂದಿನಂತೆ ಮನೆ ಕೆಲಸದವಳು ವಾಣಿ ಮನೆಗೆ ತೆರಳಿದ್ದರು. ಡೋರ್ ಲಾಕ್ ಆದ ಕಾರಣ ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೆ, ಒಳಗಡೆ ಇಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣಕ್ಕೆ ಮನೆ ಕೆಲಸದವಳು ಪತಿಯ ಮೊಬೈಲ್ನಿಂದ ವಾಣಿ ಅವರಿಗೆ ಕರೆ ಮಾಡಿದ್ದಾರೆ. ಆದರೂ ಅವರ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ.
ಇದರಿಂದ ಅನುಮಾನಗೊಂಡ ಮನೆಕೆಲಸದವಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದಿದ್ದಾರೆ. ಅಲ್ಲಿ ವಾಣಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಾಣಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ವಾಣಿ ಹಣೆಯ ಮೇಲೆ ದೊಡ್ಡ ಗಾಯ ಆಗಿದೆ. ಮುಖದ ಮೇಲೂ ಗಾಯಗಳು ಇವೆ. ಹೀಗಾಗಿ, ಯಾರಾದರೂ ಅವರನ್ನು ಹೊಡೆದು ಸಾಯಿಸಿದರೇ ಎನ್ನುವ ಅನುಮಾನ ಮೂಡಿದೆ. ಸದ್ಯ ಮನೆ ಕೆಲಸದವಳ ಹೇಳಿಕೆ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಾಣಿ ಮುಖಕ್ಕೆ ಬಿದ್ದಿದ್ದರಿಂದಲೂ ಗಾಯ ಆಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಕೆಲಸದವಳು ಹೇಳುವ ಪ್ರಕಾರ ವಾಣಿ ಆರೋಗ್ಯವಾಗಿಯೇ ಇದ್ದರು. ವಾಣಿ ಅವರು ಜನವರಿ 26ರಂದು ಪದ್ಮ ಭೂಷಣ ಅವಾರ್ಡ್ ಸ್ವೀಕರಿಸಿದ್ದರು. ಇದಕ್ಕಾಗಿ ಅನೇಕರು ಅವರಿಗೆ ವಿಶ್ ಮಾಡುತ್ತಿದ್ದರು.
ಇದನ್ನೂ ಓದಿ: ಗಾನ ನಿಲ್ಲಿಸಿದ ಕೋಗಿಲೆ, ಪದ್ಮ ಭೂಷಣ ವಾಣಿ ಜಯರಾಂ ಇನ್ನಿಲ್ಲ
‘ಪದ್ಮಭೂಷಣ ಬಂದಿರೋದಕ್ಕೆ ಅವರಿಗೆ ಖುಷಿ ಇತ್ತು. ಅನೇಕರು ಕರೆ ಮಾಡಿ ವಿಶ್ ಮಾಡುತ್ತಿದ್ದರು. ಇಡೀ ದಿನ ಅವರಿಗೆ ಕಾಲ್ಗಳು ಬರುತ್ತಲೇ ಇತ್ತು. ಅವರು ಒಂಟಿಯಾಗಿ ವಾಸವಾಗಿದ್ದರು’ ಎಂದು ಕೆಲಸದಾಕೆ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Sat, 4 February 23